ನಡೆದಿರುವ ಒಟ್ಟು 13 ಏಷ್ಯಾಕಪ್ ಟೂರ್ನಿಗಳಲ್ಲಿ ಭಾರತದ ನಾಯಕರಾಗಿದ್ದವರು ಯಾರು? ಗೆದ್ದವರೆಷ್ಟು?

ಇದೇ ತಿಂಗಳ ಕೊನೆಯ ವಾರದಲ್ಲಿ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ಆರಂಭವಾಗಲಿದ್ದು, ಯುಎಇ ನೆಲದಲ್ಲಿ ಈ ಟೂರ್ನಿ ನಡೆಯಲಿದೆ. ಹೌದು, ಶ್ರೀಲಂಕಾ ನೆಲದಲ್ಲಿ ನಡೆಯಬೇಕಿದ್ದ ಈ ಬಾರಿಯ ಏಷ್ಯಾಕಪ್ ಟೂರ್ನಿ ಅಲ್ಲಿನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಯುಎಇಗೆ ಸ್ಥಳಾಂತರಿಸಲ್ಪಟ್ಟಿದ್ದು, ಆಗಸ್ಟ್ 27ರಿಂದ ಸೆಪ್ಟೆಂಬರ್ 11ರವರೆಗೆ ಪಂದ್ಯಗಳು ಜರುಗಲಿವೆ.
ಇನ್ನು ಕಳೆದ ಬಾರಿ 2018ರಲ್ಲಿ ನಡೆದಿದ್ದ ಏಷ್ಯಾಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಟೀಂ ಇಂಡಿಯಾಕ್ಕೆ ರೋಹಿತ್ ಶರ್ಮಾ ನಾಯಕತ್ವವಿತ್ತು. ಆವೃತ್ತಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಜಯ ಸಾಧಿಸಿದ್ದ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಸದ್ಯ ಹಾಲಿ ಚಾಂಪಿಯನ್ ಆಗಿದ್ದು, ಈ ಬಾರಿಯ ಟೂರ್ನಿಯಲ್ಲಿಯೂ ಸಹ ಟ್ರೋಫಿ ಗೆಲ್ಲುವ ಮೂಲಕ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.
ಅದರಲ್ಲಿಯೂ ಕಳೆದ ಬಾರಿಯ ಟೂರ್ನಿಯಲ್ಲಿ ರೋಹಿತ್ ಶರ್ಮ ನಾಯಕತ್ವದಡಿಯಲ್ಲಿ ಯಶಸ್ವಿಯಾಗಿದ್ದ ಟೀಮ್ ಇಂಡಿಯಾ ಈ ಬಾರಿಯೂ ಸಹ ರೋಹಿತ್ ಶರ್ಮಾ ನಾಯಕತ್ವದಲ್ಲಿಯಲ್ಲಿಯೇ ಕಣಕ್ಕಿಳಿಯಲಿದ್ದು, ಟ್ರೋಫಿ ಗೆಲ್ಲುವ ಫೇವರಿಟ್ ತಂಡ ಎಂದು ಗುರುತಿಸಿಕೊಂಡಿದೆ. ಇನ್ನು 1984ರಲ್ಲಿ ಆರಂಭವಾಗಿರುವ ಏಷ್ಯಾಕಪ್ ಟೂರ್ನಿಯ 14ನೇ ಆವೃತ್ತಿ ಈ ಬಾರಿ ನಡೆಯಲಿದ್ದು, ಕಳೆದ ಬಾರಿ ನಡೆದ ಟೂರ್ನಿಯವರೆಗೂ ಒಟ್ಟು 13 ಆವೃತ್ತಿಗಳು ಜರುಗಿವೆ. ಹೀಗೆ ಈ ಆವೃತ್ತಿಗಳಲ್ಲಿ ಭಾರತ ತಂಡವನ್ನು ಯಾವ ನಾಯಕರು ಮುನ್ನಡೆಸಿದ್ದಾರೆ ಹಾಗೂ ಆವೃತ್ತಿಗಳ ಫಲಿತಾಂಶವೇನು ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ.

ಏಷ್ಯಾಕಪ್ ಟೂರ್ನಿಗಳ ಭಾರತದ ನಾಯಕರು ಮತ್ತು ಫಲಿತಾಂಶದ ಪಟ್ಟಿ
1984 - ಸುನಿಲ್ ಗವಾಸ್ಕರ್ - ಟೀಮ್ ಇಂಡಿಯಾ ಚಾಂಪಿಯನ್
1988 - ವೆಂಗ್‌ಸರ್ಕಾರ್ ನಾಯಕ - ಟೀಮ್ ಇಂಡಿಯಾ ಚಾಂಪಿಯನ್
1991 - ಅಜರುದ್ದೀನ್ ನಾಯಕ ಟೀಮ್ ಇಂಡಿಯಾ ಚಾಂಪಿಯನ್
1995 - ಅಜರುದ್ದೀನ್ ನಾಯಕ - ಟೀಮ್ ಇಂಡಿಯಾ ಚಾಂಪಿಯನ್
1997 - ಸಚಿನ್ ತೆಂಡೂಲ್ಕರ್ ನಾಯಕ - ಈ ಆವೃತ್ತಿಯಲ್ಲಿ ಟೀಮ್ ಇಂಡಿಯಾ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋತು ರನ್ನರ್ ಅಪ್ ಆಗಿತ್ತು.
2000 - ಸೌರವ್ ಗಂಗೂಲಿ ನಾಯಕ - ಟೀಮ್ ಇಂಡಿಯಾ ಲೀಗ್ ಹಂತದಲ್ಲೇ ಹೊರಬಿದ್ದಿತ್ತು.
2004 - ಸೌರವ್ ಗಂಗೂಲಿ ಎರಡನೇ ಬಾರಿಗೆ ನಾಯಕ - ಟೀಮ್ ಇಂಡಿಯಾ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲನ್ನು ಅನುಭವಿಸಿ ರನ್ನರ್ ಅಪ್ ಆಗಿತ್ತು.
2008 - ಎಂಎಸ್ ಧೋನಿ ನಾಯಕ - ಟೀಮ್ ಇಂಡಿಯಾ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋತು ರನ್ನರ್ ಅಪ್ ಆಗಿತ್ತು.
2010 - ಎರಡನೇ ಬಾರಿಗೆ ಎಂಎಸ್ ಧೋನಿ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಭಾರತ ಚಾಂಪಿಯನ್ ಆಗಿತ್ತು.
2012 - ಮೂರನೇ ಬಾರಿಗೆ ಎಂ ಎಸ್ ಧೋನಿ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಭಾರತ ಫೈನಲ್ ಪ್ರವೇಶಿಸದೇ ಸೋತಿತ್ತು.
2014 - ಎಂಎಸ್ ಧೋನಿ ಅಲಭ್ಯತೆಯಲ್ಲಿ ವಿರಾಟ್ ಕೊಹ್ಲಿ ನಾಯಕ - ಭಾರತ ಫೈನಲ್ ಪ್ರವೇಶಿಸದೇ ಸೋಲನ್ನುಂಡಿತ್ತು.
2016 - ಎಂಎಸ್ ಧೋನಿ ನಾಯಕತ್ವದಡಿಯಲ್ಲಿ ನಾಲ್ಕನೇ ಬಾರಿಗೆ ಕಣಕ್ಕಿಳಿದಿದ್ದ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
2018 - ವಿರಾಟ್ ಕೊಹ್ಲಿ ಅಲಭ್ಯತೆಯಲ್ಲಿ ರೋಹಿತ್ ಶರ್ಮಾ ನಾಯಕ - ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಭಾರತ 7 ಬಾರಿ ಚಾಂಪಿಯನ್
ಏಷ್ಯಾಕಪ್ ಟೂರ್ನಿ ಆರಂಭವಾದ ಮೊದಲ 4 ವರ್ಷಗಳಲ್ಲಿ ಸತತವಾಗಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಟೀಮ್ ಇಂಡಿಯಾ ಎಂಎಸ್ ಧೋನಿ ನಾಯಕತ್ವದಡಿಯಲ್ಲಿ 2 ಬಾರಿ ಹಾಗೂ ಕಳೆದ ಬಾರಿಯ ಆವೃತ್ತಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಒಟ್ಟು 7 ಬಾರಿ ಏಷ್ಯಾ ಕಪ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಈ ಮೂಲಕ ಏಷ್ಯಾ ಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡ ಎಂಬ ಕೀರ್ತಿಗೆ ಟೀಂ ಇಂಡಿಯಾ ಪಾತ್ರವಾಗಿದೆ.

ನಾಯಕರಾಗಿ ಸೋತವರು
ಇನ್ನು ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿರಾಟ್ ಕೊಹ್ಲಿ ಈ ಮೂವರು ನಾಯಕರು ಏಷ್ಯಾಕಪ್ ಟೂರ್ನಿಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿ ಯಶಸ್ವಿಯಾಗುವಲ್ಲಿ ವಿಫಲರಾಗಿದ್ದಾರೆ. ಸೌರವ್ ಗಂಗೂಲಿ 2 ಬಾರಿ ನಾಯಕನಾಗಿ ಏಷ್ಯಾ ಕಪ್ ಗೆಲ್ಲುವಲ್ಲಿ ಸೋತರೆ, ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ತಲಾ ಒಂದೊಂದು ಆವೃತ್ತಿಯಲ್ಲಿ ವಿಫಲರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications