ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆಯಲಿದ್ದಾರಾ? ಹೀಗೊಂದು ಸುದ್ದಿ ಜೋರಾಗಿ ಹರಡುತ್ತಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆದು ಗೌತಮ್ ಗಂಭೀರ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸೇರಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿಗೆ ಪೂರಕವಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕರೂ ಆಗಿರುವ ಶಾರೂಖ್ ಖಾನ್ ಅವರನ್ನು ಗಂಭೀರ್ ಭೇಟಿಯಾಗಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.
ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ನಿತೀಶ್ ರಾಣಾ ಮಾಡಿರುವ ಟ್ವೀಟ್ ಈ ಸುದ್ದಿಗೆ ಮತ್ತಷ್ಟು ರೆಕ್ಕೆಪುಕ್ಕಗಳು ಸೇರಿಕೊಳ್ಳುವಂತೆ ಮಾಡಿದೆ. ಶಾರೂಕ್ ಖಾನ್ ಅವರನ್ನು ಗೌತಮ್ ಗಂಭೀರ್ ಭೇಟಿಯಾಗಿರುವ ಟ್ವೀಟ್ ಹಂಚಿಕೊಂಡಿರುವ ನಿತೀಶ್ ರಾಣಾ ತಮ್ಮಲ್ಲಿನ ಕುತೂಹಲವನ್ನು ಕೂಡ ಹಂಚಿಕೊಂಡಿದ್ದಾರೆ. "ಇದು ತವರಿಗೆ ಮರಳುವ ಮುನ್ಸೂಚನೆಯಾ?" ಎಂದು ಟ್ವೀಟ್ ಮಾಡುವ ಮೂಲಕ ನಿತೀಶ್ ರಾಣಾ ಕುತೂಹಲ ಹೆಚ್ಚಿಸಿದ್ದಾರೆ.

ಕಳೆದ ಕೆಲ ತಿಂಗಳಿನಿಂದಲೂ ಗೌತಮ್ ಗಂಭೀರ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಕೋಚ್ ಅಥವಾ ಮೆಂಟರ್ ಆಗಿ ಸೇರಿಕೊಳ್ಳಲಿದ್ದಾರೆ ಎನ್ನುವ ಸುದ್ದು ಜೋರಾಗಿಯೇ ಹರಿದಾಡುತ್ತಿದೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ನಿತೀಶ್ ರಾಣಾ ಅವರೇ ದೊಡ್ಡ ಸುಳಿವು ಬಿಟ್ಟುಕೊಟ್ಟಂತಾಗಿದೆ.
ಪ್ರಸ್ತುತ ಹಾಲಿ ಸಂಸದರೂ ಆಗಿರುವ ಗೌತಮ್ ಗಂಭೀರ್ ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ದೊಡ್ಡ ಯಶಸ್ಸು ಸಾಧಿಸಿದ್ದಾರೆ. ಗೌತಮ್ ಗಂಭಿರ್ ನಾಯಕಯತ್ವದಲ್ಲಿಯೇ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿತ್ತು. 2012 ಹಾಗೂ 2014ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ ಟ್ರೋಫಿಯನ್ನು ಗೌತಮ್ ಗಂಭೀರ್ ನಾಯಜತ್ವದಲ್ಲಿಯೇ ಎತ್ತಿ ಹಿಡಿದಿತ್ತು.
ಜಾಗರಣ್ ನ್ಯೂಸ್ ವರದಿಯ ಪ್ರಕಾರ ಕೊಲ್ಕತ್ತಾ ನೈಟ್ ರೈಡರ್ಸ್ ಸಹ ಮಾಲೀಕ ಶಾರೂಖ್ ಖಾನ್ ಅವರ ಮನೆಯಲ್ಲಿಯೇ ಗೌತಮ್ ಗಂಭೀರ್ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ತಂಡದಲ್ಲಿ ತನ್ನ ಪಾತ್ರದ ಬಗ್ಗೆ ಇಬ್ಬರು ಕೂಡ ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.