
ನವದೆಹಲಿ, ಮೇ 4: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕುರಿತು ಹೇಳಿಕೆಯೊಂದು ನೀಡಿ ಕಾಲೆಳೆದಿದ್ದರು. ಇದಕ್ಕೆ ಗಂಭೀರ್ ಖಾರವಾಗೇ ತಿರುಗೇಟು ನೀಡಿದ್ದಾರೆ. ನಿನ್ನನ್ನೇ ನಾನು ಮನೋವೈದ್ಯರ ಬಳಿ ಕರೆದುಕೊಂಡು ಹೋಗುತ್ತೇನೆ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.
ಅಫ್ರಿದಿ ಇತ್ತೀಚೆಗೆ 'ಗೇಮ್ ಚೇಂಜರ್' ಎಂಬ ಹೆಸರಿನ ತನ್ನ ಆತ್ಮಚರಿತ್ರೆ ಕೃತಿಯನ್ನು ಬಿಡುಗಡೆಗೊಳಿಸಿದ್ದರು. ಇದರಲ್ಲಿ 'ಗಂಭೀರ್, ಡಾನ್ ಬ್ರಾಡ್ಮನ್ ಮತ್ತು ಜೇಮ್ಸ್ ಬಾಂಡ್ ನಡುವಿನ ವರ್ತನೆ ತೋರುತ್ತಾರೆ, ಅಲ್ಲದೆ ಬಹಳ ಅಹಂ ಇರುವ ಗಂಭೀರ್ ಅವರದ್ದು ಶ್ರೇಷ್ಠ ಸಾಧನೆಯೇನೂ ಇಲ್ಲ' ಎಂಬಂತೆ ಬರೆದುಕೊಂಡಿದ್ದರು.
ಇದಕ್ಕೆ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಗಂಭೀರ್ ಪ್ರತಿಕ್ರಿಯಿಸಿದ್ದಾರೆ. 'ನೀನೊಬ್ಬ ಹಾಸ್ಯಾಸ್ಪದ ವ್ಯಕ್ತಿ! ಏನೇ ಇರಲಿ, ವೈದ್ಯಕೀಯ ಪ್ರವಾಸೋದ್ಯಮದ ಮೂಲಕ ನಿಂಗೆ ವೀಸಾ ಕೊಡಿಸುತ್ತೇವೆ. ನಾನೇ ಖುದ್ದಾಗಿ ನಿನ್ನನ್ನು ಸೈಕಿಯಾಟ್ರಿಸ್ಟ್ (ಮನೋವೈದ್ಯ) ಬಳಿ ಕರೆದೊಯ್ಯುತ್ತೇನೆ' ಎಂದು ಗಂಭೀರ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.
ಮೈದಾನ ಮತ್ತು ಮೈದಾನದ ಹೊರತಾಗಿಯೂ ಗಂಭೀರ್ ಮತ್ತು ಅಫ್ರಿದಿ ಇಬ್ಬರೂ ಉತ್ತಮ ಬಾಂಧವ್ಯ ಹೊಂದಿರಲಿಲ್ಲ. 2007ರಲ್ಲಿ ಕಾನ್ಪುರ್‌ನಲ್ಲಿ ನಡೆದಿದ್ದ ಏಷ್ಯಕಪ್ ನಲ್ಲಿ ಭಾರತ vs ಪಾಕಿಸ್ತಾನ ಮುಖಾಮುಖಿಯಲ್ಲಿ ಜಗಳವಾಡಿಕೊಂಡಿದ್ದಕ್ಕಾಗಿ ಇಬ್ಬರಿಗೂ ಐಸಿಸಿ ಶಿಕ್ಷೆ ವಿಧಿಸಿತ್ತು.