ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಗೇಲ್ ಬದಲು ದೈತ್ಯನನ್ನು ಕರೆತಂದ ವಿಂಡೀಸ್!

ಸೇಂಟ್ ಜಾನ್ಸ್ (ಆಂಟಿಗುವಾ), ಆಗಸ್ಟ್ 11: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಮಹತ್ವಾಕಾಂಕ್ಷೀಯ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಅಭಿಯಾನ ಆರಂಭಿಸಲು ಎದುರು ನೋಡುತ್ತಿವೆ. ಇದೇ ವೇಳೆ ಭಾರತ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ವಿಂಡೀಸ್ ತಂಡ ಪ್ರಕಟಿಸಿದ್ದು, ಕ್ರಿಸ್ ಗೇಲ್ ಅವರನ್ನು ಕೈ ಬಿಟ್ಟು ಅಚ್ಚರಿ ಮೂಡಿಸಿದೆ.
ಕಳೆದ ತಿಂಗಳು ಅಂತ್ಯಗೊಂಡ ಏಕದಿನ ವಿಶ್ವಕಪ್ ವೇಳೆ ನಿವೃತ್ತಿ ಕುರಿತಾಗಿ ಮಾತನಾಡಿದ್ದ ಗೇಲ್, ಭಾರತ ವಿರುದ್ಧದ ಟೆಸ್ಟ್ ಸರಣಿ ಬಳಿಕ ವಿದಾಯ ಹೇಳುವುದಾಗಿ ತಿಳಿಸಿದ್ದರು. ಗೇಲ್, ವಿಂಡೀಸ್ ಪರ ಕೊನೆಯ ಬಾರಿ ಟೆಸ್ಟ್ ಆಡಿರುವುದು 2014ರ ಸೆಪ್ಟೆಂಬರ್‌ನಲ್ಲಿ.
ಇದೇ ವೇಳೆ 39 ವರ್ಷದ ಅನುಭವಿ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ತಂಡ ದೈತ್ಯ ಆಲ್‌ರೌಂಡರ್ ಒಬ್ಬನಿಗೆ ಸ್ಥಾನ ನೀಡಿದೆ. ಬರೋಬ್ಬರಿ 140 ಕೆಜಿ ತೂಕದ ರಹ್ಕೀಮ್ ಕಾರ್ನ್‌ವಾಲ್ ವೆಸ್ಟ್ ಇಂಡೀಸ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಆಫ್‌ಸ್ಪಿನ್ ಜೊತೆಗೆ ಬಲಗೈ ಬ್ಯಾಟ್ಸ್‌ಮನ್ ಕೂಡ ಆಗಿರುವ ರಹ್ಕೀಮ್, ಭಾರತ ವಿರುದ್ಧದ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದರೆ ಟೆಸ್ಟ್ ಕ್ರಿಕೆಟ್ ಆಡಿದ ಅತ್ಯಂತ ತೂಕದ ವ್ಯಕ್ತಿ ಎನಿಸಿಕೊಳ್ಳಲಿದ್ದಾರೆ.
1920ರ ದಶಕದಲ್ಲಿ ಅಸ್ಟ್ರೇಲಿಯಾ ತಂಡದ ನಾಯಕ ವಾವ್ರಿಕ್ ಆರ್ಮ್‌ಸ್ಟ್ರಾಂಗ್ (139 ಕೆ.ಜಿ) ಟೆಸ್ಟ್ ಕ್ರಿಕೆಟ್ ಆಡಿದ ಅತ್ಯಂತ ತೂಕದ ವ್ಯಕ್ತಿ ಎಂಬ ದಾಖಲೆಯನ್ನು ಹೊಂದಿದ್ದಾರೆ. ಒಂದು ಶತಮಾನದ ಬಳಿಕ ಆರ್ಮ್‌ಸ್ಟ್ರಾಂಗ್ ಅವರ ಈ ಅತಿ ಅಪರೂಪದ ದಾಖಲೆಯನ್ನು ಅಳಿಸಿಹಾಕುವ ಅವಕಾಶ ಕಾರ್ನ್‌ವಾಲ್ ಕೈಲಿದೆ.
ಕಾರ್ನ್‌ವಾಲ್ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 55 ಪಂದ್ಯಗಳನ್ನು ಆಡಿದ್ದು, ಒಟ್ಟಾರೆ 260 ವಿಕೆಟ್‌ಗಳನ್ನು ಉರುಳಿಸಿದ್ದಾರೆ. "ರಹ್ಕೀಮ್, ದೇಶಿ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತಿದ್ದು, ಮ್ಯಾಚ್ ವಿನ್ನರ್ ಎನಿಸಿಕೊಂಡಿದ್ದಾರೆ. ಹೀಗಾಗಿ ಟೆಸ್ಟ್ ತಂಡಕ್ಕೆ ಬಲ ತುಂಬಲು ಅವರನ್ನು ಆಯ್ಕೆ ಮಾಡಲಾಗಿದೆ," ಎಂದು ವೆಸ್ಟ್ ಇಂಡೀಸ್ ತಂಡದ ಮುಖ್ಯ ಕೋಚ್ ರಾಬರ್ಟ್ ಹಾಯ್ನೆಸ್ ಹೇಳಿದ್ದಾರೆ.
ಇದೇ ವರ್ಷ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಗೆಲುವು ದಾಖಲಿಸಿದ ಸಂದರ್ಭದಲ್ಲಿ ತಂಡದಲ್ಲಿದ್ದ ಅಲ್ಜಾರಿ ಜೋಸೆಫ್ ಕೂಡ ವಿಂಡೀಸ್ ತಂಡದಲ್ಲಿ ಮರಳಿ ಸ್ಥಾನ ಪಡೆದುಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಭರ್ಜರಿ ಪ್ರದರ್ಶನ ನೀಡಿದ್ದ ಜೋಸೆಫ್, ಸದ್ಯ ಗಾಯದ ಸಮಸ್ಯೆಯಿಂದ ಚೇತರಿಸುತ್ತಿದ್ದಾರೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 22ರಂದು ಆರಂಭವಾಗಲಿದೆ.
ಭಾರತ ವಿರುದ್ಧದ ಟೆಸ್ಟ್ ಸರಣಿಗೆ ವೆಸ್ಟ್ ಇಂಡೀಸ್ ತಂಡ ಇಂತಿದೆ
ಜೇಸನ್ ಹೋಲ್ಡರ್ (ನಾಯಕ), ಕ್ರೇಗ್ ಬ್ರಾತ್‌ವೇಟ್, ಡರೆನ್ ಬ್ರಾವೊ, ಶಮ್ರಾಹ್ ಬ್ರೂಕ್ಸ್, ಜಾನ್ ಕ್ಯಾಂಪ್‌ಬೆಲ್, ರಾಸ್ಟನ್ ಚೇಸ್, ರಹ್ಕೀಮ್ ಕಾರ್ನ್‌ವಾಲ್, ಶೇನ್ ಡೌರಿಚ್(ವಿಕೆಟ್‌ಕೀಪರ್), ಶನಾನ್ ಗೇಬ್ರಿಯಲ್, ಶಿಮ್ರಾನ್ ಹೆಟ್ಮಾಯೆರ್, ಶೇಯ್ ಹೋಪ್, ಕೀಮೊ ಪೌಲ್, ಕೆಮಾರ್ ರೋಚ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications