ದುಬೈ: ಭರವಸೆಯ ಆಟಗಾರ ಆರನ್ ಜಾರ್ಜ್ (85 ರನ್) ಬಾರಿಸಿದ ಅರ್ಧಶತಕ ಹಾಗೂ ಕನಿಷ್ಕ್ ಚೌಹಾಣ್ ಅವರ ಭರ್ಜರಿ ಆಟದ ನೆರವಿನಿಂದ ಟೀಮ್ ಇಂಡಿಯಾ ಅಂಡರ್ 19 ಏಷ್ಯಾ ಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ 90 ರನ್‌ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿದೆ. ಈ ಮೂಲಕ ಭಾರತ "ಎ" ಗುಂಪಿನಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಅಗ್ರ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಪಾಕಿಸ್ತಾನ ಈ ಪಂದ್ಯದಲ್ಲಿ ಸೋತರೂ ಎರಡನೇ ಸ್ಥಾನದಲ್ಲಿದೆ.
ಭಾರತ ಈ ಪಂದ್ಯದಲ್ಲಿ ಸ್ಪರ್ಧಾತ್ಮಕ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಸಫಲವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಸ್ಟಾರ್ ಆರಂಭಿಕ ಆಟಗಾರ ವೈಭವ್ ಸುರ್ಯವಂಶಿ (5) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ನಾಯಕ ಆಯುಷ್ ಮಾತ್ರೆ ಹಾಗೂ ಆರನ್ ಜಾರ್ಜ್ ಜೋಡಿ ಕೊಂಚ ತಂಡಕ್ಕೆ ಆಧಾರವಾಯಿತು. ಈ ಜೋಡಿ 40 ಎಸೆತಗಳಲ್ಲಿ 49 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ನಾಯಕ ಆಯುಷ್ ಮಾತ್ರೆ 38 ರನ್ ಬಾರಿಸಿ ಔಟ್ ಆದರು.

ಮಧ್ಯಮ ಕ್ರಮಾಂಕದಲ್ಲಿ ವಿಹಾನ್ ಮಲೋತ್ರಾ 12, ವೇದಾಂತ್ ತ್ರಿವೇದಿ 7, ಅಭಿಗ್ಯಾನ್ ಕುಂಡು 22 ರನ್ ಸಿಡಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಆರನ್ ಜಾರ್ಜ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಇವರು 88 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಸಹಾಯದಿಂದ 85 ರನ್ ಬಾರಿಸಿ ಔಟ್ ಆದರು. ಇವರು ಆರನೇ ವಿಕೆಟ್‌ಗೆ ಅಭಿಗ್ಯಾನ್ ಕುಂಡು ಅವರ ಜೊತೆಗೂಡಿ 60 ಸೇರಿಸಿದರು.
ಕನಿಷ್ಕ್ ಚೌಹಾಣ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 46 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ 46 ರನ್ ಬಾರಿಸಿದರು. ಅಂತಿಮವಾಗಿ ಭಾರತ 46.1 ಓವರ್‌ಗಳಲ್ಲಿ 240 ರನ್‌ಗಳಿಗೆ ಆಲೌಟ್ ಆಯಿತು. ಪಾಕ್ ತಂಡದ ಪರ ಮೊಹಮ್ಮದ್ ಸಯ್ಯಮ್, ಅಬ್ದುಲ್ ಸುಭಾನ್ ತಲಾ ಮೂರು ವಿಕೆಟ್ ಪಡೆದರು.
ಗುರಿಯನ್ನು ಹಿಂಬಾಲಿಸಿದ ಪಾಕಿಸ್ತಾನ ತಂಡದ ಆರಂಭ ಕಳಪೆಯಾಗಿತ್ತು. ಭಾರತದ ಪರ ಉಸ್ಮಾನ್ ಖಾನ್ (16), ನಾಯಕ ಫರಾನ್ ಯೂಸುಫ್ (23) ಡಬಲ್ ಡಿಜಿಟ್ ಮುಟ್ಟಿದರು. ಮಧ್ಯಮ ಕ್ರಮಾಂಕದಲ್ಲಿ ಹುಜೈಫಾ ಅಹ್ಸಾನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೂ ತಂಡಕ್ಕೆ ಜಯದ ಮಾಲೆ ತೊಡಿಸಲಿಲ್ಲ. ಇವರು 83 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಾಯದಿಂದ 70 ರನ್ ಬಾರಿಸಿದರು. ಅಂತಿಮವಾಗಿ ಪಾಕಿಸ್ತಾನ 41.2 ಓವರ್‌ಗಳಲ್ಲಿ 150 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಕನಿಷ್ಕ್ ಚೌಹಾಣ್ ಹಾಗೂ ದೀಪೇಶ್ ದೇವೇಂದ್ರನ್ ತಲಾ 3 ವಿಕಟ್ ಕಬಳಿಸಿದರು. ಪಂದ್ಯದಲ್ಲಿ ಸ್ಥಿರ ಆಲ್‌ರೌಂಡರ್ ಆಟದ ಪ್ರದರ್ಶನ ನೀಡಿದ ಕನಿಷ್ಕ್ ಚೌಹಾಣ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.