ಭಾರತ ಸದ್ಯ ಆಸ್ಟ್ರೇಲಿಯಾ ಪ್ರವಾಸವನ್ನು ಬೆಳೆಸಿದೆ. ಈ ವೇಳೆ ಟೀಮ್ ಇಂಡಿಯಾ ಮೊದಲ ಪಂದ್ಯವನ್ನು ಪರ್ತ್‌ನಲ್ಲಿ ಆಡಿತು. ಈ ವೇಳೆ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ಸೋಲು ಕಂಡಿದೆ. ಭಾರತ ತಂಡವನ್ನು ಈ ಸರಣಿಯಲ್ಲಿ ಶುಭಮನ್ ಗಿಲ್ ಮುನ್ನಡೆಸುತ್ತಿದ್ದಾರೆ. ಈ ಪಂದ್ಯದಲ್ಲಿ ಶುಭಮನ್ ಗಿಲ್ ಅಂಗಳಕ್ಕೆ ಇಳಿಯುತ್ತಲೇ ಹೊಸ ಇತಿಹಾಸವನ್ನು ಬರೆದರು.
ಟೀಮ್ ಇಂಡಿಯಾದ ನಾಯಕನಾಗಿ ಮೊದಲ ಪಂದ್ಯವನ್ನು ಆಡಿದ ಗಿಲ್ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಅಲ್ಲದೆ ಟಾಸ್ ಹಾಗೂ ಪಂದ್ಯವನ್ನು ಸೋತು ನಿರಾಸೆ ಅನುಭವಿಸಿದರು. ರೋಹಿತ್ ಶರ್ಮಾ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಗಿಲ್, ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ. ತಮ್ಮ ಬ್ಯಾಟಿಂಗ್ ಮೂಲಕ ರನ್‌ಗಳನ್ನು ಕಲೆ ಹಾಕಿ ದಾಖಲೆಯನ್ನು ಬರೆಯುವ ಕನಸುನ್ನು ಹೊಂದಿದ್ದ ಗಿಲ್ ನಿರಾಸೆ ಅನುಭವಿಸಿದರು. ಆದರೆ ನಾಯಕನಾಗಿ ಶುಭಮನ್ ಗಿಲ್ ಪಡೆ ಹೊಸ ಇತಿಹಾಸವನ್ನು ಬರೆದರು.

ಟೀಮ್ ಇಂಡಿಯಾವನ್ನು ಮೂರು ಫಾರ್ಮೆಟ್‌ಗಳಲ್ಲಿ ಮುನ್ನಡೆಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಟೆಸ್ಟ್, ಏಕದಿನ, ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ ಅತ್ಯಂತ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರು 26 ವರ್ಷ 41 ದಿನಗಳಲ್ಲಿ ಭಾರತ ತಂಡವನ್ನು ಮೂರು ಫಾರ್ಮೆಟ್‌ನಲ್ಲಿ ಮುನ್ನಡೆಸಿದ ದಾಖಲೆ ಹೊಂದಿದ್ದಾರೆ. ಈ ಮೂಲಕ ಇವರು ಧೋನಿಯ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಧೋನಿ 26 ವರ್ಷ 279 ದಿನಗಳಲ್ಲಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ತಂಡವನ್ನು ಮುನ್ನಡೆಸಿದ್ದರು. ಇನ್ನು ಈ ಪಟ್ಟಿಯಲ್ಲಿ ವೀರೇಂದ್ರ ಸೆಹ್ವಾಗ್ ಮೂರನೇ ಸ್ಥಾನದಲ್ಲಿದ್ದಾರೆ. ಇವರು 28 ವರ್ಷ 43 ದಿನಗಳಲ್ಲಿ ಈ ಸಾಧನೆ ಮಾಡಿದ್ದರು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ಮಳೆ ಬಾಧಿತ ಪಂದ್ಯದಲ್ಲಿ ನೀರಸ ಆರಂಭವನ್ನು ಕಂಡಿತು. ಸತತ ಮಳೆ ಕಾಟ ನೀಡಿದ್ದರಿಂದ ಪಂದ್ಯವನ್ನು 26 ಓವರ್‌ಗಳಿಗೆ ಇಳಿಸಲಾಯಿತು. ಮೊದಲು ಬ್ಯಾಟ್ ಮಾಡಿದ ಭಾರತ 26 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 136 ರನ್ ಕಲೆ ಹಾಕಿತು. ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿದ್ದರಿಂದ ತಂಡ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕುವಲ್ಲಿ ಸಫಲವಾಯಿತು. ಇನ್ನು ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 21.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 131 ರನ್ ಸಿಡಿಸಿ ಜಯ ಸಾಧಿಸಿತು.