ಟೀಮ್ ಇಂಡಿಯಾದ ನಾಯಕ ಶುಭ್‌ಮನ್ ಗಿಲ್ ಬರ್ಮಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ ಇತಿಹಾಸ ಬರೆದಿದ್ದಾರೆ. ಇವರು ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನ ಎರಡನೆ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದರು. ಈ ಮೂಲಕ ಹಲವು ದಾಖಲೆಗಳನ್ನು ಬರೆದರು. ಶುಭಮನ್ ಗಿಲ್ ಅವರ ಮನಮೋಹಕ ಬ್ಯಾಟಿಂಗ್ ನೆರವಿನಿಂದ ಟೀಮ ಇಂಡಿಯಾ ಸವಾಲಿನ ಮೊತ್ತವನ್ನು ಕಲೆ ಹಾಕುವಲ್ಲಿ ನೆರವಾಯಿತು. ಶುಭಮನ್ ಗಿಲ್ 161 ರನ್ ಬಾರಿಸಿ ಮಿಂಚಿದರು. ಈ ಮೂಲಕ ಒಂದೇ ಪಂದ್ಯದಲ್ಲಿ ಶುಭಮನ್ ಗಿಲ್ 10 ದಾಖಲೆಗಳನ್ನು ಬರೆದರು.
ನಾಲ್ಕನೇ ದಿನದಾಟವಾದ ಶನಿವಾರ ಟೀಮ್ ಇಂಡಿಯಾ ಎರಡನೇ ಇನಿಂಗ್ಸ್‌ನ್ನು 1 ವಿಕೆಟ್ ನಷ್ಟಕ್ಕೆ 64 ರನ್‌ಗಳಿಂದ ಮುಂದುವರೆಸಿತು. ಈ ವೇಳೆ ಕರುಣ್ ನಾಯರ್ ಸಿಕ್ಕ ಅವಕಾಶವನ್ನು ಬಲಸಿಕೊಂಡು ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಕರುಣ್ ನಾಯರ್ 26 ರನ್‌ಗಳಿಗೆ ಔಟ್ ಆಗುತ್ತಿದ್ದಂತೆ, ನಾಯಕ ಶುಭಮನ್ ಗಿಲ್ ಕ್ರೀಸ್‌ಗೆ ಬಂದರು. ಗಿಲ್ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿ ಅಬ್ಬರಿಸಿದ್ದರು. ಇದೇ ಅಮೋಘ ಫಾರ್ಮ್‌ನ್ನು ಎರಡನೇ ಇನಿಂಗ್ಸ್‌ನಲ್ಲೂ ಶುಭಮನ್ ಗಿಲ್ ಮುಂದುವರೆಸಿದರು. ಅಲ್ಲದೆ 10 ದಾಖಲೆಗಳಿಗೆ ತಮ್ಮ ಹೆಸರು ನಮೂದಿಸಿದರು.

1) ಎರಡನೇ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಶತಕ ಬಾರಿಸುತ್ತಿದ್ದಂತೆ, ಒಂದೇ ಟೆಸ್ಟ್‌ನಲ್ಲಿ 430 ರನ್ ಬಾರಿಸಿದ ಭಾರತದ ನಾಯಕ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಈ ಮೊದಲು ಈ ದಾಖಲೆ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿತ್ತು. ವಿರಾಟ್ 293 ರನ್ ಬಾರಿಸಿದ್ದರು.
2) ಒಂದೇ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಭಾರತೀಯ ಆಟಗಾರ ಎಂಬ ರೆಕಾರ್ಡ್ ಸಹ ಗಿಲ್ ಬರೆದರು. ಈ ಮೊದಲು ಒಂದೆ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಭಾರತೀ ಆಟಗಾರ ಎಂಬ ಹಿರಿಮೆ ಸುನಿಲ್ ಗವಾಸ್ಕರ್ ಅವರದ್ದಾಗಿತ್ತು. ಇವರು 344 ರನ್ ಬಾರಿಸಿದ್ದರು.
3) ಶುಭಮನ್ ಗಿಲ್ ಎರಡು ಟೆಸ್ಟ್ ಪಂದ್ಯಗಳ ನಾಲ್ಕು ಇನಿಂಗ್ಸ್‌ಗಳಲ್ಲಿ 585 ರನ್ ಬಾರಿಸುವ ಮೂಲಕ, ನಾಯಕನಾಗಿ ಮೊದಲ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಹಿರಿಮೆ ಹೊಂದಿದರು. ಈ ಮೊದಲು ಈ ದಾಖಲೆ ವಿರಾಟ್ ಕೊಹ್ಲಿ 449 ರನ್ ಬಾರಿಸಿದ್ದರು.
4) ಶುಭಮನ್ ಗಿಲ್ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ ಭಾರತದ ಎರಡನೇ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾದರು. ಈ ಮೊದಲು ಈ ಹಿರಿಮೆ ಸುನಿಲ್ ಗವಾಸ್ಕರ್ (250, 150) ಹೆಸರಿನಲ್ಲಿತ್ತು.
5) ಒಂದೇ ಟೆಸ್ಟ್ ಪಂದ್ಯದಲ್ಲಿ 400ಕ್ಕೂ ಹೆಚ್ಚು ರನ್ ಬಾರಿಸಿದ ವಿಶ್ವದ ನಾಲ್ಕನೇ ಆಟಗಾರ ಎಂಬ ಹಿರಿಮೆ ಇವರದ್ದಾಗಿದೆ.
6) ಶುಭಮನ್ ಗಿಲ್ 269 ರನ್ ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಬಾರಿಸಿದ ಏಳನೇ ಅಧಿಕ ರನ್.
7) ಶುಭಮನ್ ಗಿಲ್ ಟೆಸ್ಟ್ ನಾಯಕನಾಗಿ 269 ರನ್ ಬಾರಿಸಿ ದಾಖಲೆ ಬರೆದರು. ಈ ಮೂಲಕ ಇವರು ವಿರಾಟ್ ಕೊಹ್ಲಿ (264 ರನ್) ದಾಖಲೆ ಅಳಿಸಿ ಹಾಕಿದರು.
8) ಗಿಲ್ ವಿದೇಶದಲ್ಲಿ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ ಎರಡನೇ ಭಾರತೀಯ ನಾಯಕ ಮತ್ತು ದ್ವಿಶತಕ ಬಾರಿಸಿದ ಆರನೇ ಭಾರತೀಯ ನಾಯಕ
9) ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ವಿಶ್ವದ ಐದನೇ ಆಟಗಾರ ಎಂಬ ಸಾಧನೆ ಮಾಡಿದರು. ಈ ಮೊದಲು ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಕ್ರಿಸ್ ಗೇಲ್, ರೋಹಿತ್ ಶರ್ಮಾ ಈ ಸಾಧನೆ ಮಾಡಿದ್ದರು.
10) ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಗಿಲ್ ಶತಕ ಬಾರಿಸುತ್ತಿದ್ದಂತೆ ಭಾರತದ ಪರ ನಾಯಕನಾಗಿ ಮೊದಲ ಎರಡು ಪಂದ್ಯಗಳಲ್ಲಿ ಶತಕ ಗಳಿಸಿದ ನಾಲ್ಕನೇ ಆಟಗಾರರಾದರು. ಇವರಿಗೂ ಮೊದಲು ವಿಜಯ್ ಹಜಾರೆ, ಗವಾಸ್ಕರ್ ಮತ್ತು ಕೊಹ್ಲಿ ಈ ಹಿರಿಮೆಗೆ ಪಾತ್ರರಾಗಿದ್ದರು.