ನವದೆಹಲಿ: ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 518 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ.
ಶನಿವಾರ ಎರಡನೇ ದಿನದಾಟವನ್ನು ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 318 ರನ್‌ಗಳಿಂದ ಆಟ ಮುಂದುವರೆಸಿತು. ಮೊದಲ ದಿನದಾಟದಲ್ಲಿ ಅಮೋಘ ಶತಕ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಆರಂಭಿಕ ಭರವಸೆಯ ಆಟಗಾರ ಯಶಸ್ವಿ ಜೈಸ್ವಾಲ್, 2 ರನ್ ಬಾರಿಸುತ್ತಲೇ ಇಲ್ಲದ ರನ್ ಕದಿಯಲು ಹೋಗಿ ರನೌಟ್‌ಗೆ ಬಲಿಯಾದರು. ಇವರು 258 ಎಸೆತಗಳಲ್ಲಿ 22 ಬೌಂಡರಿ ನೆರವಿನಿಂದ 175 ರನ್ ಬಾರಿಸಿ ಔಟ್ ಆದರು.

4ನೇ ವಿಕೆಟ್‌ಗೆ ಶುಭಮನ್ ಗಿಲ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಸಹ ತಂಡ ಬೃಹತ್ ಮೊತ್ತ ಕಲೆ ಹಾಕುವತ್ತ ದೃಷ್ಟಿ ನೆಟ್ಟರು. ಈ ಜೋಡಿ ಸಹ ವಿಂಡೀಸ್ ಬೌಲರ್‌ಗಳನ್ನು ಕಾಡಿತು. ಅಲ್ಲದೆ ಈ ಜೊಡಿ 103 ಎಸೆತಗಳಲ್ಲಿ 91 ರನ್ ಸೇರಿಸಿತು. ಈ ವೇಳೆ 4 ಬೌಂಡರಿ, 2 ಸಿಕ್ಸರ್ ಬಾರಿಸಿದ್ದ ನಿತೀಶ್ ಕುಮಾರ್ ರೆಡ್ಡಿ 43 ರನ್ ಬಾರಿಸಿ ಔಟ್ ಆದರು. ನಿತೀಶ್ ಕುಮಾರ್ ರೆಡ್ಡಿ ತಮಗೆ ತಂಡ ಬ್ಯಾಟಿಂಗ್ ಕ್ರಮಾಂಕದಲ್ಲಿ ನೀಡಿದ್ದ ಬಡ್ತಿಯನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು.
ನಿತೀಶ್ ಕುಮಾರ್ ರೆಡ್ಡಿ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ಧ್ರುವ್ ಜುರೇಲ್ ಮೊದಲ ಇನಿಂಗ್ಸ್‌ನಲ್ಲಿ ಆಡಿದ ಧಾಟಿಯಲ್ಲಿ ಬ್ಯಾಟ್ ಮಾಡಿದರು. ಇವರು ನಾಯಕ ಶುಭಮನ್ ಗಿಲ್ ಜೊತೆಗೂಡಿ ಸೊಗಸಾದ ಬ್ಯಾಟಿಂಗ್ ನಡೆಸಿದರು. ಈ ಜೋಡಿ ತಂಡ ಹಾಕಿಕೊಂಡಿದ್ದ ಮೊತ್ತವನ್ನು ಸೇರಿಸುವಲ್ಲಿ ಶ್ರಮಿಸಿತು. ಈ ಜೋಡಿ 5ನೇ ವಿಕೆಟ್‌ಗೆ 155 ಎಸೆತಗಳಲ್ಲಿ 102 ರನ್ ಬಾರಿಸಿತು. ಈ ವೇಳೆ ಧ್ರುವ್ ಜುರೇಲ್ 5 ಬೌಂಡರಿ ಸೇರಿದಂತೆ 44 ರನ್ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಬೋಲ್ಡ್ ಆದರು.
ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ತಮ್ಮ ಜವಾಬ್ದಾರಿಯನ್ನು ಅರಿತು ಆಡಿದರು. ಇವರು ನಾಯಕತ್ವ ಸಿಕ್ಕ ಮೇಲೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸುತ್ತಿರುವ ಶುಭಮನ್ ಗಿಲ್ ತವರಿನಲ್ಲೂ ಇದೇ ಫಾರ್ಮ್ ಮುಂದುವರೆಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಶತತ ಬಾರಿಸಿದ ಗಿಲ್ ಹಲವು ದಾಖಲೆಗಳನ್ನು ಬರೆದರು. ಇವರು ಅಜೇಯ 129 ರನ್‌ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡರು. ವೆಸ್ಟ್ ಇಂಡೀಸ್ ಪರ ಜೋಮೆಲ್ ವಾರಿಕನ್ 3 ವಿಕೆಟ್ ಕಬಳಿಸಿದರು.