ಭಾರತದಲ್ಲಿ ಮೂಲೆ ಮೂಲೆಯಲ್ಲಿಯೂ ಕ್ರಿಕೆಟ್ ಪ್ರತಿಭೆಗಳನ್ನು ಕಾಣಬಹುದು. ಅಂತಹ ಪ್ರತಿಭೆಯೊಂದು ಕ್ರಿಕೆಟ್ ದೇವರು ಖ್ಯಾತಿಯ ಸಚಿನ್ ತೆಂಡೂಲ್ಕರ್ ಅವರ ಗಮನ ಸೆಳೆದಿದೆ. ಭಾರತ ತಂಡದ ಮಾಜಿ ಬೌಲರ್ ಜಹೀರ್ ಖಾನ್ ಅವರಂತೆ ಬೌಲಿಂಗ್ ಮಾಡುವ ಮೂಲಕ ಬಾಲಕಿಯೊಬ್ಬಳು ಸಚಿನ್ ತೆಂಡೂಲ್ಕರ್ ಮೆಚ್ಚುಗೆ ಪಡೆದಿದ್ದಾಳೆ. ಬಾಲಕಿಯ ಆಕರ್ಷಣೀಯ ಬೌಲಿಂಗ್ ವಿಡಿಯೋ ಅನ್ನು ಜಹೀರ್ ಖಾನ್ ಮತ್ತು ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರೂ ದಿಗ್ಗಜರು ಕೂಡ ಬಾಲಕಿ ಪ್ರತಭೆಯನ್ನು ಹೊಗಳಿದ್ದಾರೆ.
ಜಹೀರ್ ಖಾನ್ ಶೈಲಿಯಲ್ಲಿ ಬೌಲಿಂಗ್ ಮಾಡಿರುವ ಹಳ್ಳಿ ಬಾಲಕಿಯ ವಿಡಿಯೋ ಅನ್ನು ಸಚಿನ್ ತೆಂಡೂಲ್ಕರ್ ತಮ್ಮ ಅಧಿಕೃತ ಟ್ವೀಟರ್ (ಎಕ್ಸ್) ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಬಾಲಕಿಯ ಅತ್ಯುತ್ತಮ ಬೌಲಿಂಗ್ ಶೈಲಿಯನ್ನು ಗುಣಗಾನ ಮಾಡಿದ್ದಾರೆ. ಇದಲ್ಲದೆ, ಜಹೀರ್ ಖಾನ್ ಅವರಿಗೂ ವಿಡಿಯೋ ಅನ್ನು ಟ್ಯಾಗ್ ಮಾಡಿ, ನೀವೂ ಇದನ್ನು ನೋಡಿದ್ದೀರಾ?' ಎಂದು ಪ್ರಶ್ನಿಸಿದ್ದಾರೆ. ಸುಶೀಲಾ ಮೀನಾ ಅವರ ಬೌಲಿಂಗ್ ಶೈಲಿ ನೋಡಲು ಎಷ್ಟೊಂದು ನಾಜೂಕು, ನಿರಾಯಾಸ ಮತ್ತು ಆಕರ್ಷಣೀಯವಾಗಿದೆ ಎಂದು ಸಚಿನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಪೋಸ್ಟ್‌ಗೆ ಜಹೀರ್ ಖಾನ್ ಉತ್ತರಿಸಿದ್ದಾರೆ. 'ನೀವು ಇದನ್ನು ಒಪ್ಪಿಕೊಂಡಿದ್ದೀರಿ ಎಂದು ಹೇಳಿದ ಮೇಲೆ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ಆಕೆಯ ಬೌಲಿಂಗ್ ಆ್ಯಕ್ಷನ್ ನಾಜೂಕು ಮತ್ತು ಆಕರ್ಷಣೀಯವಾಗಿದೆ. ಅವಳು ಈಗಾಗಲೇ ದೊಡ್ಡ ಭರವಸೆಯನ್ನು ತೋರುತ್ತಿದ್ದಾಳೆ ಎಂದು ದಿಗ್ಗಜ ವೇಗಿ ಕೂಡ ಹೊಗಳಿದ್ದಾರೆ.
ಜಹೀರ್ ಖಾನ್ ಅವರನ್ನು ಹೋಲುವಂತೆ ಬೌಲಿಂಗ್ ಮಾಡಿ ಗಮನ ಸೆಳೆದಿರುವ ಬಾಲಕಿಯ ಹೆಸರು ಸುಶೀಲಾ ಮೀನಾ. ಮೂಲತಃ ಸುಶೀಲಾ ಮೀನಾ ರಾಜಸ್ಥಾನದವರು. ಎಡಗೈ ವೇಗದ ಬೌಲರ್ ಆಗಿರುವ ಸುಶೀಲಾ ಮೀನಾ ಕ್ರಿಕೆಟ್ ಮೈದಾನವೊಂದರಲ್ಲಿ ಶಾಲಾ ಸಮವಸ್ತ್ರದಲ್ಲೇ ಬೌಲಿಂಗ್ ಮಾಡುತ್ತಿರುವಾಗ ಸೆರೆ ಹಿಡಿದಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
ಜಹೀರ್ ಖಾನ್ ಅವರು ಸಚಿನ್ ಜೊತೆ ಬಹಳ ಕಾಲ ಆಡಿದ್ದರು. ಭಾರತ ತಂಡದಲ್ಲಿ ಆಡುವಾಗ ಇಬ್ಬರು ದಿಗ್ಗಜರು ಹಲವು ದಾಖಲೆಗಳನ್ನು ಮಾಡಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಜಹೀರ್ ಮತ್ತು ಸಚಿನ್ ಬಲಿಷ್ಠ ತಂಡಗಳಲ್ಲಿ ನಡುಕ ಹುಟ್ಟಿಸಿದ್ದರು.
ಜಹೀರ್ ಖಾನ್ ಅತ್ಯುತ್ತಮ ವೃತ್ತಿಜೀವನವನ್ನು ಹೊಂದಿದ್ದಾರೆ. ಅವರು 92 ಟೆಸ್ಟ್ ಮತ್ತು 200 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ, ಟಿ20ಯಲ್ಲಿ ಜಹೀರ್ ಹೆಚ್ಚಿನ ಕೊಡುಗೆ ನೀಡಲಿಲ್ಲ. ಅವರು ಕೇವಲ 17 ಟಿ20 ಪಂದ್ಯಗಳನ್ನು ಆಡಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಜಹೀರ್ ಖಾನ್ ಹೆಚ್ಚಿನ ವಿಕೆಟ್ ಪಡೆದಿಲ್ಲ. ಜಹೀರ್ ಟೆಸ್ಟ್‌ನಲ್ಲಿ 311 ವಿಕೆಟ್‌ಗಳನ್ನು ಕಬಳಿಸಿದ್ದು, ಏಕದಿನ ಕ್ರಿಕೆಟ್‌ನಲ್ಲಿ 282 ವಿಕೆಟ್‌ಗಳನ್ನು ಪಡೆದಿದ್ದಾರೆ.