ತವರಿನಲ್ಲಿ 22 ಬಳಿಕ ಪಾಕಿಸ್ತಾನ ಎದುರು ಆಸ್ಟ್ರೇಲಿಯಾ ಏಕದಿನ ಸರಣಿ ಸೋತಿತ್ತು. ಈ ಸೋಲಿನ ಬಳಿಕ ಆಸ್ಟ್ರೇಲಿಯಾ ಸ್ಟ್ರಾಂಗ್ ಕಮ್‌ಬ್ಯಾಕ್ ಮಾಡಿದೆ. ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿದೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿದೆ. ಸಂಘಟಿತ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ಕೆಲವೇ ನಿಮಿಷಗಳಲ್ಲಿ 29 ರನ್‌ಗಳಿಂದ ಪಂದ್ಯವನ್ನು ಗೆದ್ದು ಬೀಗಿದೆ.
ಆಸ್ಟ್ರೇಲಿಯಾ ಪರ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಪಾಕಿಸ್ತಾನದ ಬೌಲರ್‌ಗಳಿಗೆ ಮ್ಯಾಕ್ಸ್‌ವೆಲ್ ಬೆವರಿಳಿಸಿದರು. ಮಳೆಯಿಂದಾಗಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಮೊದಲ ಟಿ20 ಪಂದ್ಯ ತಡವಾಗಿ ಪ್ರಾರಂಭವಾಯಿತು. ಹೀಗಾಗಿ 20 ಓವರ್‌ಗಳ ಈ ಪಂದ್ಯವನ್ನು ಏಳು ಓವರ್‌ಗಳಿಗೆ ಮೊಟಕುಗೊಳಿಸಲಾಯಿತು.

ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಮೊಹಮ್ಮದ್ ರಿಜ್ವಾನ್ ಅವರು ಆಸ್ಟ್ರೇಲಿಯಾವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆಸ್ಟ್ರೇಲಿಯಾದ ಆರಂಭಿಕರಾದ ಮ್ಯಾಥ್ಯೂ ಶಾರ್ಟ್ (7) ಮತ್ತು ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ (9) ಎರಡಂಕಿ ದಾಟುವಲ್ಲಿ ಯಶಸ್ವಿಯಾಗಲಿಲ್ಲ. ಇದಾದ ಬಳಿಕ ಬ್ಯಾಟಿಂಗ್ ಗೆ ಬಂದ ಮ್ಯಾಕ್ಸ್‌ವೆಲ್ ನೆಲ ಕಚ್ಚಿ ನಿಂತರು.
ಮ್ಯಾಕ್ಸ್‌ವೆಲ್ ಅವರು ಕೇವಲ 19 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 43 ರನ್ ಗಳಿಸಿದರು. ಮ್ಯಾಕ್ಸ್‌ವೆಲ್ ಜೊತೆಗೂಡಿದ ಸ್ಟೊಯಿನಿಸ್ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 21 ರನ್ ಗಳಿಸಿದರು. ಈ ಇಬ್ಬರ ಜಬ್ದಾರಿಯುತ ಇನ್ನಿಂಗ್ಸ್‌ನಿಂದಾಗಿ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 93 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
ಆಸ್ಟ್ರೇಲಿಯಾ ನೀಡಿದ 94 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಆಸೀಸ್ ಬೌಲಿಂಗ್ ದಾಳಿಗೆ ತತ್ತರಿಸಿತು. ಪಾಕಿಸ್ತಾನ ನಿಗದಿತ 7 ಓವರ್‌ಗಳಲ್ಲಿ 9 ಕಳೆದುಕೊಂಡು ಕೇವಲ 64 ರನ್ ಗಳಿಸಲಷ್ಟೇ ಶಕ್ತವಾಯಿತು. ಪಾಕಿಸ್ತಾನ ಯಾವುದೇ ಬ್ಯಾಟರ್ ತಂಡದ ಗೆಲುವಿಗಾಗಿ ಕ್ರೀಸ್‌ನಲ್ಲಿ ನಿಂತು ಆಡಲಿಲ್ಲ. ಇದರಿಂದಾಗಿ ಪಾಕಿಸ್ತಾನ ತಂಡ ಮೊದಲ ಟಿ20 ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು.
ಆಸ್ಟ್ರೇಲಿಯಾ ಪರ ಅದ್ಭುತ ಬೌಲಿಂಗ್ ಪ್ರದರ್ಶನ ಕಂಡು ಬಂತು. ನಾಥನ್ ಎಲ್ಲಿಸ್ ಮತ್ತು ಶೇವಿಯರ್ ಬಾರ್ಟ್ಲೆಟ್ ತಲಾ 3 ವಿಕೆಟ್ ಪಡೆದು ಮಿಂಚಿದರು.