ನವದೆಹಲಿ, ಜೂನ್ 19: ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿದ ಪಾಕಿಸ್ತಾನದ ಜಯವನ್ನು ಆಚರಿಸಿದ ಕಾಶ್ಮೀರದ ಪ್ರತ್ಯೇಕತಾ ವಾದಿಗಳಿಗೆ ಕ್ರಿಕೆಟಿಗ ಗೌತಮ್ ಗಂಭೀರ್ ಛೀಮಾರಿ ಹಾಕಿದ್ದಾರೆ.
ಭಾನುವಾರ (ಜೂನ್ 18) ಲಂಡನ್ ನಲ್ಲಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ನಡೆದಿತ್ತು. ಆ ಪಂದ್ಯದಲ್ಲಿ ಪಾಕಿಸ್ತಾನ ತಂಡವು, ಭಾರತ ತಂಡವನ್ನು 180 ರನ್ ಗಳಿಂದ ಪರಾಭವಗೊಳಿಸಿ, ಕಪ್ ಗೆದ್ದುಕೊಂಡಿತ್ತು.

ಭಾರತ ತಂಡದ ಸೋಲು ಖಾತ್ರಿಯಾಗುತ್ತಲೇ ಕಾಶ್ಮೀರದಲ್ಲಿರುವ ಪ್ರತ್ಯೇಕತಾವಾದಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಇನ್ನು, ಪಂದ್ಯ ಮುಗಿದ ಮೇಲಂತೂ ಇವರ ಸಂತೋಷ ಇಮ್ಮಡಿಯಾಗಿತ್ತು.
ಈ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು. ಇದರ ಜತೆಗೆ, ಕಾಶ್ಮೀರದ ಪ್ರತ್ಯೇಕತಾವಾದಿಯಾದ ಹುರಿಯತ್ ಕಾನ್ಫರೆನ್ಸ್ ಸಂಘಟನೆ ನಾಯಕ ಮಿರ್ ವೈಜ್ ಉಮರ್ ಫಾರೂಕ್ ಟ್ವೀಟ್ ಮಾಡಿ, ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಗೆದ್ದಿದ್ದು ಈಗಲೇ ರಂಜನ್ ಬಂದಂಥ ವಾತಾವರಣ ಸೃಷ್ಟಿಸಿದೆ. ಉತ್ತಮ ತಂಡ ಈ ದಿನವನ್ನಾಳಿದೆ. ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ಗಂಭೀರ್, ''ಮಿರ್ ವೈಜ್ ಉಮರ್ ಫಾರೂಕ್ ಅವರೇ, ನೀವ್ಯಾಕೆ ಗಡಿ ದಾಟಿ ಪಾಕಿಸ್ತಾನದೊಳಗೆ ಹೋಗಿ ಈ ಜಯವನ್ನು ಸಂಭ್ರಮಿಸಬಾರದು? ಅಲ್ಲಿ ನಿಮಗೆ ಇಲ್ಲಿ ಸಿಗುವುದಕ್ಕಿಂತ ಉತ್ತಮವಾದ ಪಟಾಕಿಗಳು (ಚೀನಾ ಬ್ರಾಂಡ್) ಸಿಗಬಹುದು. ನೀವು ಅಲ್ಲೇ ಈದ್ ಆಚರಿಸಿ. ನೀವೀಗಲೇ ನಿಮ್ಮ ಬಟ್ಟೆಬರೆ ಪ್ಯಾಕ್ ಮಾಡುವುದಾದರೆ ನಾನು ಸಹಾಯ ಮಾಡುವೆ'' ಎಂದು ಕಿಚಾಯಿಸಿದ್ದಾರೆ.