ಐಪಿಎಲ್ 2022: ಹರಾಜಿನ ನಂತರ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಸಂಪೂರ್ಣ ತಂಡ ಹೀಗಿದೆ

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಂಬರುವ ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ತಿಂಗಳಿನಲ್ಲಿ ಆರಂಭಗೊಳ್ಳಲಿದ್ದು, ಈ ಬಾರಿಯ ಟೂರ್ನಿಯಲ್ಲಿ ಟ್ರೋಫಿಗಾಗಿ ಒಟ್ಟು ಹತ್ತು ತಂಡಗಳ ನಡುವೆ ಸೆಣಸಾಟ ನಡೆಯುವುದರಿಂದ ಸಾಕಷ್ಟು ವಿಶೇಷತೆಯಿಂದ ಕೂಡಿರಲಿದೆ ಹಾಗೂ ಕುತೂಹಲವನ್ನೂ ಕೂಡ ಹುಟ್ಟು ಹಾಕಿದೆ.
ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಸೇರ್ಪಡೆಗೊಳ್ಳುತ್ತಿರುವ ಸಲುವಾಗಿ ಮೆಗಾ ಹರಾಜು ಪ್ರಕ್ರಿಯೆಯೂ ನಡೆದಿದೆ. ಕಳೆದ ಶನಿವಾರ ಹಾಗೂ ಭಾನುವಾರದಂದು ಬೆಂಗಳೂರಿನಲ್ಲಿ ನಡೆದ ಈ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 590 ಆಟಗಾರರು ಭಾಗವಹಿಸಿದ್ದು, 203 ಆಟಗಾರರು ಯಶಸ್ವಿಯಾಗಿ ಬಿಕರಿಯಾಗಿದ್ದಾರೆ. ಹೀಗೆ ಯಶಸ್ವಿಯಾಗಿ ಹರಾಜಾದ ಆಟಗಾರರ ಪೈಕಿ 66 ವಿದೇಶಿ ಆಟಗಾರರಿದ್ದರೆ, ಇನ್ನುಳಿದ 137 ಆಟಗಾರರು ಭಾರತೀಯರಾಗಿದ್ದಾರೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ 15.25 ಕೋಟಿಗೆ ಮುಂಬೈ ಇಂಡಿಯನ್ಸ್ ಪಾಲಾದ ಇಶಾನ್ ಕಿಶನ್ ಅತಿ ದೊಡ್ಡ ಮೊತ್ತಕ್ಕೆ ಬಿಕರಿಯಾದ ಆಟಗಾರ ಎನಿಸಿಕೊಂಡರು.
ಹೀಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಾನು ರಿಟೈನ್ ಮಾಡಿಕೊಳ್ಳದೇ ಕೈಬಿಡಲಾಗಿದ್ದ ಇಶಾನ್ ಕಿಶನ್ ಮೇಲೆ ದೊಡ್ಡ ಮೊತ್ತವನ್ನು ಹೂಡಿ ಮತ್ತೆ ತಂಡಕ್ಕೆ ಕರೆ ತಂದರೆ, ಅತ್ತ ಮುಂಬೈ ಇಂಡಿಯನ್ಸ್ ತಂಡದಲ್ಲಿ ರಿಟೈನ್ ಆಗದೆ ಹೊರಬಿದ್ದಿದ್ದ ಹಾರ್ದಿಕ್ ಪಾಂಡ್ಯ ನೂತನ ಫ್ರಾಂಚೈಸಿಯಾದ ಗುಜರಾತ್ ಟೈಟಾನ್ಸ್ ಸೇರಿ ನಾಯಕನಾಗಿದ್ದಾರೆ. 15 ಕೋಟಿಗೆ ಮೆಗಾ ಹರಾಜಿಗೂ ಮುನ್ನವೇ ಹಾರ್ದಿಕ್ ಪಾಂಡ್ಯಾನನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಗುಜರಾತ್ ಟೈಟಾನ್ಸ್ ರಶೀದ್ ಖಾನ್ ಹಾಗೂ ಶುಬ್ಮನ್ ಗಿಲ್ ಅವರನ್ನು ಕೂಡ ಖರೀದಿ ಮಾಡಿತ್ತು. ಹೀಗೆ ಈ ಮೂವರು ಆಟಗಾರರನ್ನು ಹರಾಜಿಗೂ ಮುನ್ನ ತಂಡಕ್ಕೆ ಸೇರಿಸಿಕೊಂಡ ಗುಜರಾತ್ ಟೈಟಾನ್ಸ್ 52 ಕೋಟಿಯೊಂದಿಗೆ ಮೆಗಾ ಹರಾಜಿನಲ್ಲಿ ಭಾಗವಹಿಸಿತು. ಇನ್ನು ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಯಾವ ಯಾವ ಆಟಗಾರರನ್ನು ಖರೀದಿಸಿದೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಮೆಗಾ ಹರಾಜಿನ ನಂತರ ಗುಜರಾತ್ ಟೈಟಾನ್ಸ್ ತಂಡ
ಕಳೆದ ಶನಿವಾರ ಹಾಗೂ ಭಾನುವಾರ ನಡೆದ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯಗೊಂಡ ನಂತರ ಗುಜರಾತ್ ಟೈಟಾನ್ಸ್ ಒಟ್ಟು 22 ಆಟಗಾರರನ್ನು ಹೊಂದಿದ್ದು, ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರ ಪಟ್ಟಿ ಇಲ್ಲಿದೆ: ಹಾರ್ದಿಕ್ ಪಾಂಡ್ಯ, ರಶೀದ್ ಖಾನ್, ಶುಭಮನ್ ಗಿಲ್, ಮೊಹಮ್ಮದ್ ಶಮಿ, ಜೇಸನ್ ರಾಯ್, ಲಾಕಿ ಫರ್ಗುಸನ್, ಅಭಿನವ್ ಸದಾರಂಗನಿ, ರಾಹುಲ್ ತೆವಾಟಿಯಾ, ನೂರ್ ಅಹ್ಮದ್, ಆರ್ ಸಾಯಿ ಕಿಶೋರ್, ಡೊಮಿನಿಕ್ ಡ್ರೇಕ್ಸ್, ಜಯಂತ್ ಯಾದವ್, ವಿಜಯ್ ಶಂಕರ್, ದರ್ಶನ್ ನಲ್ಕಂಡೆ, ಯಶ್ ಜೋಸೆಫ್ ದಯಾಳ್, ಪ್ರದೀಪ್, ಅಲ್ಜಾರಿ ಸಾಂಗ್ವಾನ್, ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ಗುರುಕೀರತ್ ಸಿಂಗ್, ವರುಣ್ ಆರೋನ್ ಮತ್ತು ಬಿ ಸಾಯಿ ಸುದರ್ಶನ್

ಲಾಕಿ ಫರ್ಗ್ಯುಸನ್ ಮತ್ತು ರಾಹುಲ್ ತೆವಾಟಿಯಾ ಮೇಲೆ ಹೆಚ್ಚು ಹಣ ಸುರಿದ ಗುಜರಾತ್
ಇನ್ನು ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ವೇಗಿ ಲಾಕಿ ಫರ್ಗ್ಯುಸನ್ ಅವರನ್ನು 10 ಕೋಟಿ ನೀಡಿ ಖರೀದಿಸಿದರೆ, ಆಲ್ ರೌಂಡರ್ ಆಟಗಾರ ರಾಹುಲ್ ತೆವಾಟಿಯಾಗೆ 9 ಕೋಟಿ ಹೂಡಿಕೆ ಮಾಡಿದೆ. ಇನ್ನುಳಿದಂತೆ ಮೊಹಮ್ಮದ್ ಶಮಿ 6.25 ಕೋಟಿ, ಜೇಸನ್ ರಾಯ್ 2 ಕೋಟಿ, ಅಭಿನವ್ ಸದರಾಂಗಣಿ 2.6 ಕೋಟಿ, ನೂರ್ ಅಹ್ಮದ್ 30 ಲಕ್ಷ, ಸಾಯಿ ಕಿಶೋರ್ 3 ಕೋಟಿ, ಡೊಮಿನಿಕ್ ಡ್ರೆಕ್ಸ್ 1.1 ಕೋಟಿ, ವಿಜಯ್ ಶಂಕರ್ 1.4 ಕೋಟಿ, ಜಯಂತ್ ಯಾದವ್ 1.7 ಕೋಟಿ, ದರ್ಶನ್ ನಲ್ಕಂಡೆ 20 ಲಕ್ಷ, ಯಶ್ ದಯಾಳ್ 3.2 ಕೋಟಿ, ಅಲ್ಜಾರಿ ಜೋಸೆಫ್ 2.4 ಕೋಟಿ, ಪ್ರದೀಪ್ ಸಾಂಗ್ವಾನ್ 20 ಲಕ್ಷ, ಗುರುಕೀರತ್ ಸಿಂಗ್ 50 ಲಕ್ಷ, ವರುಣ್ ಆ್ಯರೋನ್ 50 ಲಕ್ಷ, ಡೇವಿಡ್ ಮಿಲ್ಲರ್ 3 ಕೋಟಿ, ವೃದ್ಧಿಮಾನ್ ಸಾಹ 1.9 ಕೋಟಿ ಮತ್ತು ಮ್ಯಾಥ್ಯೂ ವೇಡ್ 2.4 ಕೋಟಿ ಪಡೆದು ಗುಜರಾತ್ ಟೈಟಾನ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ವಿಜಯ್ ಶಂಕರ್ ಖರೀದಿಸಿದ್ದಕ್ಕೆ ಸಿಕ್ಕಾಪಟ್ಟೆ ಟ್ರೋಲ್
ಇನ್ನು ಕಳೆದ ಐಪಿಎಲ್ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿ ಸಾಲು ಸಾಲು ಕಳಪೆ ಪ್ರದರ್ಶನ ನೀಡಿರುವ ವಿಜಯ್ ಶಂಕರ್ ಅವರನ್ನು ಗುಜರಾತ್ ಟೈಟಾನ್ಸ್ 1.4 ಕೋಟಿಗೆ ಖರೀದಿಸಿತು. ಆತನನ್ನು ಖರೀದಿಸಲು ಇಷ್ಟು ಹಣ ನೀಡಬೇಕಾಗಿರಲಿಲ್ಲ, ಇದೊಂದು ಕೆಟ್ಟ ಆಯ್ಕೆ ಎಂದು ಗುಜರಾತ್ ಟೈಟಾನ್ಸ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಪ್ರೇಮಿಗಳು ಟ್ರೋಲ್ ಮಾಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications