GT vs CSK IPL 2024: ಗಿಲ್-ಸುದರ್ಶನ್ ಶತಕದ ಅಬ್ಬರ; ಸಿಎಸ್‌ಕೆ ವಿರುದ್ಧ ಗೆದ್ದ ಗುಜರಾತ್ ಟೈಟನ್ಸ್; ಆರ್‌ಸಿಬಿ ಫ್ಯಾನ್ಸ್ ಖುಷ್
ಶುಕ್ರವಾರ, ಮೇ 10ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 59ನೇ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟನ್ಸ್ ತಂಡದ ಬ್ಯಾಟಿಂಗ್ ಅಬ್ಬರಕ್ಕೆ ದಂಗಾದ ಚೆನ್ನೈ ಸೂಪರ್ ಕಿಂಗ್ಸ್ ತಂಡ 35 ರನ್‌ಗಳ ಹೀನಾಯ ಸೋಲು ಅನುಭವಿಸಿತು.
ಈ ಮೂಲಕ ಗುಜರಾತ್ ಟೈಟನ್ಸ್ ತಂಡ ಐಪಿಎಲ್ 2024ರಲ್ಲಿ ಆಡಿದ 12 ಪಂದ್ಯಗಳಲ್ಲಿ 5 ಗೆಲುವು ಮತ್ತು 7 ಸೋಲು ಕಂಡಿದ್ದು, 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿದೆ. ಇನ್ನು ಸಿಎಸ್‌ಕೆ ತಂಡ ಆಡಿದ 12 ಪಂದ್ಯಗಳಲ್ಲಿ 6 ಗೆಲುವು ಮತ್ತು 6 ಸೋಲು ಕಂಡು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಮುಂದುವರೆದಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ ತಂಡದ ಗೆಲುವು ಐಪಿಎಲ್ 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪ್ಲೇಆಫ್ ಅವಕಾಶಕ್ಕೆ ಸಹಾಯ ಮಾಡಿದ್ದು, ಇದರಿಂದ ಆರ್‌ಸಿಬಿ ಅಭಿಮಾನಿಗಳು ಸಹ ಖುಷಿಗೊಂಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ ಸಾಯಿ ಸುದರ್ಶನ್ ಮತ್ತು ನಾಯಕ ಶುಭ್ಮನ್ ಗಿಲ್ ಅವರ ಭರ್ಜರಿ ಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿತ್ತು.
232 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡ್ಯಾರಿಲ್ ಮಿಚೆಲ್ ಮತ್ತು ಮೊಯಿನ್ ಅಲಿ ಅವರ ಅಮೋಘ ಅರ್ಧಶತಕಗಳ ಹೊರತಾಗಿಯೂ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 196 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಈ ಮೂಲಕ ಗುಜರಾತ್ ಟೈಟನ್ಸ್ ತಂಡ 35 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಅಜಿಂಕ್ಯ ರಹಾನೆ ಮತ್ತು ರಚಿನ್ ರವೀಂದ್ರ ಉತ್ತಮ ಆರಂಭ ನೀಡಲು ವಿಫಲರಾದರು. ಈ ಇಬ್ಬರು ತಂಡದ ಮೊತ್ತ 2 ರನ್‌ಗಳಾಗಿದ್ದಾಗ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ನಂತರ ಬಂದ ನಾಯಕ ರುತುರಾಜ್ ಗಾಯಕ್ವಾಡ್ ಸೊನ್ನೆಗೆ ಔಟಾದರು.
ಈ ವೇಳೆ ಜೊತೆಯಾದ ಡ್ಯಾರಿಲ್ ಮಿಚೆಲ್ ಮತ್ತು ಮೊಯಿನ್ ಅಲಿ ಕುಸಿದಿದ್ದ ಸಿಎಸ್‌ಕೆ ತಂಡವನ್ನು ಮರಳಿ ಆಟಕ್ಕೆ ತರಲು ಪ್ರಯತ್ನಿಸಿದರು. ಈ ಜೋಡಿ 4ನೇ ವಿಕೆಟ್‌ಗೆ 109 ರನ್‌ಗಳ ಜೊತೆಯಾಟ ಸೇರಿಸಿ ಚೇಸಿಂಗ್‌ನಲ್ಲಿ ಹೋರಾಟ ನೀಡಿದರು.
ಈ ವೇಳೆ ತಂಡದ ಮೊತ್ತ 119 ರನ್‌ಗಳಾಗಿದ್ದಾಗ ಡ್ಯಾರಿಲ್ ಮಿಚೆಲ್ 34 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ 63 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಆ ಬಳಿಕ ಉತ್ತಮವಾಗಿ ಆಡುತ್ತಿದ್ದ ಮೊಯಿನ್ ಅಲಿ 36 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಮೂಲಕ 56 ರನ್‌ಗಳಿಗೆ ಆಟ ಮುಗಿಸಿದರು.
ಈ ಇಬ್ಬರು ಔಟಾಗುತ್ತಿದ್ದಂತೆಯೇ ಸಿಎಸ್‌ಕೆ ತಂಡದ ಗೆಲುವಿನ ಭರವಸೆ ಕಮರಿ ಹೋಯಿತು. ನಂತರ ಯಾವ ಬ್ಯಾಟರ್‌ಗಳು ದೊಡ್ಡ ಮೊತ್ತ ಕಲೆಹಾಕಲು ವಿಫಲರಾದರು. ಶಿವಂ ದುಬೆ 13 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 21 ರನ್ ಗಳಿಸಿದರೆ, ರವೀಂದ್ರ ಜಡೇಜಾ 10 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 18 ರನ್ ಗಳಿಸಿ ಸ್ವಲ್ಪ ಪ್ರತಿರೋಧ ನೀಡಿದರು.
ಕೊನೆಯಲ್ಲಿ ಮಾಜಿ ನಾಯಕ ಎಂಎಸ್ ಧೋನಿ 11 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳ ಸಮೇತ ಅಜೇಯ 26 ರನ್ ಗಳಿಸಿದರೆ, ಶಾರ್ದೂಲ್ ಠಾಕೂರ್ ಅಜೇಯ 3 ರನ್ ಗಳಿಸಿದರು.
ಇನ್ನು ಬೌಲಿಂಗ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದ ಪರ ಮೋಹಿತ್ ಶರ್ಮಾ 4 ಓವರ್‌ಗಳಲ್ಲಿ 31 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ರಶೀದ್ ಖಾನ್ 4 ಓವರ್‌ಗಳಲ್ಲಿ 38 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಉಮೇಶ್ ಯಾದವ್ ಮತ್ತು ಸಂದೀಪ್ ವಾರಿಯರ್ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನ ಗುಜರಾತ್ ಟೈಟನ್ಸ್ ತಂಡದ ಇನ್ನಿಂಗ್ಸ್ ಆರಂಭಿಸಿದ ನಾಯಕ ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ದೊಡ್ಡ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 17.2 ಓವರ್‌ಗಳಲ್ಲಿ 210 ರನ್‌ಗಳ ಜೊತೆಯಾಟ ನಿರ್ಮಿಸಿ ಬೃಹತ್ ಮೊತ್ತ ಗಳಿಸಲು ನೆರವಾದರು.
ಸಾಯಿ ಸುದರ್ಶನ್ 51 ಎಸೆತಗಳಲ್ಲಿ 5 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ಗಳ ಮೂಲಕ 103 ರನ್ ಗಳಿಸಿ ಔಟಾದರೆ, ಶುಭ್ಮನ್ ಗಿಲ್ 55 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 6 ಸಿಕ್ಸರ್‌ಗಳ ಸಮೇತ 104 ರನ್ ಬಾರಿಸಿ 18ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು.
ಗಮನಾರ್ಹವಾಗಿ, ಶುಭ್ಮನ್ ಗಿಲ್ ಅವರು ಐಪಿಎಲ್ ಇತಿಹಾಸದ 100ನೇ ಶತಕ ಗಳಿಸಿದರೆ, ಸಾಯಿ ಸುದರ್ಶನ್ ಐಪಿಎಲ್‌ನ 101ನೇ ಶತಕ ಬಾರಿಸಿದರು. ಗುಜರಾತ್ ಟೈಟನ್ಸ್ ಆರಂಭಿಕರು 210 ರನ್‌ಗಳ ಜೊತೆಯಾಟ ಸೇರಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ ಜಂಟಿ ಅತ್ಯಧಿಕ ಮೊದಲ ವಿಕೆಟ್ ಜೊತೆಯಾಟವಾಗಿದೆ.

ನಂತರ ಬಂದ ಡೇವಿಡ್ ಮಿಲ್ಲರ್ 11 ಎಸೆತಗಳಲ್ಲಿ 16 ರನ್ ಗಳಿಸಿದರೆ, ಶಾರೂಖ್ ಖಾನ್ 3 ಎಸೆತಗಳಲ್ಲಿ 2 ರನ್ ಗಳಿಸಿ ಕೊನೆಯ ಎಸೆತದಲ್ಲಿ ರನೌಟ್ ಆದರು.
ಇನ್ನು ಬೌಲಿಂಗ್‌ನಲ್ಲಿ ಸಿಎಸ್‌ಕೆ ತಂಡದ ಪರ ತುಷಾರ್ ದೇಶಪಾಂಡೆ 4 ಓವರ್‌ಗಳಲ್ಲಿ 33 ರನ್ ನೀಡಿ 2 ವಿಕೆಟ್ ಪಡೆದರೆ, ಉಳಿದ ಬೌಲರ್‌ಗಳು ದುಬಾರಿಯಾದರು ಮತ್ತು ವಿಕೆಟ್ ರಹಿತರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications