Ayush Badoni: ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ ಆಯುಷ್ ಬದೋನಿ ಬಗ್ಗೆ ತಿಳಿಯಿರಿ

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಿದ್ದು, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ಎಂಬ ನೂತನ ತಂಡಗಳ ಆಗಮನದಿಂದಾಗಿ ಈ ಬಾರಿಯ ಆವೃತ್ತಿ ಸಾಕಷ್ಟು ವಿಶೇಷವೆನಿಸಿದೆ. ಹೌದು, ಟ್ರೋಫಿಗಾಗಿ ಒಟ್ಟು ಹತ್ತು ತಂಡಗಳ ನಡುವೆ ಸೆಣಸಾಟ ನಡೆಯುತ್ತಿರುವುದು ವಿಶೇಷವಾಗಿದ್ದು, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ಟೂರ್ನಿಯಲ್ಲಿನ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಮುಖಾಮುಖಿಯಾದವು.
ಮಾರ್ಚ್ 28ರ ಸೋಮವಾರದಂದು ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ 5 ವಿಕೆಟ್‍ಗಳ ಜಯವನ್ನು ಸಾಧಿಸುವುದರ ಮೂಲಕ ಟೂರ್ನಿಯಲ್ಲಿ ಶುಭಾರಂಭವನ್ನು ಮಾಡಿದೆ. ಈ ಮೂಲಕ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಟೂರ್ನಿಯಲ್ಲಿನ ತನ್ನ ಚೊಚ್ಚಲ ಪಂದ್ಯದಲ್ಲಿಯೇ ಜಯ ಸಾಧಿಸಿದರೆ, ತನ್ನ ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಎಲ್ಲರ ಚಿತ್ತವನ್ನು ಗೆದ್ದಿರುವುದು ಲಕ್ನೋ ಸೂಪರ್ ಜೈಂಟ್ಸ್ ತಂಡದ ಯುವ ಆಟಗಾರ ಆಯುಷ್ ಬದೋನಿ. ಹೌದು, ಇತ್ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜಯಂಟ್ಸ್ 4.3 ಓವರ್‌ಗಳಿಗೆ 29 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಾಗ ಕಣಕ್ಕಿಳಿದ ಆಯುಷ್ ಬದೋನಿ 41 ಎಸೆತಗಳಲ್ಲಿ 54 ರನ್ ಗಳಿಸಿ ತಂಡ ಉತ್ತಮ ಮೊತ್ತ ಕಲೆಹಾಕುವಲ್ಲಿ ನೆರವಾದರು. ದೀಪಕ್ ಹೂಡಾ ಜೊತೆ 87 ರನ್‌ಗಳ ಉತ್ತಮ ಜತೆಯಾಟವಾಡಿದ ಆಯೂಷ್ ಬದೋನಿ ಒತ್ತಡದ ಸಂದರ್ಭದಲ್ಲಿಯೂ ಉತ್ತಮ ಪ್ರದರ್ಶನ ನೀಡಿದ ಕಾರಣ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಪಟ್ಟಿ ಸೇರಿದ್ದಾರೆ. ಹೀಗೆ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿಯೇ ಅಬ್ಬರಿಸಿರುವ ಆಯುಷ್ ಬದೋನಿ ಯಾರು ಎಂಬುದರ ಕುರಿತಾದ ಕಿರು ವಿವರ ಈ ಕೆಳಕಂಡಂತಿದೆ.

ಬದೋನಿ ದೆಹಲಿ ಮೂಲದ ಆಟಗಾರ
ಬದೋನಿ ಮೂಲತಃ ದೆಹಲಿ ಕ್ರಿಕೆಟಿಗ, 22 ವರ್ಷದ ಈ ಆಟಗಾರ ಬಲಗೈ ಬ್ಯಾಟ್ಸ್‌ಮನ್ ಮತ್ತು ಬಲಗೈ ಆಫ್‌ಬ್ರೇಕ್ ಸ್ಪಿನ್ನರ್. ಭಾರತ ಅಂಡರ್ 19 ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳಲ್ಲಿ ಆಡಿರುವ ಈ ಪ್ರತಿಭೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ದೆಹಲಿ ತಂಡದ ಪರ 5 ಟಿ ಟ್ವೆಂಟಿ ಪಂದ್ಯಗಳನ್ನಾಡಿದ ಅನುಭವವಿದೆ. ಇನ್ನು ಅಂಡರ್ 19 ಏಷ್ಯಾಕಪ್ ಟೂರ್ನಿಯಲ್ಲಿ ಶ್ರೀಲಂಕಾ ಅಂಡರ್ 19 ತಂಡದ ವಿರುದ್ಧದ ಪಂದ್ಯದಲ್ಲಿ ಭಾರತ ಅಂಡರ್ 19 ತಂಡದ ಪರ ಕಣಕ್ಕಿಳಿದು 28 ಎಸೆತಗಳಿಗೆ ಅಜೇಯ 52 ರನ್ ಬಾರಿಸಿದ್ದ ಆಯುಷ್ ಬದೋನಿ ಹೆಚ್ಚಿನ ಪಂದ್ಯಗಳನ್ನಾಡಿರುವ ಅನುಭವವನ್ನು ಹೊಂದಿಲ್ಲ.

ಬಲಿಷ್ಠ ಬೌಲರ್‌ಗಳಿಗೆ ಹೊಡೆತ
ಮೆಗಾ ಹರಾಜಿನಲ್ಲಿ 20 ಲಕ್ಷಕ್ಕೆ ಲಕ್ನೋ ಸೂಪರ್ ಜಯಂಟ್ಸ್ ತಂಡ ಸೇರಿದ ಆಯುಷ್ ಬದೋನಿ ತಾನಾಡಿದ ಮೊದಲ ಪಂದ್ಯದಲ್ಲಿಯೇ 41 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 54 ರನ್ ಗಳಿಸಿದ್ದು, ರಶೀದ್ ಖಾನ್ ಮತ್ತು ಲಾಕಿ ಫರ್ಗ್ಯುಸನ್ ರೀತಿಯ ಅಂತರರಾಷ್ಟ್ರೀಯ ಬೌಲರ್‌ಗಳಿಗೆ ಸಿಕ್ಸರ್, ಬೌಂಡರಿ ಬಾರಿಸಿ ಕ್ರಿಕೆಟ್ ಪ್ರೇಕ್ಷಕರು ಹಾಗೂ ಹಿರಿಯ ಕ್ರಿಕೆಟಿಗರ ಗಮನ ಸೆಳೆದಿದ್ದಾರೆ.


ಮೆಗಾ ಹರಾಜು
ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ತನ್ನನ್ನು ಹರಾಜಿನಲ್ಲಿ ಖರೀದಿಸಿದ್ದರ ಕುರಿತು ಮಾತನಾಡಿದ ಆಯುಷ್ ಬದೋನಿ ಕಳೆದ 3 ವರ್ಷಗಳಿಂದ ತನ್ನನ್ನು ಯಾವ ತಂಡವೂ ಕೂಡ ಹರಾಜಿನಲ್ಲಿ ಖರೀದಿಸಿರಲಿಲ್ಲ. ಆದರೆ ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತನ್ನಂಥ ಆಟಗಾರನನ್ನು ಗುರುತಿಸಿ ಅವಕಾಶ ನೀಡಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ ಹಾಗೂ ಈ ವೇಳೆ ಗೌತಮ್ ಗಂಭೀರ್ ತನ್ನ ಬೆನ್ನ ಹಿಂದೆ ನಿಂತಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications