ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್-2024ರ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆಲೌಟ್ ಮಾಡುವ ಮೂಲಕ ಕಡಿಮೆ ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಗುಜರಾತ್ ಟೈಟನ್ಸ್ ಯಶಸ್ವಿಯಾಗಿದೆ.
ಶುಭ್ಮನ್ ಗಿಲ್ ಪಡೆಯ ಸಂಘಟಿತ ಬೌಲಿಂಗ್ ದಾಳಿಗೆ ಪತರಗುಟ್ಟಿದ್ದ ಪಂಜಾಬ್ ಬ್ಯಾಟರ್ಸ್ ಸಾಲು ಸಾಲು ವಿಕೆಟ್ ಕಳೆದುಕೊಂಡು ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಹೀಗಾಗಿ ನಿಗದಿತ 20 ಓವರ್‌ಗಳ 10 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 142 ರನ್‌ಗಳಿಗೆ ಪಂಜಾಬ್ ಸುಸ್ತಾಗಿ ಹೋಯಿತು. ಇದೀಗ ಗುಜರಾತ್ ತಂಡದ ಗೆಲುವಿಗೆ 143 ರನ್‌ಗಳ ಅವಶ್ಯಕತೆ ಇದೆ.

ಟಾಸ್ ಗೆದ್ದ ಗುಜರಾತ್ ಟೈಟನ್ಸ್ ನಾಯಕ ಶುಭ್ಮನ್ ಗಿಲ್ ಆಹ್ವಾನದ ಮೇರೆಗೆ ಇನ್ನಿಂಗ್ಸ್ ಶುರು ಮಾಡಿದ ಪಂಜಾಬ್ ಕಿಂಗ್ಸ್ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ಪಂಜಾಬ್ ನಾಯಕ ಸ್ಯಾಮ್ ಕರ್ರನ್ ಮತ್ತು ಪ್ರಭ್‌ಸಿಮ್ರಾನ್ ಸಿಂಗ್ 52 ರನ್‌ಗಳನ್ನು ಕಲೆಹಾಕಿದರು. ಅದ್ಭುತವಾಗಿ ಆಡುತ್ತಿದ್ದ ಈ ಜೋಡಿಯನ್ನು ಮೋಹಿತ್ ಶರ್ಮಾ ಬೇರ್ಪಡಿಸಿದರು. ಪ್ರಭ್‌ಸಿಮ್ರಾನ್ ಸಿಂಗ್ (35) ಆರ್ಕಷಕ ಮೂರು ಸಿಕ್ಸ್‌ರ್ ಹಾಗು ಮೂರು ಬೌಂಡರಿ ಸಿಡಿಸಿ ಔಟ್ ಆದರು.
ನಂತರ ಸ್ಯಾಮ್ ಕರ್ರನ್ (20) ಕೂಡ ರಶೀದ್ ಖಾನ್ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡರು. ಬಳಿಕ ಕ್ರೀಸ್‌ಗೆ ಬಂದ ಯಾವುದೇ ಆಟಗಾರನೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲುವ ಪ್ರಯತ್ನ ಮಾಡಲಿಲ್ಲ. ಹೀಗಾಗಿ ಒಬ್ಬರ ಹಿಂದೆ ಒಬ್ಬರು ವಿಕೆಟ್ ಕಳೆದುಕೊಳ್ಳಬೇಕಾಯಿತು. ಮೊದಲ ಐದು ಓವರ್‌ಗಳಲ್ಲಿ ಹೆಚ್ಚು ರನ್‌ಗಳನ್ನು ಬಿಟ್ಟು ಕೊಟ್ಟ ಗುಜರಾತ್ ಬೌಲರ್ಸ್ ತದನಂತರ ಪಂಜಾಬ್ ರನ್ ವೇಗಕ್ಕೆ ಬ್ರೇಕ್ ಹಾಕುವುದರಲ್ಲಿ ಯಶ ಕಂಡರು.
ಕಳೆದ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಶಶಾಂಕ್ ಸಿಂಗ್(8) ಮತ್ತು ಅಶುತೋಷ್ ಶರ್ಮಾ (3) ಈ ಬಾರಿ ಪಂಜಾಬ್‌ಗೆ ಆಸರೆಯಾಗಲಿಲ್ಲ. ಇನ್ನುಳಿಂತೆ ಸ್ಪೋಟಕ ಬ್ಯಾಟರ್‌ಗಳಾದ ರಿಲೀ ರೊಸೊವ್(9), ಲಿಯಾಮ್ ಲಿವಿಂಗ್‌ಸ್ಟೋನ್(6), ಜಿತೇಶ್ ಶರ್ಮಾ(13) ಗುಜರಾತ್ ಬೌಲರ್ಸ್ ಎದುರಿಸುವಲ್ಲಿ ವಿಫಲವಾದರು. ಪಂದ್ಯದ ಮಧ್ಯದಲ್ಲಿ ಸಿಡಿದೆದ್ದ ಹರ್‌ಪ್ರೀತ್ ಬ್ರಾರ್(29) ಬಿಗ್ ಸ್ಕೋರ್ ಕಲೆ ಹಾಕುವ ಸಂದೇಶ ನೀಡಿದರು. ಆದರೇ ಹರ್‌ಪ್ರೀತ್ ಬ್ರಾರ್ ವಿಕೆಟ್ ಅನ್ನು ರವಿಶ್ರೀನಿವಾಸನ್ ಸಾಯಿ ಕಿಶೋರ್ ಪಡೆದುಕೊಂಡರು.
ಹರ್ಷಲ್ ಪಟೇಲ್(0) ಬಂದ ದಾರಿಗೆ ಸುಂಕವಿಲ್ಲದಂತೆ ಕ್ಯಾಚ್ ನೀಡಿ ಹೊರ ನಡೆದರು. ಕೊನೆಯ ಎಸೆತದಲ್ಲಿ ಹರ್‌ಪ್ರೀತ್ ಸಿಂಗ್ ಭಾಟಿಯಾ (14) ರನ್ ಔಟ್ ಆದರೆ, ಕಗಿಸೊ ರಬಾಡ(1) ಅಜೇಯರಾಗಿ ಉಳಿದರು.
ಗುಜರಾತ್ ಬೌಲಿಂಗ್ ಪ್ರದರ್ಶನ : ಜಿಟಿ ಪರ ಉತ್ತಮ ಬೌಲಿಂಗ್ ಪ್ರದರ್ಶನ ಕಂಡು ಬಂತು. ರವಿಶ್ರೀನಿವಾಸನ್ ಸಾಯಿ ಕಿಶೋರ್ ಅವರು ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ನೂರ್ ಅಹ್ಮದ್ ಮತ್ತು ಮೋಹಿತ್ ಶರ್ಮಾ ತಲಾ ಎರಡು ವಿಕೆಟ್ ಹಾಗು ರಶೀದ್ ಖಾನ್ ಒಂದು ವಿಕೆಟ್ ಉರಳಿಸಿದರು.