ಭಾನುವಾರ, 28ರಂದು ಅಹಮದಾಬಾದ್‌ನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 45ನೇ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ ಸಾಯಿ ಸುದರ್ಶನ್ ಮತ್ತು ಶಾರೂಖ್ ಖಾನ್ ಅವರ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
201 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಲ್ ಜ್ಯಾಕ್ಸ್ ಅವರ ಚೊಚ್ಚಲ ಐಪಿಎಲ್ ಶತಕ ಮತ್ತು ವಿರಾಟ್ ಕೊಹ್ಲಿ ಅಮೋಘ ಅರ್ಧಶತಕದ ಸಹಾಯದಿಂದ ಕೇವಲ 16 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲುವಿನ ನಗೆ ಬೀರಿತು.

ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿಗಳೊಂದಿಗೆ ವಿಲ್ ಜ್ಯಾಕ್ಸ್ ಅವರೊಂದಿಗೆ ಮುರಿಯದ ಎರಡನೇ ವಿಕೆಟ್‌ಗೆ 166 ರನ್‌ಗಳ ಜೊತೆಯಾಟದಲ್ಲಿ ಪಾಲ್ಗೊಂಡರು. ವಿಲ್ ಜ್ಯಾಕ್ಸ್ ಕೇವಲ 41 ಎಸೆತಗಳಲ್ಲಿ 5 ಬೌಂಡರಿ ಹಾಗೂ 10 ಸಿಕ್ಸರ್‌ಗಳ ಸಮೇತ ಅಜೇಯ 100 ರನ್ ಗಳಿಸಿದರು.
ಪಂದ್ಯದ ನಂತರ ಮಾತನಾಡಿದ ವಿರಾಟ್ ಕೊಹ್ಲಿ, "ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡಲು ಮತ್ತು ನಾನು ಸ್ಪಿನ್ ವಿರುದ್ಧ ಚೆನ್ನಾಗಿ ಆಡದಿರುವ ಬಗ್ಗೆ ಎಲ್ಲಾ ಜನರು ಮಾತನಾಡಲು ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದರೆ, ನನಗೆ ತಂಡಕ್ಕಾಗಿ ಪಂದ್ಯವನ್ನು ಗೆಲ್ಲುವ ಬಗ್ಗೆ ಸ್ಪಷ್ಟತೆ ಇದೆ ಮತ್ತು ನಾನು 15 ವರ್ಷಗಳಿಂದ ಇದನ್ನು ಮಾಡುವುದಕ್ಕೆ ಕಾರಣವಿದೆ," ಎಂದು ಹೇಳಿದರು.

"ನಾನು ಇದನ್ನು ದಿನದಿಂದ ದಿನಕ್ಕೆ ಮಾಡಿದ್ದೇನೆ. ನಾನು ಆಡುವ ತಂಡಕ್ಕಾಗಿ ಹಲವು ಪಂದ್ಯಗಳನ್ನು ಗೆಲ್ಲುವುದನ್ನು ನೀವು ನೋಡಿದ್ದೀರಿ. ನೀವು ಅಂತಹ ಪರಿಸ್ಥಿತಿಯಲ್ಲಿ ಇರದಿದ್ದರೆ, ಕಾಮೆಂಟರಿ ಬಾಕ್ಸ್‌ನಲ್ಲಿ ಕುಳಿತು ಆಟದ ಕುರಿತು ಮಾತನಾಡುವ ಬಗ್ಗೆ ಏನು ಹೇಳಬೇಕು ನನಗೆ ಖಚಿತವಿಲ್ಲ," ಎಂದು ಟೀಕಿಸಿದರು.
"ಇದು ಒಂದೇ ವಿಷಯ ಎಂದು ನಾನು ಭಾವಿಸುವುದಿಲ್ಲ, ನಾನು ತಂಡಕ್ಕಾಗಿ ಈ ಕೆಲಸ ಮಾಡುತ್ತೇನೆ. ಜನರು ತಮ್ಮ ಸ್ವಂತ ಆಲೋಚನೆಗಳು ಮತ್ತು ಆಟದ ಊಹೆಗಳ ಬಗ್ಗೆ ಕುಳಿತು ಮಾತನಾಡಬಹುದು. ಆದರೆ ಅದನ್ನು ಮಾಡಿದವರು, ದಿನದಿಂದ ದಿನಕ್ಕೆ ಅವರು ಏನು ಮಾಡುತ್ತಿದ್ದಾರೆಂದು ಅವರಿಗೆ ತಿಳಿದಿದೆ. ಇದು ನನಗೆ ಸಾಮರ್ಥ್ಯದ ಸ್ಮರಣೆಯಾಗಿದೆ," ಎಂದು ವಿರಾಟ್ ಕೊಹ್ಲಿ ಕಟುವಾಗಿ ಮಾತನಾಡಿದರು.
ಕಳೆದ ವಾರ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಆರ್‌ಸಿಬಿ ತಂಡದ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಅವರ ಸ್ಟ್ರೈಕ್ ರೇಟ್ ಅನ್ನು ಪ್ರಶ್ನಿಸಲಾಯಿತು. ಮಯಾಂಕ್ ಮಾರ್ಕಂಡೆ ಮತ್ತು ಶಹಬಾಜ್ ಅಹ್ಮದ್ ಅವರಂತಹ ಬೌಲರ್‌ಗಳ ವಿರುದ್ಧ 43 ಎಸೆತಗಳಲ್ಲಿ ವಿರಾಟ್ ಕೊಹ್ಲಿ ಕೇವಲ 51 ರನ್ ಗಳಿಸಿದರು.