GT vs RR IPL 2025: ಗುಜರಾತ್ ಗೆಲುವಿನಲ್ಲಿ ಮಿಂಚಿದ ಸಾಯಿ ಸುದರ್ಶನ್, ಕನ್ನಡಿಗ ಪ್ರಸಿದ್ಧ್ ಕೃಷ್ಣ
ಭರವಸೆಯ ಬ್ಯಾಟರ್ ಸಾಯಿ ಸುದರ್ಶನ್ ಅವರು ಬಾರಿಸಿದ ಅರ್ಧಶತಕ ಹಾಗೂ ಕನ್ನಡಿಗ ಪ್ರಸಿದ್ಧ ಕೃಷ್ಣ ಅವರು ಪಡೆದ ಮೂರು ವಿಕೆಟ್‌ಗಳ ಬಲದಿಂದ ಗುಜರಾತ್ ಟೈಟನ್ಸ್ 18ನೇ ಆವೃತ್ತಿಯ ಐಪಿಎಲ್‌ನಲ್ಲಿ 58 ರನ್‌ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿ ಲೀಗ್‌ನಲ್ಲಿ ಸತತ ನಾಲ್ಕನೇ ಗೆಲುವಿನ ನಗೆ ಬೀರಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ಗುಜರಾತ್ ಟೈಟನ್ಸ್ ಅಗ್ರ ಸ್ಥಾನವನ್ನು ಪಡೆದಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 217 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ 19.2 ಓವರ್‌ಗಳಲ್ಲಿ 159 ರನ್ ಕಲೆ ಹಾಕಿ ಸೋಲು ಕಂಡಿದೆ. ಈ ಮೂಲಕ ಹ್ಯಾಟ್ರಿಕ್ ಗೆಲುವಿನ ನಗೆ ಬೀರುವ ಕನಸು ಕಂಡಿದ್ದ ರಾಜಸ್ಥಾನ ರಾಯಲ್ಸ್‌ಗೆ ಶಾಕ್ ಕಾದಿದೆ.

ಜಿಟಿ ಪವರ್ ಫುಲ್ ಆರಂಭ
ಸವಾಲಿನ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ ಆರಂಭ ಕಳಪೆಯಾಗಿತ್ತು. ಕಳೆದ ಪಂದ್ಯದಲ್ಲಿ ಅಮೋಘ ಲಯ ಕಂಡುಕೊಂಡಿದ್ದ ಯಶಸ್ವಿ ಜೈಸ್ವಾಲ್ ನಿರಾಸೆ ಅನುಭವಿಸಿದರು. ಇವರು 6 ರನ್ ಬಾರಿಸಿ ಅರ್ಷದ್ ಖಾನ್‌ಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ನಿತೀಶ್ ರಾಣಾ ಸಹ ಬಿಗ್ ಇನಿಂಗ್ಸ್ ಆಡುವಲ್ಲಿ ವಿಫಲರಾದರು.
ಮೂರನೇ ವಿಕೆಟ್‌ಗೆ ಸಂಜು ಸ್ಯಾಮ್ಸನ್ ಹಾಗೂ ರಿಯಾನ್ ಪರಾಗ್ ಜೋಡಿ ತಂಡಕ್ಕೆ ಚಿಕ್ಕ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಪವರ್ ಪ್ಲೇನಲ್ಲಿ ವಿಕೆಟ್ ಬೀಳದಂತೆ ನೋಡಿಕೊಂಡಿತು. ಈ ವೇಳೆ ಈ ಜೋಡಿ 48 ರನ್ ಸೇರಿಸಿತು. ಪರಾಗ್ 26 ರನ್ ಬಾರಿಸಿದ್ದಾಗ ಖೇಜ್ರೋಲಿಯಾ ಎಸೆತದಲ್ಲಿ ವಿಕೆಟ್ ಕೀಪರ್ ಬಟ್ಲರ್‌ಗೆ ಕ್ಯಾಚ್ ನೀಡಿದರು. ಭರವಸೆಯ ಬ್ಯಾಟರ್ ಧ್ರುವ್ ಜುರೇಲ್ (5) ಬಂದು ಹೋಗುವ ಸಂಪ್ರದಾಯ ಮುಗಿಸಿದರು.
ಐದನೇ ವಿಕೆಟ್‌ಗೆ ಸಂಜು ಸ್ಯಾಮ್ಸನ್‌ಗೆ ಜೊತೆಯಾದ ಅನುಭವಿ ಬ್ಯಾಟರ್ ಶಿಮ್ರೋನ್ ಹೆಟ್ಮೆಯರ್ ಜೋಡಿ ಸಹ 48 ರನ್‌ಗಳ ಜೊತೆಯಾಟವನ್ನು ನೀಡಿತು. 13ನೇ ಓವರ್‌ನ 2 ಎಸೆತದಲ್ಲಿ ಪ್ರಸಿದ್ಧ ಕೃಷ್ಣ ಎಕ್ಸ್‌ಟ್ರಾ ಬೌನ್ಸ್ ಹಾಕಿ ಸಂಜು ಸ್ಯಾಮ್ಸನ್‌ಗೆ ಕಾಟ ನೀಡಿದರು. ಇವರು ಈ ಎಸೆತವನ್ನು ಶಾರ್ಟ್ ಥರ್ಡ್ ಮೇಲಿನಿಂದ ಬೌಂಡರಿ ಬಾರಿಸುವ ಭರಾಟೆಯಲ್ಲಿ ಸಂಜು ಸಾಯಿ ಕಿಶೋರ್‌ಗೆ ಕ್ಯಾಚ್ ನೀಡಿದರು.
ನಂತರ ಬಂದ ಯಾವುದೇ ಬ್ಯಾಟರ್ ಶಿಮ್ರೋನ್ ಹೆಟ್ಮೆಯಾರ್‌ಗೆ ಉತ್ತಮ ಸಾಥ್ ನೀಡಲಿಲ್ಲ. ಇವರು ರಾಜಸ್ಥಾನ ಪರ ಏಕಾಂಗಿ ಹೋರಾಟ ನಡೆಸಿದರು. ಶಿಮ್ರೋನ್ 32 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 52 ರನ್ ಸಿಡಿಸಿ ಮುನ್ನುಗುತ್ತಿದ್ದಾಗ ಪ್ರಸಿದ್ಧ ಅವರ ಎಸೆತದಲ್ಲಿ ಸ್ಕ್ವೇರ್ ಲೆಗ್ ಮೇಲೆ ಸಿಕ್ಸರ್ ಬಾರಿಸಲು ಹೋಗಿ ಔಟ್ ಆದರು.
ಜವಾಬ್ದಾರಿ ಮರೆತ ಗಿಲ್
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ ತಂಡದ ಆರಂಭ ಕಳಪೆಯಾಗಿತ್ತು. ನಾಯಕ ಶುಭಮನ್ ಗಿಲ್ ಜೋಫ್ರಾ ಆರ್ಚರ್ ಅವರು ಎಸೆದ ಗಂಟೆಗೆ 147 ಕಿಲೋ ಮೀಟರ್ ವೇಗದ ಎಸೆತವನ್ನು ಎದುರಿಸುವಲ್ಲಿ ವಿಫಲರಾಗಿ ಬೋಲ್ಡ್ ಆದರು. ಗುಜರಾತ್ 14 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ತಂಡಕ್ಕೆ ಆಧಾರವಾಗಿದ್ದು, ಭರವಸೆಯ ಆಟಗಾರ ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್.

ಪವರ್ ಪ್ಲೇನಲ್ಲಿ ವಿಕೆಟ್ ಬಿದ್ದ ಮೇಲೆ ಒತ್ತಡಕ್ಕೆ ಒಳಗಾಗದೆ ಬ್ಯಾಟ್ ಮಾಡಿದ ಸಾಯಿ ಸುದರ್ಶನ್ ಹಾಗೂ ಬಟ್ಲರ್ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿತು. ಈ ವೇಳೆ ಈ ಜೋಡಿ ಅಬ್ಬರಕ್ಕೆ ಬ್ರೇಕ್ ಹಾಕುವಲ್ಲಿ ರಾಜಸ್ಥಾನ ಬೌಲರ್ ವಿಫಲರಾದರು. ಈ ಜೋಡಿ 47 ಎಸೆತಗಳಲ್ಲಿ 80 ರನ್ ಸೇರಿಸಿ ಅಬ್ಬರಿಸಿತು. ಈ ವೇಳೆ ಜೋಸ್ ಬಟ್ಲರ್ 36 ರನ್ ಬಾರಿಸಿದ್ದಾಗ ಔಟ್ ಆದರು.
10ನೇ ಓವರ್‌ನ ಕೊನೆಯ ಎಸೆತದಲ್ಲಿ ಜೋಸ್ ಬಟ್ಲರ್ ಅವರಿಗೆ ಮಹೀಶ್ ತೀಕ್ಷಣ ಎಸೆತವನ್ನು ತಪ್ಪಾಗಿ ಅರ್ಥಹಿಸಿಕೊಂಡು ಬಿಗ್ ಹಿಟ್ ಬಾರಿಸಲು ಹೋಗಿ ಎಲ್‌ಬಿ ಆದರು. ಈ ವೇಳೆ ಫೀಲ್ಡ್ ಅಂಪೈರ್ ಔಟ್ ನೀಡಿರಲಿಲ್ಲ. ಸಂಜು ಸ್ಯಾಮ್ಸನ್ ಡಿಆರ್‌ಎಸ್ ಪಡೆದು ಯಶ ಕಂಡರು.
3ನೇ ವಿಕೆಟ್‌ಗೆ 62 ರನ್ ಜೊತೆಯಾಟ
ಮೂರನೇ ವಿಕೆಟ್‌ಗೆ ಬಿ ಸಾಯಿ ಸುದರ್ಶನ್ ಅವರನ್ನು ಸೇರಿಕೊಂಡ ಶಾರೂಖ್ ಖಾನ್ ಜೋಡಿ ಉತ್ತಮ ಜೊತೆಯಾಟವನ್ನು ನೀಡಿತು. ಈ ಜೋಡಿ 34 ಎಸೆತಗಳವರೆಗೆ ವಿಕೆಟ್ ಬೀಳದಂತೆ ಕಾಯ್ದುಕೊಂಡಿತು. ಈ ವೇಳೆ ಶಾರೂಖ್ ಖಾನ್ ಮೈಚಳಿ ಬಿಟ್ಟು ಬ್ಯಾಟ್ ಮಾಡಿದರು. ಇವರು 20 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 36 ರನ್ ಬಾರಿಸಿ ಔಟ್ ಆದರು. ಇವರು ಔಟ್ ಆಗುವ ಮುನ್ನ ಶಾರೂಖ್ ಖಾನ್, ಸಾಯಿ ಸುದರ್ಶನ್ ಜೊತೆಗೂಡಿ 62 ರನ್‌ಗಳ ಜೊತೆಯಾಟವನ್ನು ನೀಡಿದರು.

ಶಾರೂಖ್ ಖಾನ್ ಔಟ್ ಆಗುತ್ತಿದ್ದಂತೆ ಮೈದಾನಕ್ಕೆ ಬಂದ ಶೆರ್ಫೇನ್ ರುದರ್ಫೋರ್ಡ್ (7) ತಾವು ಎದುರಿಸಿ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿ ಭರವಸೆ ಮೂಡಿಸಿದರು. ಆದರೆ ಸಂದೀಪ್ ಶರ್ಮಾ ತೋಡಿದ ಖೆಡ್ಡಾಗೆ ಬಲಿಯಾದರು.
ಸಾಯಿ ಸುದರ್ಶನ್ ಅಬ್ಬರ
ಆರಂಭಿಕ ಆಟಗಾರ ಸಾಯಿ ಸುದರ್ಶನ್ ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಇವರು ರಾಜಸ್ಥಾನ ಬೌಲರ್‌ಗಳನ್ನು ಮನಬಂದಂತೆ ಕಾಡಿದರು. ಇವರು 53 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಹಾಯದಿಂದ 82 ರನ್ ಬಾರಿಸಿ ಅಬ್ಬರಿಸಿದರು. ಇವರ ಆಟದ ನೆರವಿನಿಂದ ಗುಜರಾತ್ ಸವಾಲಿನ ಮೊತ್ತವನ್ನು ಕಲೆ ಹಾಕುವತ್ತ ಚಿತ್ತ ನೆಟ್ಟಿತು.
ರಾಜಸ್ಥಾನ ಪರ ತುಷಾರ್ ದೇಶಪಾಂಡೆ, ಮಹೀಶ್ ತೀಕ್ಷಣಾ ತಲಾ ಎರಡು ವಿಕೆಟ್ ಪಡೆದರು. ಜೋಫ್ರಾ ಆರ್ಚರ್ ಹಾಗೂ ಸಂದೀಪ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications