ಕ್ರಿಕೆಟ್ ಬದುಕೇ ಮುಗಿಯಬಹುದು ಎಂದು ಎಚ್ಚರಿಕೆ ನೀಡಿದರೂ ಒಂದೇ ಕೈನಲ್ಲಿ ಆಡಿದ್ದ ಹನುಮ ವಿಹಾರಿ

ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಂಧ್ರ ಪ್ರದೇಶ ತಂಡದ ನಾಯಕ ಹನುಮ ವಿಹಾರಿ ಒಂದೇ ಕೈನಲ್ಲಿ ಆಡುವ ಮೂಲಕ ಗಮನ ಸೆಳೆದಿದ್ದರು. ಮಧ್ಯಪ್ರದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಆವೇಶ್ ಖಾನ್ ಬೌಲಿಂಗ್‌ನಲ್ಲಿ ಚೆಂಡು ಅವರ ಬಲಗೈ ತಾಗಿ ಗಾಯಗೊಂಡಿದ್ದರು.
ಬಲಗೈ ಗಾಯಗೊಂಡಿದ್ದರೂ ಕಣಕ್ಕಿಳಿದಿದ್ದ ಹನುಮ ವಿಹಾರಿ ಒಂದೇ ಕೈನಲ್ಲಿ ಬ್ಯಾಟಿಂಗ್ ಮಾಡಿದ್ದರು. ಮೊದಲನೇ ಇನ್ನಿಂಗ್ಸ್ ಮಾತ್ರವಲ್ಲದೆ ಎರಡನೇ ಇನ್ನಿಂಗ್ಸ್‌ನಲ್ಲಿ ಕೂಡ ಹನುಮ ವಿಹಾರಿ ಬ್ಯಾಟಿಂಗ್ ಮಾಡಿದ್ದರು. ಬಲಗೈಗೆ ಗಾಯವಾದ ಕಾರಣ ಎಡಗೈ ಬ್ಯಾಟರ್ ರೀತಿ ಆಡಿದ್ದರು, ಅದು ಕೂಡ ಒಂದೇ ಕೈನಲ್ಲಿ.
ಹನುಮ ವಿಹಾರಿಯ ಆಟದ ಬದ್ದತೆ ಬಗ್ಗೆ ವಿಶ್ವದ ಕ್ರಿಕೆಟ್ ಅಭಿಮಾನಿಗಳಿಂದ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಬ್ಯಾಟಿಂಗ್‌ಗೆ ತೆರಳುವ ಮುನ್ನ ಫಿಸಿಯೋ ಗಂಭೀರವಾದ ಎಚ್ಚರಿಕೆ ನೀಡಿದ್ದರು ಎನ್ನುವ ವಿಚಾರವನ್ನು ಸ್ವತಃ ವಿಹಾರಿ ಬಹಿರಂಗಪಡಿಸಿದ್ದಾರೆ.
ಗಾಯದ ಪ್ರಮಾಣ ಗಂಭೀರವಾಗಿದ್ದರಿಂದ ಮತ್ತೆ ರಿಸ್ಕ್ ತೆಗೆದುಕೊಳ್ಳದಂತೆ ಫಿಸಿಯೋ ಎಚ್ಚರಿಕೆ ನೀಡಿದ್ದರು. ಅಲ್ಲದೆ ಇಡೀ ಜೀವನದಲ್ಲಿ ಮತ್ತೆ ಕ್ರಿಕೆಟ್ ಆಡಲು ಸಾಧ್ಯವಾಗದಿರಬಹುದು ಎಂದು ಹೇಳಿದ್ದರು. ಆದರೂ, ಹನುಮ ವಿಹಾರಿ ತಂಡಕ್ಕೆ ಆತ್ಮವಿಶ್ವಾಸ ನೀಡುವ ದೃಷ್ಟಿಯಿಂದ ಒಂದೇ ಕೈನಲ್ಲಿ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾಗಿ ಹೇಳಿಕೊಂಡಿದ್ದಾರೆ.

ಒಂದೇ ಕೈನಲ್ಲಿ ಬ್ಯಾಟಿಂಗ್
ಮೊದಲ ಇನ್ನಿಂಗ್ಸ್‌ನಲ್ಲಿ 27 ರನ್ ಗಳಿಸಿದ್ದ ವಿಹಾರಿ ಎರಡನೇ ಇನ್ನಿಂಗ್ಸ್‌ನಲ್ಲಿ 15 ರನ್ ಗಳಿಸಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ರಿವರ್ಸ್ ಸ್ವೀಪ್ ಮಾಡಿದ ದೃಶ್ಯ ಸಾಕಷ್ಟು ವೈರಲ್ ಆಗಿದ್ದು. ಆಂಧ್ರ ತಂಡದ ನಾಯಕನಾಗಿರುವ ಅವರು ನಾಯಕನಂತೆ ಆಡಲು ತೀರ್ಮಾನಿಸಿದ್ದರು.
ಈ ಬಗ್ಗೆ ಮಾತನಾಡಿರುವ ಅವರು, "ನಾನು ಬ್ಯಾಟಿಂಗ್ ಮಾಡುತ್ತೇನೆ ಎಂದು ಹೇಳಿದಾಗ, ಬ್ಯಾಟಿಂಗ್ ಮಾಡುವಾಗ ಮತ್ತೆ ಬಲಗೈಗೆ ಪೆಟ್ಟಾದರೆ ಕ್ರಿಕೆಟ್ ವೃತ್ತಿಜೀವನವೇ ಕೊನೆಯಾಗಬಹುದು ಎಂದು ಫಿಸಿಯೋ 10 ಬಾರಿ ಹೇಳಿದ್ದರು. ಮುಂದೆ ನಾನು ಕ್ರಿಕೆಟ್ ಆಡದಿದ್ದರೂ ತೊಂದರೆಯಿಲ್ಲ ಎಂದು ಫಿಸಿಯೋಗೆ ಹೇಳಿದೆ. ಆದರೆ, ಈ ಪಂದ್ಯದಲ್ಲಿ ನಾನು ಆಡದೆ ಇದ್ದರೆ ನನ್ನ ಹೃದಯದಲ್ಲಿ ಅಪರಾಧಿ ಭಾವನೆ ಕಾಡುತ್ತದೆ" ಎಂದು ಜಿಯೋ ಸಿನಿಮಾಗೆ ತಿಳಿಸಿದ್ದಾರೆ.

ಮುಖ್ಯವಾದ ಪಂದ್ಯವಾಗಿತ್ತು
"ಕ್ವಾರ್ಟರ್‌ಫೈನಲ್ ಪಂದ್ಯವಾಗಿದ್ದರಿಂದ ಇದು ಮಹತ್ವದ ಪಂದ್ಯ ಎಂದು ಗೊತ್ತಿತ್ತು. ನನಗೆ ಬ್ಯಾಟಿಂಗ್ ಮಾಡಲು ಸಾಧ್ಯವಾಗದ ಕಾರಣ ಹತಾಶನಾಗಿದ್ದೆ. ಕೊನೆಯ ವಿಕೆಟ್‌ಗೆ 10-15 ರನ್ ಸೇರಿಸಿದರು ಅದು ತಂಡಕ್ಕೆ ಅನುಕೂಲ ಎಂದು ಭಾವಿಸಿದ್ದೆ. ಆದ್ದರಿಂದ ನಾನು ಈ ನಿರ್ಧಾರ ತೆಗೆದುಕೊಂಡೆ, ಇದರಿಂದ ತಂಡಕ್ಕೆ ಆತ್ಮವಿಶ್ವಾಸ ಬರುತ್ತದೆ" ಎಂದು ವಿಹಾರಿ ಹೇಳಿದ್ದಾರೆ.

ವಿಹಾರಿ ಹೋರಾಟದ ನಡುವೆಯೂ ಸೋತ ಆಂಧ್ರ
ಹನುಮ ವಿಹಾರಿಯವರ ಧೈರ್ಯದ ಆಟದ ಹೊರತಾಗಿಯೂ ಆಂಧ್ರ ಪ್ರದೇಶ ಸೆಮಿಫೈನಲ್‌ಗೆ ತಲುಪಲು ಸಾಧ್ಯವಾಗಲಿಲ್ಲ. 5 ವಿಕೆಟ್‌ಗಳ ಜಯ ಸಾಧಿಸಿದ ಹಾಲಿ ಚಾಂಪಿಯನ್ ಮಧ್ಯಪ್ರದೇಶ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿತು.
ಪಂದ್ಯ ಸೋತ ಬಗ್ಗೆ ಮಾತನಾಡಿದ ಹನುಮ ವಿಹಾರಿ "ಸಾಕಷ್ಟು ನಿರಾಶೆಯಾಗಿದೆ ನಾವು ಸೆಮಿಫೈನಲ್ ಪ್ರವೇಶಿಸಬೇಕಿತ್ತು. ಆದರೂ ನಾನು ಉತ್ತಮವಾಗಿ ರನ್ ಗಳಿಸಲು ಪ್ರಯತ್ನ ಪಟ್ಟಿದ್ದೇನೆ. ಮುಂದೆ ಕೂಡ ಹೆಚ್ಚಿನ ರನ್ ಗಳಿಸುವ ಮೂಲಕ ಭಾರತ ತಂಡಕ್ಕೆ ವಾಪಸಾಗುವ ವಿಶ್ವಾಸವಿದೆ" ಎಂದು ವಿಹಾರಿ ಹೇಳಿದರು.
ಹನುಮ ವಿಹಾರಿ ಕೊನೆಯ ಬಾರಿಗೆ ಜುಲೈ 2022ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕಾಗಿ ಆಡಿದ್ದರು. ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಗೆ ಹನುಮ ವಿಹಾರಿ ಆಯ್ಕೆಯಾಗಿರಲಿಲ್ಲ. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅವರು ತಂಡಕ್ಕೆ ಬರುವ ವಿಶ್ವಾಸ ಹೊಂದಿದ್ದರು, ಆದರೂ ಅವರು ತಂಡಕ್ಕೆ ಆಯ್ಕೆಯಾಗಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications