ಕ್ರಿಕೆಟ್ ದೇವರಿಗೆ ಟ್ವಿಟ್ಟರ್ ನಮನ
ಅಂತಾರಾಷ್ಟ್ರೀಯ ಕ್ರಿಕೆಟ್ ಲೋಕದ ಜೀವಂತ ದಂತಕತೆ ಸಚಿನ್ ತೆಂಡೂಲ್ಕರ್ ಹುಟ್ಟಿ ಇಂದಿಗೆ 44 ವರ್ಷ. ಹದಿನಾರನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡಿದ ಐದೂವರೆ ಅಡಿ ಎತ್ತರದ ಸಚಿನ್ ಕಣ್ಣಲ್ಲಿ ಭವಿಷ್ಯದ ಕ್ರಿಕೆಟ್ ದೇವರೊಬ್ಬ ಅಂದೇ ಇಣುಕುತ್ತಿದ್ದ!
ಕ್ರಿಕೆಟ್ ಎಂದರೆ ಸಚಿನ್ ಎಂಬಷ್ಟರ ಮಟ್ಟಿಗೆ ಕ್ರಿಕೆಟ್ ಎಂಬ ಪದಕ್ಕೆ ಅನ್ವರ್ಥವಾದ ಸಚಿನ್, ಮಾಸ್ಟರ್ ಬ್ಲಾಸ್ಟರ್ ಆಗಿ, ಕ್ರಿಕೆಟ್ ದೇವರಾಗಿ, ಭಾರತರತ್ನವಾಗಿ, ಆಗಾಗ ನರ್ವಸ್ ನೈಂಟಿಯಾಗಿ, ದಾಖಲೆಗಳ ಸರದಾರನಾಗಿ, ಕ್ರಿಕೆಟ್ ಪ್ರೇಮಿಗಳ ಮನಸ್ಸಿನಲ್ಲಿ ಮಾಸದ ಹೆಜ್ಜೆಗುರುತು ಮೂಡಿಸಿದ್ದಾರೆ.
ಪ್ರತಿವರ್ಷವೂ ಸಚಿನ್ ಹುಟ್ಟು ಹಬ್ಬದಂದು ಟ್ವೀಟ್ಟರ್ ನಲ್ಲಿ ಶುಭಹಾರೈಕೆಗಳ ಸುರಿಮಳೆ ಕಳೆಗಟ್ಟುತ್ತದೆ. ಈ ವರ್ಷವೂ ನೂರಾರು ಸೆಲೆಬ್ರಿಟಿಗಳು, ಸಚಿನ್ ಅಭಿಮಾನಿಗಳು ತೆಂಡೂಲ್ಕರ್ ಅವರ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದ್ದಾರೆ.
ಇದರೊಂದಿಗೆ ಮೇ 26 ರಂದು ಬಿಡುಗಡೆಯಾಗಲಿರುವ ಸಚಿನ್ ಜೀವನ ಚರಿತ್ರೆಯನ್ನು ಆಧರಿಸಿದ, 'ಸಚಿನ್: ಎ ಬಿಲಿಯನ್ ಡ್ರೀಮ್ಸ್' (Sachin A Billion Dreams) ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿ ಲಕ್ಷಾಂತರ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಸಚಿನ್ ಹುಟ್ಟುಹಬ್ಬಕ್ಕೆ ಶುಭಹಾರೈಸಿದ ಕೆಲವು ಸೆಲೆಬ್ರಿಟಿಗಳ ಟ್ವಿಟ್ಟರ್ ಗಳು ನಿಮಗಾಗಿ ಇಲ್ಲಿವೆ...
ನನ್ನ ಕ್ರಿಕೆಟ್ ಹೀರೋ
ಹ್ಯಾಪಿ ಬರ್ತ್ ಡೇ ಪಾಜಿ... ದೇವರು ನಿಮಗೆ ಇನ್ನೂ ಹೆಚ್ಚಿನ ಸುಖ, ಸಂತೋಷ ನೀಡಲಿ. ನೀವು ಯಾವತ್ತಿಗೂ ನನ್ನ ಕ್ರಿಕೆಟ್ ಹೀರೋ, ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೋಹ್ಲಿ ಟ್ವೀಟ್ ಮಾಡಿದ್ದಾರೆ.
ದೇವರು ಮಲಗಿದ್ದಾರೆ..!
ವಿಮಾನದಲ್ಲಿ ಸಚಿನ್ ತೆಂಡೂಲ್ಕರ್ ನಿದ್ರಿಸುತ್ತಿರುವ ಅಪರೂಪದ ಚಿತ್ರವೊಂದನ್ನು ಪೋಸ್ಟ್ ಮಾಡಿರುವ ವೀರೇಂದ್ರ ಸೆಹ್ವಾಗ್, 'ದೇವರು ಮಲಗಿದ್ದಾನೆ, ಭಾರತದಲ್ಲಿ ಸಮಯವನ್ನೂ ಹಿಡಿದು ನಿಲ್ಲಿಸುವ ಸಾಮರ್ಥ್ಯವಿರುವ ವ್ಯಕ್ತಿಗೆ ಇಂದು ಜನ್ಮ ದಿನದ ಶುಭಾಶಯಗಳು' ಎಂದು ಟ್ವೀಟ್ ಮಾಡಿದ್ದಾರೆ.
ಆಜೀವ ಅಭಿಮಾನಿ!
ಕ್ರಿಕೆಟ್ ಯಾವತ್ತಿದ್ದರೂ ನಿಮ್ಮ ಹೆಸರಿಗೆ ಅನ್ವರ್ಥವಾಗಿರುತ್ತದೆ. ನಿಮ್ಮ ಆಜೀವ ಅಭಿಮಾನಿಯಿಂದ ಹುಟ್ಟು ಹಬ್ಬದ ಶುಭಾಶಯಗಳು ಎಂದು ಸುಶಾಂತ್ ಸಿಂಗ್ ರಜಪೂತ್ ಟ್ವೀಟ್ ಮಾಡಿದ್ದಾರೆ. ಸುಶಾಂತ್ ಅಭಿನಯದ ಮಹೇಂದ್ರ ಸಿಂಗ್ ಧೋನಿ ಅವರ ಜೀವನ ಚರಿತ್ರೆಯನ್ನಾಧರಿಸಿದ 'ಧೋನಿ: ದಿ ಅನ್ ಟೋಲ್ಡ್ ಸ್ಟೋರಿ' ಚಿತ್ರ ಅಪಾರ ಮೆಚ್ಚುಗೆ ಗಳಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಹಾರ್ದಿಕ ಶುಭಾಶಯ
ಭಾರತರತ್ನ ಮತ್ತು ಕ್ರಿಕೆಟ್ ದೇವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು ಎಂದು ಬಾಕ್ಸರ್ ವಿಜೇಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಬದುಕಲ್ಲಿ ಸಂತಸ ತುಂಬಿರಲಿ
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಅವರ ಮುಂದಿನ ದಿನಗಳು ಸಂತೋಷದಿಂದ ತುಂಬಿರಲಿ ಎಂದು, ಕ್ರಿಕೆಟಿಗ ಸುರೇಶ್ ರೈನಾ ಹಾರೈಸಿದ್ದಾರೆ.
ಸ್ಫೂರ್ತಿದಾಯಕ ಕ್ರಿಕೆಟಿಗ
ಜಗತ್ತು ಕಂಡ ಅತ್ಯಂತ ಸ್ಫೂರ್ತಿದಾಯಕ ಕ್ರಿಕೆಟಿಗರಲ್ಲೊಬ್ಬರಾದ ಸಚಿನ್ ತೆಂಡೂಲ್ಕರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ಟೀಂ ಇಂಡಿಯಾ ಬೌಲಿಂಗ್ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ.
ಭಾವನೆಗಳನ್ನು ತಟ್ಟಿದ ಸಚಿನ್
ಕೋಟ್ಯಂತರ ಜನರ ಭಾವನೆಗಳನ್ನು ತಟ್ಟಿದ ಸಚಿನ್ ಗೆ ಹುಟ್ಟು ಹಬ್ಬದ ಶುಭಾಶಯಗಳು. ಅವರು ಎಂದಿಗೂ ನಮ್ಮ ಬದುಕಿನ ಒಂದು ಭಾಗವಾಗಿರುತ್ತಾರೆ.
ಭಾರತೀಯರ ಹೃದಯದಲ್ಲಿ ಸಚಿನ್
ಕೋಟ್ಯಂತರ ಭಾರತೀಯರ ಹೃದಯದಲ್ಲಿ ನೆಲೆಸಿರುವ ಕ್ರಿಕೆಟ್ ದೇವರಿಗೆ ಜನ್ಮದಿನದ ಶುಭಾಶಯಗಳು ಎಂದು ಮನೋಜ್ ತಿವಾರಿ ಟ್ವೀಟ್ ಮಾಡಿದ್ದಾರೆ.
ಸಚಿನ್ ಪ್ರತಿಕ್ರಿಯೆ
ಇಂಥ ನೂರಾರು ಹಾರೈಕೆಗಳಿಗೆ ಪ್ರತಿಕ್ರಿಯಿಸಿರುವ ಸಚಿನ್ ತೆಂಡೂಲ್ಕರ್, ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ತುಂಬಿದ ಹಾರೈಕೆಗೆ ನನ್ನ ಹೃಯದಪೂರ್ವಕ ಧನ್ಯವಾದ ಎಂದು, ತಾವು ಧನ್ಯವಾದ ಸಲ್ಲಿಸಿದ ವಿಡಿಯೋವನ್ನೂ ಅಪ್ ಲೋಡ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications