ಭಾರತ ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಬಹು ನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ. ಈ ಪಂದ್ಯಾವಳಿ ಮೂಲಕ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ ತಮ್ಮ ದಶಕದ ಐಸಿಸಿ ಟ್ರೋಫಿಯ ಬರವನ್ನು ನೀಗಿಸಿಕೊಳ್ಳುವ ಗುರಿ ಹೊಂದಿದೆ.
ಅಕ್ಟೋಬರ್ 5ರಂದು ಅಹಮದಾಬಾದ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ವಿರುದ್ಧ ಸೆಣಸುವ ಮೂಲಕ ಪಂದ್ಯಾವಳಿ ಆರಂಭವಾಗಲಿದೆ. ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
ಇದೇ ವೇಳೆ ಭಾರತ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿಹಿಡಿಯಲು ಭಾರತದ ಎಲ್ಲಾ ಆಟಗಾರರು ಒಗ್ಗಟ್ಟಿನಿಂದ ಹೆಜ್ಜೆ ಹಾಕಬೇಕು ಎಂದು ಸಲಹೆ ನೀಡಿದ್ದಾರೆ.

ಹೆಚ್ಚಿನ ಒತ್ತಡದ ಸಂದರ್ಭಗಳಲ್ಲಿ ಭಾರತ ತಂಡದ ಕೇವಲ ಒಬ್ಬರು ಅಥವಾ ಇಬ್ಬರು ಆಟಗಾರರು ಮಾತ್ರ ಪ್ರದರ್ಶನ ನೀಡಿದ್ದಾರೆ ಎಂದು ಹರ್ಭಜನ್ ಸಿಂಗ್ ಗಮನ ಸೆಳೆದರು. ಎಲ್ಲಾ ಆಟಗಾರರು ಒತ್ತಡದ ಸಂದರ್ಭದಲ್ಲಿ ಮೇಲೇರುವ ಸಾಮರ್ಥ್ಯವನ್ನು ಹೊಂದಿರಬೇಕು ಎಂದು ಹೇಳಿದರು.
"ನಮ್ಮಲ್ಲಿ ಏನಿದೆ ಮತ್ತು ಯಾರಿಲ್ಲ ಎಂದು ಹೇಳುವುದು ನನಗೆ ತುಂಬಾ ಕಷ್ಟ. ನಾವು 2015 ಮತ್ತು 2019ರಲ್ಲಿ ಸೆಮಿಫೈನಲ್‌ವರೆಗೆ ಬಂದಿದ್ದೇವೆ. ಆದರೆ ಐಸಿಸಿ ಟ್ರೋಫಿ ಬಂದಿಲ್ಲ. ಒತ್ತಡವನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಬಹುಶಃ ಒಬ್ಬರು ಅಥವಾ ಇಬ್ಬರು ಆಟಗಾರರಲ್ಲಿ ಕಂಡುಬಂದಿದೆ. ನೀವು ತಂಡವಾಗಿ ದೊಡ್ಡ ಪಂದ್ಯಾವಳಿಗಳನ್ನು ಆಡಬೇಕಾಗಿದೆ," ಎಂದು ಹರ್ಭಜನ್ ಸಿಂಗ್ ಅವರು ಸುದ್ದಿ 24ಗೆ ತಿಳಿಸಿದರು.
"ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಇದ್ದಾರೆ, ಅವರು ದೊಡ್ಡ ಆಟಗಾರರು. ಆದರೆ ಈ ಮೂವರು ಆಟಗಾರರ ಜೊತೆಗೆ, ಉಳಿದ ಆಟಗಾರರು ಮತ್ತು ತಂಡದ ಮ್ಯಾನೇಜ್‌ಮೆಂಟ್, ಎಲ್ಲರೂ ಒಂದೇ ಉದ್ದೇಶದಿಂದ ಒಟ್ಟಿಗೆ ಮುನ್ನಡೆಯಬೇಕು," ಎಂದು ಮಾಜಿ ಭಾರತೀಯ ಕ್ರಿಕೆಟರ್ ಹರ್ಭಜನ್ ಸಿಂಗ್ ಹೇಳಿದರು.

"ದೊಡ್ಡ ಫಲಿತಾಂಶಗಳನ್ನು ನೀಡಲು, ಟೀಮ್ ಇಂಡಿಯಾ ಸಿಂಗಲ್ ರನ್ ಗಳಿಸುವಂತಹ ಸಣ್ಣ ವಿಷಯಗಳತ್ತ ಗಮನ ಹರಿಸಬೇಕು," ಎಂದು ಮಾಜಿ ಸ್ಪಿನ್ನರ್ ತಿಳಿಸಿದ್ದಾರೆ.
"ಒಂದೇ ರನ್ ಮತ್ತು ಉತ್ತಮ ರನೌಟ್ ಉಳಿಸುವಂತಹ ಸಣ್ಣ-ಸಣ್ಣ ವಿಷಯಗಳು ಸಹ ದೊಡ್ಡ ವಿಷಯಗಳಾಗಿವೆ. ಆದ್ದರಿಂದ ಆಟಗಾರರು ಒಂದು ತಂಡವಾಗಿ ಆಡಿದಾಗ, ಅವರು ದೊಡ್ಡ ಫಲಿತಾಂಶಗಳನ್ನು ನೀಡಬಹುದು. ಬಹುಶಃ ಎದುರಾಳಿಗಳು ನಮ್ಮ ತಂಡದ ಪ್ರತಿಭೆಗಳಿಗಿಂತ ಉತ್ತಮವಾಗಿರಬಹುದು," ಎಂದು ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟರು.
ಪ್ರಸ್ತುತ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದ್ದು, ಗುರುವಾರ, ಜುಲೈ 20ರಂದು ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಆಡಲಿದೆ.
ರೋಹಿತ್ ಶರ್ಮಾ ನಾಯಕತ್ವದ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 141 ರನ್‌ಗಳಿಂದ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು ಹೀನಾಯವಾಗಿ ಸೋಲಿಸಿತು. ಚೊಚ್ಚಲ ಪಂದ್ಯಾವಾಡಿದ ಯಶಸ್ವಿ ಜೈಸ್ವಾಲ್ ಅವರ ಅದ್ಭುತ 171 ರನ್‌ಗಳಿಂದಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸ್ಪಿನ್ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ 12 ವಿಕೆಟ್ ಪಡೆದು ಮಿಂಚಿದರು.