
ಮೆಲ್ಬರ್ನ್, ಜನವರಿ 17: ಅಶಿಸ್ತಿನ ಕಾರಣಕ್ಕೆ ಅಮಾನತಾಗಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಂಡದ ಸಮತೋಲನದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದರು ಎಂದು ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಹೇಳಿದ್ದಾರೆ. ಜೊತೆಗೆ ಭಾರತದ ಬೌಲಿಂಗ್ ವಿಭಾಗ ಹೆಣಗಾಡುತ್ತಿದೆ ಎಂಬ ಮಾತನ್ನು ಧವನ್ ನಿರಾಕರಿಸಿದ್ದಾರೆ.
ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯಕ್ಕೂ ಮುನ್ನಾದಿನವಾದ ಗುರುವಾರ (ಜನವರಿ 17) ಸುದ್ದಿಗಾರರೊಂದಿಗೆ ಮಾತನಾಡುತ್ತ ಶಿಖರ್ ಧವನ್, ಪಾಂಡ್ಯ ಮತ್ತು ತಂಡಕ್ಕೆ ಸಂಬಂಧಿಸಿ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕಾಫೀ ವಿತ್ ಕರಣ್ ಟಿವಿ ಟಾಕ್ ಶೋ ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಬಿಸಿಸಿಐನಿಂದ ಅಮಾನತು ಶಿಕ್ಷೆಗೆ ಒಳಗಾಗಿರುವ ಪಾಂಡ್ಯ ಮತ್ತು ರಾಹುಲ್‌ಗೆ ನನ್ನ ಬೆಂಬಲವಿಲ್ಲ. ಆದರೆ ಪಾಂಡ್ಯ ಅವರ ಉಪಸ್ಥಿತಿ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದ ಸಮತೋಲನಕ್ಕೆ ನಿರ್ಣಾಯಕವಾಗಿತ್ತು ಎಂದು ಶಿಖರ್ ಹೇಳಿದರು (ಟ್ವೀಟ್ ನಲ್ಲಿ ರೋಹಿತ್ ಶರ್ಮಾ ಅವರು ತಂದೆಯಾಗಿರುವ ಬಗ್ಗೆ ತಮಾಷೆಯಾಗಿ ಮಾತನಾಡಿದ ಧವನ್).
ಎರಡು ಏಕದಿನ ಪಂದ್ಯಗಳಲ್ಲಿ ಯುವ ಆಟಗಾರರಾದ ಖಲೀಲ್ ಅಹ್ಮದ್ ಮತ್ತು ಮೊಹಮ್ಮದ್ ಸಿರಾಜ್ ಅಷ್ಟೇನೂ ಪ್ರಭಾವ ಬೀರಿಲ್ಲ. ಹೀಗಾಗಿ ವೇಗದ ಬೌಲರ್ ಕಮ್ ಬ್ಯಾಟ್ಸ್ಮನ್ ಪಾಂಡ್ಯ ತಂಡದಲ್ಲಿರುತ್ತಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು ಎಂಬರ್ಥದಲ್ಲಿ ಧವನ್ ಮಾತನಾಡಿದರು. ಆದಾಗ್ಯೂ ಬೌಲಿಂಗ್ ವಿಭಾಗಕ್ಕೆ ಬಲ ತುಂಬುವ ಆಟಗಾರರು ನಮ್ಮ ತಂಡದಲ್ಲಿದ್ದಾರೆ ಎಂಬ ಮಾತನ್ನೂ ಧವನ್ ಸೇರಿಸಿದ್ದಾರೆ.