
ಡಿಸೆಂಬರ್ 21ರಂದು ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಯಾವುದೇ ಅಧಿಕೃತ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಆದರೆ, ಬಿಸಿಸಿಐ ಉನ್ನತ ಅಧಿಕಾರಿಗಳು ಹಾರ್ದಿಕ್ ಪಾಂಡ್ಯರನ್ನು ಸಂಪರ್ಕಿಸಿ ಭಾರತ ಟಿ20 ತಂಡದ ನಾಯಕತ್ವ ವಹಿಸಿಕೊಳ್ಳಲು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಾಂಡ್ಯ ಯೋಚಿಸಲು ಸಮಯ ಕೇಳಿದ್ದಾರೆ.
ಬಿಸಿಸಿಐ ಶೀಘ್ರದಲ್ಲೇ ಹೊಸ ಆಯ್ಕೆ ಸಮಿತಿಯನ್ನು ನೇಮಿಸಿ ನಿರ್ಧಾರವನ್ನು ಅಧಿಕೃತಗೊಳಿಸಲಿದೆ. ರೋಹಿತ್ ಶರ್ಮಾ 2023 ರ ವಿಶ್ವಕಪ್ ವರೆಗೆ ಏಕದಿನ ಮತ್ತು ಟೆಸ್ಟ್ ತಂಡಕ್ಕೆ ನಾಯಕರಾಗಿ ಮುಂದುವರೆಯಲಿದ್ದಾರೆ.
"ಟಿ20 ತಂಡಕ್ಕೆ ನಾಯಕನನ್ನು ಬದಲಾವಣೆ ಮಾಡುವ ಯೋಜನೆ ಹೊಂದಿದ್ದೇವೆ. ಹಾರ್ದಿಕ್ ಪಾಂಡ್ಯ ಅವರ ಜೊತೆ ಚರ್ಚೆ ಮಾಡಲಾಗಿದೆ. ಈ ಬಗ್ಗೆ ನಿರ್ಧಾರ ತಿಳಿಸಲು ಅವರು ಕೆಲ ದಿನಗಳ ಸಮಯ ಕೇಳಿದ್ದಾರೆ. ಆದ್ದರಿಂದ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅವರಿಗೆ ಟಿ20 ಮಾದರಿಯಲ್ಲಿ ನಾಯಕತ್ವ ನೀಡಲು ನಿರ್ಧರಿಸಲಾಗಿದೆ" ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
"ಪ್ರಸ್ತುತ ಆಯ್ಕೆ ಸಮಿತಿಯು ಶಿಫಾರಸು ಮತ್ತು ತಂಡದ ಆಯ್ಕೆಯನ್ನು ಹೊರತುಪಡಿಸಿ ಬೇರೇನೂ ನಿರ್ಧಾರ ಮಾಡುವುದಿಲ್ಲ. ನಾಯಕತ್ವದಲ್ಲಿ ಬದಲಾವಣೆ ಮಾಡುವುದು ಮಹತ್ವದ ತೀರ್ಮಾನ, ನಿಗದಿತ ಆಯ್ಕೆ ಸಮಿತಿ ಇಲ್ಲದೆ ನಿರ್ಧಾರ ಮಾಡುವುದು ದೊಡ್ಡ ಪ್ರಮಾದವಾಗಲಿದೆ. ರೋಹಿತ್ ಶರ್ಮಾರನ್ನು ಟಿ20 ನಾಯಕತ್ವದಿಂದ ಕೆಳಗಿಳಿಸಲು ಎಲ್ಲರಿಗೂ ಇಷ್ಟವಿಲ್ಲ, ಅವರು ಕೇವಲ ಒಂದು ವರ್ಷ ಮಾತ್ರ ನಾಯಕರಾಗಿದ್ದಾರೆ." ಎಂದು ಬಿಸಿಸಿಐ ಅಧಿಕಾರಿ ಹೇಳಿರುವುದಾಗಿ ಇನ್‌ಸೈಡದ ಸ್ಪೋರ್ಟ್ ವರದಿ ಮಾಡಿದೆ.

ಹೊರೆ ಕಡಿಮೆ ಮಾಡಲು ನಾಯಕತ್ವ ವಿಭಜನೆ
ರೋಹಿತ್ ಶರ್ಮಾ ಮೇಲಿರುವ ನಾಯಕತ್ವದ ಹೊರೆಯನ್ನು ಕಡಿಮೆ ಮಾಡಲು ಟಿ20 ತಂಡಕ್ಕೆ ಪಾಂಡ್ಯರನ್ನು ನಾಯಕರನ್ನಾಗಿ ನೇಮಿಸಲು ನಿರ್ಧಾರ ಮಾಡಿದೆ. 2023ರಲ್ಲಿ ಏಕದಿನ ವಿಶ್ವಕಪ್ ಇರುವ ಕಾರಣ ರೋಹಿತ್ ಶರ್ಮಾ ಏಕದಿನ ಮತ್ತು ಟೆಸ್ಟ್ ಮಾದರಿಯತ್ತ ಹೆಚ್ಚಿನ ಗಮನ ಹರಿಸಲಿದ್ದಾರೆ.
2024ರ ಟಿ20 ವಿಶ್ವಕಪ್‌ಗೆ ಭಾರತ ತಂಡ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದು, ಪಾಂಡ್ಯರನ್ನು ನಾಯಕರನ್ನಾಗಿ ಮಾಡಲು ಚಿಂತಿಸಿದೆ. ಪಾಂಡ್ಯ 2022ರ ಐಪಿಎಲ್ ಆವೃತ್ತಿಯಲ್ಲಿ ಗುಜರಾತ್ ತಂಡದ ನಾಯಕರಾಗಿ ಯಶಸ್ವಿಯಾಗಿದ್ದಾರೆ. 15 ಪಂದ್ಯಗಳಲ್ಲಿ 44.27 ಸರಾಸರಿಯಲ್ಲಿ 487 ರನ್ ಗಳಿಸಿದ್ದರು. ಅವರು ಪಂದ್ಯಾವಳಿಯಲ್ಲಿ ನಾಲ್ಕು ಅರ್ಧಶತಕ ಗಳಿಸಿದರು ಮತ್ತು ಎಂಟು ವಿಕೆಟ್ ಪಡೆದು ಮಿಂಚಿದ್ದರು. ಮೊದಲ ಆವೃತ್ತಿಯಲ್ಲೇ ಪಾಂಡ್ಯ ನೇತೃತ್ವದಲ್ಲಿ ಗುಜರಾತ್ ಟೈಟಾನ್ಸ್ ತಂಡ ಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ಐರ್ಲೆಂಡ್ ವಿರುದ್ಧದ ಸರಣಿಗೆ ಹಾರ್ದಿಕ್ ಪಾಂಡ್ಯ ನಾಯಕರಾಗಿದ್ದರು, ಆ ಸರಣಿಯನ್ನು ಭಾರತ ತಂಡ 2-0 ಅಂತರದಲ್ಲಿ ಗೆದ್ದಿತ್ತು. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅವರ ನಾಯಕತ್ವದಲ್ಲಿ ಭಾರತ 1-0 ಅಂತರದಲ್ಲಿ ಸರಣಿ ಗೆದ್ದಿದೆ.