ಕಳೆದ ಕೆಲವು ದಿನಗಳಲ್ಲಿ ಕ್ರಿಕೆಟ್ ಅಂಗಳದಲ್ಲಿ ನಾಯಕತ್ವದ ಚರ್ಚೆ ಭಾರೀ ಸದ್ದು ಮಾಡುತ್ತಿದೆ. ಈ ಪಟ್ಟದ ಸುದ್ದಿ ಟೀಮ್ ಇಂಡಿಯಾದಲ್ಲ, ಬದಲಿಗೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನ ಬದಲಾವಣೆಯದ್ದಾಗಿದೆ. ಗುಜರಾತ್ ಟೈಟನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯರನ್ನು ಟ್ರೇಡ್ ಮಾಡಿದ ಮುಂಬೈ ಇಂಡಿಯನ್ಸ್, ಅವರಿಗೆ ನಾಯಕ ಸ್ಥಾನವನ್ನು ನೀಡಿತು. ಅಲ್ಲಿಂದ ಈ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ.
ಈಗ ಈ ಚರ್ಚೆ ತನ್ನ ಸ್ವರೂಪವನ್ನು ಬದಲಿಸುಕೊಳ್ಳುತ್ತಿದೆ. ಬರೀ ಲೀಗ್‌ಗೆ ಅಷ್ಟೇ ಸೀಮಿತವಾಗಿದ್ದ ಈ ನಾಯಕತ್ವದ ಹಣಾಹಣಿ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ಕಾಲಿಡುವ ಸೂಚನೆ ಸಿಕ್ಕಂತೆ ಕಾಣುತ್ತಿದೆ. ಭಾರತದಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವುದು ಯಾರು ಎಂಬ ಪ್ರಶ್ನೆ ಬಹುವಾಗಿ ಅಭಿಮಾನಿಗಳಿಗೆ ಕಾಡಿತ್ತು.

ಇದಕ್ಕೆ ಕಾರಣ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಫಿಟ್ ಆಗಿ ತಂಡಕ್ಕೆ ವಾಪಸ್ ಆದಲ್ಲಿ ಸಲೀಸಾಗಿ ನಾಯಕತ್ವ ಅವರ ಹೆಗಲೇರುತ್ತೆ ಎಂಬ ಲೆಕ್ಕಾಚಾರ ಹರಿದಾಡಿತ್ತು. ಆದರೆ ಈಗಾಗಲೇ ನಾಯಕತ್ವದ ರುಚಿ ನೋಡಿರುವ ಸೂರ್ಯಕುಮಾರ್ ಯಾದವ್ ಸಹ ಅವರು ನಾಯಕತ್ವದ ಮೇಲೆ ಕಣ್ಣು ನೆಟ್ಟಿದ್ದರು ಎಂಬುದನ್ನು ಮುಚ್ಚಿಡುವ ಸತ್ಯ ಏನು ಅಲ್ಲ.
ಈಗ ಬಂದಿರುವ ಸುದ್ದಿ ಒಬ್ಬ ಪ್ಲೇಯರ್‌ಗೆ ನೋವನ್ನು ತಂದರೆ, ಇನ್ನೋಬ್ಬ ಪ್ಲೇಯರ್ ಮುಖದಲ್ಲಿ ಮಂದಹಾಸ ಮೂಡಿಸಿದೆ. ಐಸಿಸಿ ಏಕದಿನ ವಿಶ್ವಕಪ್ ವೇಳೆ ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದರು. ಈ ಕಾರಣದಿಂದಾಗಿ, ಅವರು ತವರಿನಲ್ಲಿ ಆಡಿದ ಆಸ್ಟ್ರೇಲಿಯಾ ಟಿ 20 ಸರಣಿಯಿಂದ ಮತ್ತು ನಂತರ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿದ್ದರು.

ಮುಂದಿನ ವರ್ಷ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಆಡುವ ಬಗ್ಗೆ ಅನುಮಾನವಿದೆ. ವರದಿಯ ಪ್ರಕಾರ, ಅವರು 3 ಪಂದ್ಯಗಳ ಸರಣಿಯಿಂದ ಹೊರಗುಳಿಯಬಹುದು. ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ಟೀಂ ಇಂಡಿಯಾ ಟಿ20 ನಾಯಕತ್ವದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಎಎನ್‌ಐ ಸುದ್ದಿ ಪ್ರಕಾರ, ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿಯಬಹುದು. ಅವರು ಫಿಟ್ ಆಗಿದ್ದು ಮುಂದಿನ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮೈದಾನಕ್ಕೆ ಮರಳುವ ನಿರೀಕ್ಷೆಯಿದೆ. ಹಾರ್ದಿಕ್ ಪಾಂಡ್ಯ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಗಾಯಕ್ಕೆ ತುತ್ತಾಗಿ ಸರಣಿಯಿಂದ ಹೊರ ನಡೆದಿದ್ದರು.

ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಆಡಿದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದರು. ಅಂದಿನಿಂದ, ಅವರು ಫಿಟ್ನೆಸ್ ಕಾಪಾಡಿಕೊಳ್ಳಲು ಬೆವರು ಹರಿಸುತ್ತಿದ್ದಾರೆ. ಸೂರ್ಯಕುಮಾರ್ ಯಾದವ್ ಟಿ20 ತಂಡದ ನಾಯಕತ್ವ ವಹಿಸಿದ್ದರು ಮತ್ತು ಭಾರತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದು ಭರವಸೆ ಮೂಡಿಸಿದ್ದರು. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆಯೂ ತಂಡದ ನಾಯಕತ್ವ ಈ ಆಟಗಾರನ ಕೈಗೆ ಸಿಕ್ಕಿತು. ಇಲ್ಲಿ ನಡೆದ 3 ಪಂದ್ಯಗಳ ಸರಣಿಯನ್ನು ಭಾರತ 1-1ರಲ್ಲಿ ಸಮಬಲಗೊಳಿಸಿತ್ತು.
ಅಫ್ಘಾನಿಸ್ತಾನ ತಂಡ ಮುಂದಿನ ವರ್ಷದ ಆರಂಭದಲ್ಲಿ ಭಾರತ ತಂಡದ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಯು ಜನವರಿ 11 ರಿಂದ 17 ರ ನಡುವೆ ನಡೆಯಲಿದೆ. ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಇದು ಕೊನೆಯ ಟಿ20 ಸರಣಿಯಾಗಿದೆ. ಮೊದಲ ಟಿ20 ಪಂದ್ಯ ಜನವರಿ 11 ರಂದು ಮೊಹಾಲಿಯಲ್ಲಿ ನಡೆಯಲಿದೆ. 14ರಂದು ಎರಡೂ ತಂಡಗಳು ಇಂದೋರ್‌ನಲ್ಲಿ ಆಡಲಿವೆ. ಜನವರಿ 17ರಂದು ಬೆಂಗಳೂರಿನಲ್ಲಿ ಕೊನೆಯ ಟಿ20 ಪಂದ್ಯ ನಡೆಯಲಿದೆ.