ಮಂಗಳವಾರ, ಆಗಸ್ಟ್ 8ರಂದು ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲಲೇಬೇಕಾದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡವು 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ, ಸರಣಿಯಲ್ಲಿ 2-1 ಅಂತರಕ್ಕೆ ಇಳಿಸಿಕೊಂಡಿತು.
ಮೂರನೇ ಟಿ20 ಪಂದ್ಯದಲ್ಲಿ ಭಾರತ ಟಿ20 ತಂಡದ ಉಪನಾಯಕ ಸೂರ್ಯಕುಮಾರ್ ಯಾದವ್ ಕೇವಲ 49 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 10 ಬೌಂಡರಿಗಳ ಸಹಿತ 83 ರನ್ ಬಾರಿಸಿದರೆ, ಯುವ ಬ್ಯಾಟರ್ ತಿಲಕ್ ವರ್ಮಾ 37 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿ ಸಮೇತ 49 ರನ್ ಗಳಿಸಿ ಅಜೇಯರಾಗುಳಿದರು.

ತಿಲಕ್ ವರ್ಮಾ ಕೇವಲ 1 ರನ್‌ನಿಂದ ಅರ್ಧಶತಕ ಗಳಿಸುವುದನ್ನು ತಪ್ಪಿಸಿಕೊಂಡಿದ್ದಕ್ಕೆ ಭಾರತ ತಂಡದ ಟಿ20 ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಲೇವಡಿ ಮಾಡಲಾಗುತ್ತಿದೆ.
ಭಾರತ ಪಂದ್ಯವನ್ನು ಗೆಲ್ಲಲು 18ನೇ ಓವರ್‌ನಲ್ಲಿ ಆಲ್‌ರೌಂಡರ್ ರೋವ್ಮನ್ ಪೊವೆಲ್ ಅವರ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸಿ ಗೆಲುವಿನ ರನ್ ಗಳಿಸಿದರು. ಆದರೆ, ಇನ್ನೊಂದು ಬದಿಯಲ್ಲಿ ತಿಲಕ್ ವರ್ಮಾ 49 ರನ್ ಗಳಿಸಿ ನಿರಾಸೆಗೊಳಗಾದರು.
ಈ ವೇಳೆ ತಿಲಕ್ ವರ್ಮಾರಿಗೆ ಬ್ಯಾಟಿಂಗ್ ನೀಡಬೇಕಿತ್ತು, ತಮ್ಮ ವೃತ್ತಿಜೀವನದ ಎರಡನೇ ಅರ್ಧಶತಕ ಪೂರ್ಣಗೊಳಿಸುತ್ತಿದ್ದರು ಎಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಲ್ಲದೆ, ಈ ಹಿಂದೆ ವಿರಾಟ್ ಕೊಹ್ಲಿಗಾಗಿ ಎಂಎಸ್ ಧೋನಿ ಮಾಡಿದ ತ್ಯಾಗವನ್ನು ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ.
2014ರಲ್ಲಿ ವಿರಾಟ್ ಕೊಹ್ಲಿಗೆ ಪಂದ್ಯವನ್ನು ಮುಗಿಸುವ ಅವಕಾಶವನ್ನು ನೀಡಲು ನಾಯಕರಾಗಿದ್ದ ಎಂಎಸ್ ಧೋನಿ ಅವರು, ಕೊನೆಯ ಎಸೆತದಲ್ಲಿ ರನ್ ಓಡಲು ನಿರಾಕರಿಸಿದ್ದನ್ನು ಅಭಿಮಾನಿಗಳು ನೆನಪಿಸಿಕೊಂಡರು.
14 ಎಸೆತಗಳಲ್ಲಿ ಗೆಲ್ಲಲು ಕೇವಲ ಎರಡು ರನ್ ಬೇಕಿರುವಾಗ, ಹಾರ್ದಿಕ್ ಪಾಂಡ್ಯ ಲಾಂಗ್-ಆಫ್‌ನಲ್ಲಿ ಸಿಕ್ಸರ್ ಬಾರಿಸಿದರು. ಇದರಿಂದ ತಮ್ಮ ಮೂರನೇ ಪಂದ್ಯವಾಡುತ್ತಿರುವ ತಿಲಕ್ ವರ್ಮಾ ಅವರ ಸತತ ಎರಡನೇ ಅರ್ಧಶತಕ ಗಳಿಸುವುದನ್ನು ತಪ್ಪಿಸಿದರು.
ಆದಾಗ್ಯೂ, ತಿಲಕ್ ವರ್ಮಾ ಅವರ ಅತ್ಯುತ್ತಮ ಪ್ರದರ್ಶನದ ಮೌಲ್ಯವನ್ನು ಅದು ದುರ್ಬಲಗೊಳಿಸುವುದಿಲ್ಲ. ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಆಟಕ್ಕೆ ತಿಲಕ್ ವರ್ಮಾ ಸಾಥ್ ನೀಡಿದರು.
ನಾಯಕ ಹಾರ್ದಿಕ್ ಪಾಂಡ್ಯ ಅವರು ತಿಲಕ್ ವರ್ಮಾ ಅರ್ಧಶತಕ ಗಳಿಸಲು ಅವಕಾಶ ನೀಡದಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದರು.
ಅಲ್ಲದೆ, 2014ರ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಢಾಕಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ಗೆಲುವಿನ ರನ್ ಬಾರಿಸಲು 19ನೇ ಓವರ್‌ನ ಕೊನೆಯ ಎಸೆತವನ್ನು ಎಂಎಸ್ ಧೋನಿ ಸಮರ್ಥಿಸಿಕೊಂಡ ಘಟನೆಯನ್ನು ಅಭಿಮಾನಿಗಳು ವೈರಲ್ ಮಾಡಿ ನಾಯಕತ್ವದ ಗುಣಗಳನ್ನು ಹೋಲಿಕೆ ಮಾಡಿದ್ದಾರೆ.
20ನೇ ಓವರ್‌ನಲ್ಲಿ ಡೇಲ್ ಸ್ಟೇನ್ ಅವರ ಮೊದಲ ಎಸೆತದಲ್ಲಿ ಪಂದ್ಯವನ್ನು ಮುಗಿಸಲು ವಿರಾಟ್ ಕೊಹ್ಲಿ ಹೆಚ್ಚು ಸಮಯ ತೆಗೆದುಕೊಳ್ಳದೆ ಬೌಂಡರಿ ಬಾರಿಸಿದರು. ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಾಯದಿಂದ 72 ರನ್ ಗಳಿಸಿ ಅಜೇಯರಾಗುಳಿದರು.
ತಮ್ಮ ಸಹ ಆಟಗಾರ ವಿರಾಟ್ ಕೊಹ್ಲಿಗಾಗಿ ಎಂಎಸ್ ಧೋನಿ ಅವರ ಆ ಗೆಸ್ಚರ್ ಅನ್ನು ಪಂದ್ಯ ದಿನ ಕ್ರಿಕೆಟ್ ಅಭಿಮಾನಿಗಳು ಶ್ಲಾಘಿಸಿದರು. ರೋವ್ಮನ್ ಪೊವೆಲ್ ಕೊನೆಯ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಸಿಕ್ಸರ್ ಬಾರಿಸಿದ ನಂತರ, ಅಭಿಮಾನಿಗಳು ಆ ಕ್ಷಣವನ್ನು ನೆನಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಕೊನೆಯ ಎರಡು ಟಿ20 ಪಂದ್ಯಗಳಿಗಾಗಿ ತಂಡಗಳು ಯುಎಸ್ಎಗೆ ಪ್ರಯಾಣ
ಭಾರತ ಮತ್ತು ವೆಸ್ಟ್ ಇಂಡೀಸ್ ಐದು ಪಂದ್ಯಗಳ ಸರಣಿಯ ಅಂತಿಮ ಎರಡು ಪಂದ್ಯಗಳು ಟಿ20 ಪಂದ್ಯಗಳನ್ನು ಆಡಲು ಯುಎಸ್ಎಗೆ ಪ್ರಯಾಣ ಬೆಳೆಸಲುವೆ. ಪ್ರಸ್ತುತ 2-1 ಅಂತರದಲ್ಲಿ ರೋವ್ಮನ್ ಪೊವೆಲ್ ನಾಯಕತ್ವದ ವೆಸ್ಟ್ ಇಂಡೀಸ್ ಮುನ್ನಡೆಯಲ್ಲಿದೆ.
ಶನಿವಾರ, ಆಗಸ್ಟ್ 12 ಮತ್ತು ಭಾನುವಾರ, ಅಗಸ್ಟ್ 13ರಂದು ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿ ಕ್ರಮವಾಗಿ ನಾಲ್ಕು ಮತ್ತು ಐದನೇ ಟಿ20 ಪಂದ್ಯಗಳು ನಡೆಯಲಿವೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿ ನಡೆದ ಎರಡು ಟಿ20 ಪಂದ್ಯಗಳಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ, ಐದು ಪಂದ್ಯಗಳ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿತ್ತು.