IND vs SL: ಹಾರ್ದಿಕ್ ಜೊತೆ ಕ್ಯಾಪ್ಟನ್ ಸೂರ್ಯಕುಮಾರ್ ಸ್ನೇಹ ಮುರಿದುಬಿದ್ದಿದೆಯೇ?
ಜುಲೈ 24 ಬುಧವಾರ, ಶ್ರೀಲಂಕಾದಲ್ಲಿ ನಡೆಯಲಿರುವ ಮೂರು ಟಿ20 ಪಂದ್ಯಗಳ ಸರಣಿಗೆ ಸೂರ್ಯಕುಮಾರ್ ಯಾದವ್ ಅವರನ್ನು ಟೀಮ್ ಇಂಡಿಯಾ ನಾಯಕರನ್ನಾಗಿ ಮಾಡಲಾಗಿದೆ. ಮಂಗಳವಾರ ಭಾರತ ತಂಡ ಶ್ರೀಲಂಕಾ ತಲುಪಿದೆ.
ಸರಣಿ ಪ್ರಾರಂಭವಾಗುವ ಮೊದಲು ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಶ್ರೀಲಂಕಾ ವಿರುದ್ಧ ಟಿ20 ಸರಣಿಗೆ ಸೂರ್ಯಕುಮಾರ್ ನಾಯಕರಾದಾಗಿನಿಂದಲೂ ಹಾರ್ದಿಕ್ ಪಾಂಡ್ಯಗೆ ಆದ್ಯತೆ ನೀಡಬೇಕಿತ್ತೇ ಎಂಬ ಚರ್ಚೆ ನಡೆಯುತ್ತಲೇ ಇದೆ. ಭಾರತ ತಂಡವು ಶ್ರೀಲಂಕಾಕ್ಕೆ ಹಾರುವ ಮೊದಲು ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಹಾರ್ದಿಕ್‌ಗೆ ನಾಯಕತ್ವ ನೀಡದಿರಲು ಕಾರಣಗಳನ್ನು ತಿಳಿಸಿದ್ದರು.
ಅಲ್ಲದೆ ಸೂರ್ಯಕುಮಾರ್‌ಗೆ ಟಿ20 ನಾಯಕತ್ವವನ್ನು ಹಸ್ತಾಂತರಿಸುವ ಮೊದಲು ಹಾರ್ದಿಕ್ ಅವರೊಂದಿಗೆ ಮಾತನಾಡಿರುವ ಬಗ್ಗೆ ಕೂಡ ಹೇಳಿದ್ದರು. ಆದರೂ, ಸೂರ್ಯ ನಾಯಕತ್ವ ಪಡೆದಿದ್ದರಿಂದ ಹಾರ್ದಿಕ್ ಹಾಗೂ ಅವರ ಸ್ನೇಹದಲ್ಲಿ ಬಿರುಕು ಮೂಡಿದೆ ಎಂಬ ಚರ್ಚೆಗಳು ನಡೆಯುತ್ತಿವೆ.
ಈ ನಡುವೆ ಇವರಿಬ್ಬರ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಟ್ವೀಟರ್ (ಎಕ್ಸ್)ನಲ್ಲಿ ಟೀಮ್ ಇಂಡಿಯಾದ ವೀಡಿಯೊವನ್ನು ಹಂಚಿಕೊಂಡಿದೆ.
ಇದರಲ್ಲಿ ಹಾರ್ದಿಕ್ ಶ್ರೀಲಂಕಾಕ್ಕೆ ಹಾರುವ ಮೊದಲು ಸೂರ್ಯಕುಮಾರ್ ಯಾದವ್ ಅವರನ್ನು ತಬ್ಬಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಇಬ್ಬರ ನಡುವೆ ಮನಸ್ತಾಪವಿದೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಎಂಬುದು ಈ ವಿಡಿಯೋದಿಂದ ಬಹಿರಂಗವಾಗಿದೆ.
ಈ ವಿಡಿಯೋಗೆ ಅಭಿಮಾನಿಗಳು ಕೂಡ ಪ್ರತಿಕ್ರಿಯಿಸುತ್ತಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಉಪನಾಯಕರಾಗಿದ್ದರು.
ಆಗರ್ಕರ್ ಹೇಳಿದ್ದೇನು?
ಭಾರತ ತಂಡವು ಶ್ರೀಲಂಕಾಗೆ ತೆರಳುವ ಮೊದಲು, ಅಜಿತ್ ಅಗರ್ಕರ್ ಮತ್ತು ಹೆಡ್ ಕೋಚ್ ಗೌತಮ್ ಗಂಭೀರ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಅಗರ್ಕರ್ ಮಾತನಾಡುವಾಗ ಟಿ20 ನಾಯಕತ್ವ ವಿವಾದದ ವಿಷಯವೂ ಪ್ರಸ್ತಾಪವಾಯಿತು.
ಈ ಬಗ್ಗೆ ಸ್ಪಷ್ಟನೆ ನೀಡಿದ ಅಗರ್ಕರ್, 'ಸೂರ್ಯ ಅವರು ಅರ್ಹ ಆಟಗಾರರಲ್ಲಿ ಒಬ್ಬರು. ಕಳೆದ ಒಂದು ವರ್ಷದಿಂದ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದಾರೆ. ಡ್ರೆಸ್ಸಿಂಗ್ ರೂಮ್‌ನಿಂದ ನಾವು ಸಾಕಷ್ಟು ಪ್ರತಿಕ್ರಿಯೆಯನ್ನು ಪಡೆದಿದ್ದೇವೆ.
ಸೂರ್ಯ ಉತ್ತಮ ಕ್ರಿಕೆಟ್ ಮನಸ್ಥಿತಿಯಲ್ಲಿದ್ದು, ವಿಶ್ವದ ಅತ್ಯುತ್ತಮ ಟಿ20 ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ತಂಡದಲ್ಲಿನ ಅನುಭವಿ ಆಟಗಾರ. ಆದರೆ ಫಿಟ್ನೆಸ್ ಬಹಳ ಮುಖ್ಯ. ನಮಗೆ ಎಲ್ಲಾ ಸಮಯದಲ್ಲೂ ಲಭ್ಯವಿರುವ ಆಟಗಾರನ ಅಗತ್ಯವಿದೆ.
ಹೀಗಾಗಿ ಟೀಮ್ ಇಂಡಿಯಾ ಟಿ20 ನಾಯಕನ ಸ್ಥಾನಕ್ಕೆ ಸೂರ್ಯ ಅವರು ಅರ್ಹ ಅಭ್ಯರ್ಥಿ ಎಂದು ನಿರ್ಧಾರ ಮಾಡಲಾಯಿತು. ಈಗ ಮುಂಬರುವ ದಿನಗಳಲ್ಲಿ ಸೂರ್ಯ ಹೇಗೆ ನಾಯಕನ ಪಾತ್ರ ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications