T20 World Cup 2026: ಟಿ20 ವಿಶ್ವಕಪ್ 2026ರ ಗುಂಪು ಹಂತದ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಸುಲಭವಾಗಿ ಮುನ್ನಡೆ ಸಾಧಿಸಿದ್ದ ಟೀಂ ಇಂಡಿಯಾ, ಸೂಪರ್ 8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಕಂಡಿತು. ಇನ್ನೂ ಇದೀಗ ಭಾರತದ ತಂಡದ ಬೌಲಿಂಗ್ ಬಗ್ಗೆ ಪಾಕಿಸ್ತನ ಮಾಜಿ ವೇಗಿ ಶೋಯೆಬ್ ಅಖ್ತರ್ ಟೀಕೆ ವ್ಯಕ್ತಪಡಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 187 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ವರುಣ್ ಚಕ್ರವರ್ತಿ ನಾಲ್ಕು ಓವರ್‌ಗಳಲ್ಲಿ 47 ರನ್ ಬಿಟ್ಟುಕೊಟ್ಟರೆ, ಹಾರ್ದಿಕ್ ಪಾಂಡ್ಯ 45 ರನ್‌ಗಳನ್ನು ನೀಡಿ ದುಬಾರಿಯಾಗಿದೆ. ಬಳಿಕ ಬ್ಯಾಟಿಂಗ್‌ಗಿಳಿದ ಟೀಂ ಇಂಡಿಯಾ 18.5 ಓವರ್‌ಗಳಲ್ಲಿ ಕೇವಲ 111 ರನ್‌ಗಳಿಗೆ ತನ್ನಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ದಕ್ಷಿಣ ಆಫ್ರಿಕಾಗೆ ಶರಣಾಯಿತು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ಭಾರತದ ಅತಿ ದೊಡ್ಡ ಸೋಲಾಗಿದೆ.

ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಭಾರತದ ಬೌಲಿಂಗ್ ಅನ್ನು ದಕ್ಷಿಣ ಆಫ್ರಿಕಾ ಬಹಿರಂಗಪಡಿಸಿದೆ ಎಂದು ಹೇಳಿಕೆ ನೀಡಿದ್ದಾರೆ. "ಭಾರತದ ಬೌಲಿಂಗ್ ಬಯಲಾಗಿಬಿಟ್ಟಿದೆ. 97-98 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವುದೇ ವರುಣ್ ಚಕ್ರವರ್ತಿಯವರ ಬಲ. ಆದರೆ ಈ ಪಂದ್ಯದಲ್ಲಿ ಅವರು 94 ಕಿಮೀ ವೇಗದಲ್ಲಿ ಮಾತ್ರ ಬೌಲಿಂಗ್ ಮಾಡಿದರು. ಅವರು ಬೌಲಿಂಗ್ ದಾಳಿಗೆ ಇಳಿದಾಗ, ಡೆವಾಲ್ಡ್ ಬ್ರೆವಿಸ್ ಅವರು ನೋ-ಲುಕ್ ಸಿಕ್ಸ್ ಹೊಡೆದರು," ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.
"ಇದೀಗ ಭಾರತದ ಬೌಲಿಂಗ್ ಸಂಪೂರ್ಣವಾಗಿ ಬಯಲಾಗಿಬಿಟ್ಟಿದೆ. ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಸುಮಾರು 120 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರು. ಅವರು ಮಾಲ್ಕಮ್ ಮಾರ್ಷಲ್ ಅಲ್ಲ. ಇಂತಹ ಬೌಲರ್‌ಗಳನ್ನು ಡೆತ್ ಓವರ್‌ಗಳಲ್ಲಿ ಬಳಸಿದರೆ, ಪ್ರೋಟಿಯಾಸ್ ತಂಡದಿಂದ ಈ ರೀತಿಯ ಪ್ರತಿದಾಳಿ ಸಹಜ. ಪಾಂಡ್ಯ 45 ರನ್‌ಗಳನ್ನು ಬಿಟ್ಟುಕೊಟ್ಟು ದುಬಾರಿಯಾದರು," ಎಂದು ಹೇಳಿದರು.
ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ತೆಗೆದುಕೊಂಡ ಮತ್ತೊಂದು ನಿರ್ಧಾರವೂ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಅದು ಅಕ್ಷರ್ ಪಟೇಲ್ ಅವರನ್ನು ಹೊರಗಿಟ್ಟು, ಅವರ ಬದಲಿಗೆ ವಾಷಿಂಗ್ಟನ್ ಸುಂದರ್‌ಗೆ ಅವಕಾಶ ನೀಡಿದ ನಿರ್ಧಾರವಾಗಿದೆ. ಐಪಿಎಲ್‌ನಲ್ಲಿ ಪಂದ್ಯಗಳಿಗೆ ಒಳ್ಳೆಯದು ಎಂದು ನಾನು ಒಪ್ಪುತ್ತೇನೆ. ಏಕೆಂದರೆ ಅಲ್ಲಿ ನೀವು 14 ಪಂದ್ಯಗಳನ್ನು ಆಡಬೇಕಾಗುತ್ತದೆ. ಈ ವೇಳೆ ತಂಡದಲ್ಲಿ ಬದಲಾವಣೆ ಮಾಡುವುದು ಸಹಜ. ಆದರೆ, ಇಂತಹ ಐಸಿಸಿ ಟೂರ್ನಿಗಳಲ್ಲಿ ಸಾಧ್ಯವಾದಷ್ಟು ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಉತ್ತಮ.
ಎಡಗೈ ಬ್ಯಾಟರ್‌ಗಳ ವಿರುದ್ಧ ವಾಷಿಂಗ್ಟನ್ ಸುಂದರ್ ಅವರನ್ನು ಬಳಸಬೇಕು ಎಂಬುದಕ್ಕೂ ನಾನು ಶೇಕಡ 100ರಷ್ಟು ಒಪ್ಪುತ್ತೇನೆ. ಅವರನ್ನು ಆಡಿಸಲೇಬೇಕು, ಅದರಲ್ಲಿ ಸಂದೇಹವಿಲ್ಲ. ಆದರೆ, ಟಿ20 ಕ್ರಿಕೆಟ್‌ನಲ್ಲಿ ಅಕ್ಷರ್ ಪಟೇಲ್ ನಿಮ್ಮ ಆದ್ಯತೆ ಆಗಿದ್ದಾರೆ. ಅಕ್ಷರ್ ಪಟೇಲ್ ಮಾಡಿದ ಸಾಧನೆಯನ್ನು ನಾವು ಮರೆಯಬಾರದು, ಎಂದು ಭಾರತದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಅವರು ತಮ್ಮ ಯೂಟ್ಯೂಬ್ ಚಾನೆಲ್ ಐಶ್ ಕಿ ಬಾತ್‌ನ ವಿಡಿಯೋದಲ್ಲಿ ತಿಳಿಸಿದ್ದಾರೆ.