For Quick Alerts
ALLOW NOTIFICATIONS  
For Daily Alerts
 

Harmanpreet Kaur: ಕ್ರಿಕೆಟ್ ಜಗತ್ತಿನ ಮುಂದೆ ಭಾರತ ತಲೆ ತಗ್ಗಿಸುವಂತೆ ಮಾಡಿದರಾ ಟೀಮ್ ಇಂಡಿಯಾ ನಾಯಕಿ!!

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅದ್ಭುತ ಆಟಗಾರ್ತಿ ಹಾಗೂ ಅದ್ಭುತ ನಾಯಕಿ ಎಂಬುದರಲ್ಲಿ ಅನುಮಾನವಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಹರ್ಮನ್ ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ಆದರೆ ಬಾಂಗ್ಲಾದೇಶ ಪ್ರವಾಸದ ಕೊನೆಯ ಏಕದಿನ ಪಂದ್ಯದಲ್ಲಿ ಅಂಪೈರ್ ನೀಡಿದ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ ರೀತಿ ಹಾಗೂ ಬಳಿಕ ಹರ್ಮನ್‌ಪ್ರೀತ್ ವರ್ತನೆ ಈಗ ಸಾಕಷ್ಟು ಟೀಕೆಗೆ ಒಳಗಾಗಿದೆ.

ಹರ್ಮನ್‌ಪ್ರೀತ್ ಕೌರ್ ಅವರ ಈ ವರ್ತೆಯ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆಯುತ್ತಿದೆ. ಕೆಲವರು ಹರ್ಮನ್‌ಪ್ರೀತ್ ನಡೆಯನ್ನು ಸಮರ್ಥನೆ ಮಾಡಿಕೊಂಡರೆ ಕೆಲವು ಈ ನಡೆಗೆ ಟೀಕಿಸಿದ್ದಾರೆ. ಈ ವಿಚಾರವಾಗಿ ಐಸಿಸಿ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಪಂದ್ಯದ ಸಂಭಾವನೆಯ 75% ದಂಡ ಹಾಗೂ 3 ಡಿಮೆರಿಟ್ ಅಂಕಗಳನ್ನು ನೀಡಿದೆ ಐಸಿಸಿ.

Harmanpreet Kaurs Unacceptable Gesture Made Indian Cricket Team Bows Down in Front of the Cricket World

ಘಟನೆಯ ಹಿನ್ನಲೆ ಏನು?

ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯ ಅದು. ಈ ಸರಣಿಯ ಮೊದಲ ಪಂದ್ಯವನ್ನು ಬಾಂಗ್ಲಾದೇಶ ಡಕ್ವರ್ತ್ ಲೂಯೀಸ್ ನಿಯಮದಲ್ಲಿ 40 ರನ್‌ಗಳ ಅಂತರದಿಂದ ಗೆದ್ದಿದ್ದರೆ ಎರಡನೇ ಪಂದ್ಯವನ್ನು ಭಾರತ 108 ರನ್‌ಗಳ ಬೃಹತ್ ಗೆಲುವು ಸಾಧಿಸಿತ್ತು. ಹೀಗಾಗಿ ಸರಣಿಯ ಕೊನೆಯ ಪಂದ್ಯ ನಿರ್ಣಾಯಕವಾಗಿತ್ತು. ಈ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ್ದ 225 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತ ಆರಂಭದಲ್ಲಿ ಹಿನ್ನಡೆ ಕಂಡರೂ ಬಳಿಕ ಉತ್ತಮ ಪ್ರದರ್ಶನ ನೀಡಿ ಸುಲಭ ಗೆಲುವಿನತ್ತ ಹೆಜ್ಜೆಯಿಟ್ಟಿತ್ತು. ಉಪನಾಯಕಿ ಮಂಧಾನ ಹಾಗೂ ಹರ್ಲಿನ್ ಡಿಯೋಲ್ ಶತಕದ ಜೊತೆಯಾಟ ಭಾರತಕ್ಕೆ ಬಲ ತುಂಬಿತ್ತು.

ಸ್ಮೃತಿ ಮಂಧಾನ ಅರ್ಧ ಶತಕ ಸಿಡಿಸಿ ವಿಕೆಟ್ ಕಳೆದುಕೊಂಡ ಬಳಿಕ ಕಣಕ್ಕಿಳಿದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತೊಂದು ಉತ್ತಮ ಜೊತೆಯಾಟ ನೀಡುವ ವಿಶ್ವಾಸದಲ್ಲಿದ್ದರು. ಆದರೆ 21 ಎಸೆತಗಳಲ್ಲಿ 14 ರನ್‌ಗಳಿಸಿದ ಹರ್ಮನ್ ನಹಿದಾ ಅಖ್ತರ್ ಎಸೆತವನ್ನು ಸ್ವೀಪ್ ಮಾಡುವ ಯತ್ನದಲ್ಲಿ ಎಡವಿದರು. ಆ ಎಸೆತ ಹರ್ಮನ್ ಪ್ಯಾಡ್‌ಗೆ ಬಡಿದಿತ್ತು. ತಕ್ಷಣವೇ ಅಂಪೈರ್ ಔಟ್ ತೀರ್ಪು ನೀಡಿದರು.

ಈ ತೀರ್ಪು ಹರ್ಮನ್‌ಪ್ರೀತ್ ಕೌರ್ ಅವರನ್ನು ಕೆರಳಿಸಿತ್ತು. ಈ ಸಂದರ್ಭದಲ್ಲಿ ಆಕ್ರೋಶದಿಂದ ಹರ್ಮನ್ ಅಂಪೈರ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾ ವಿಕೆಟ್‌ಗೆ ಬ್ಯಾಟ್‌ನಿಂದ ಬಾರಿಸಿ ಮೈದಾನ ತೊರೆದರು. ಮೈದಾನ ತೊರೆಯುವ ಸಂದರ್ಭದಲ್ಲಿಯೂ ಹರ್ಮನ್ ಅಸಮಾಧಾನವನ್ನು ಮಾತುಗಳನ್ನು ವ್ಯಕ್ಯಪಡಿಸುತ್ತಿರುವುದು ಕ್ಯಾಮರಾದರಲ್ಲಿ ಸೆರೆಯಾಗಿತ್ತು.

ಅಲ್ಲದೆ ಪಂದ್ಯ ನಾಟಕೀಯವಾಗಿ ಟೈನಲ್ಲಿ ಅಂತ್ಯವಾದ ಬಳಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಕಟು ಶಬ್ದಗಳಲ್ಲಿ ಬಾಂಗ್ಲಾದೇಶ ಮಂಡಳಿಯ ವಿರುದ್ಧ ಹರಿಹಾಯ್ದ ಹರ್ಮನ್ ಟ್ರೋಫಿಯನ್ನು ಪಡೆದ ಬಳಿಕ ಫೋಟೋಶೂಟ್‌ನಲ್ಲಿ ಬಾಂಗ್ಲಾದೇಶ ತಂಡದ ಆಟಗಾರ್ತಿಯರನ್ನು ನಿಂದಿದ ಘಟನೆಯೂ ನಡೆಯಿತು. ಇದಕ್ಕೆ ಬೇಸರಗೊಂಡ ಬಾಂಗ್ಲಾ ಆಟಗಾರ್ತಿಯರು ಫೋಟೋ ಶೂಟ್ ಮುಗಿಯುವ ಮುನ್ನವೇ ಅಲ್ಲಿಂದ ಹೊರನಡೆದು ಬೇಸರ ವ್ಯಕ್ತಪಡಿಸಿದ್ದರು!

ಈ ರೀತಿಯ ವರ್ತನೆಯ ಅಗತ್ಯವಿತ್ತಾ??

ಬಾಂಗ್ಲಾದೇಶ ವಿರುದ್ಧದ ಈ ಸರಣಿಯಲ್ಲಿ ಎಲ್‌ಬಿಡಬ್ಲ್ಯು ನಿರ್ಧರಿಸಬಹುದಾದ ಸ್ನೀಕೋಮೀಟರ್ ಅಥವಾ ಬಾಲ್ ಟ್ರ್ಯಾಕಿಂಗ್ ಬಳಸಿರಲಿಲ್ಲ. ಹಾಗಾಗಿ ಅಂಪೈರ್ ನಿರ್ಧಾರವೇ ಇಲ್ಲಿ ಅಂತಿಮವಾಗಿತ್ತು. ಇಂಥಾ ಸಂದರ್ಭದಲ್ಲಿ ಕೆಲ ತೀರ್ಪುಗಳು ತಮ್ಮ ಪರವಾಗಿ ಬಂದಿಲ್ಲ ಎಂಬ ಕಾರಣಕ್ಕೆ ಹರ್ಮನ್‌ಪ್ರೀತ್ ಅವರ ನಡೆಯನ್ನು ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಏಕಪಕ್ಷೀಯವಾದ ತೀರ್ಪು ಎಂಬ ಅನುಮಾನ ಬಂದಿದ್ದರೂ ಭಾರತ ತಂಡವನ್ನು ಮುನ್ನಡೆಸುತ್ತಿರುವ ನಾಯಕಿಯಾಗಿ ಐಸಿಸಿ ಮುಂದೆ ಈ ಬಗ್ಗೆ ದೂರು ನೀಡಲು ಹರ್ಮನ್‌ಪ್ರೀತ್‌ಗೆ ಅವಕಾಶ ಇದ್ದೇ ಇತ್ತು. ಆದರೆ ಅವುಗಳನ್ನು ಬಿಟ್ಟು ಹರ್ಮನ್‌ಪ್ರೀತ್ ತೆಗೆದುಕೊಂಡ ನಡೆ ಭಾರತೀಯ ಅಭಿಮಾನಿಗಳಿಗೇ ಆಘಾತ ನೀಡಿರುವುದರಲ್ಲಿ ಅನುಮಾನವಿಲ್ಲ.

ಅಂಪೈರ್‌ಗಳ ಕಳಪೆ ತೀರ್ಪುಗಳು ಹೊಸದಲ್ಲ

ಕ್ರಿಕೆಟ್‌ನಲ್ಲಿ ಅಫೈರ್‌ಗಳ ಕಳಪೆ ತೀರ್ಪುಗಳು ಹೊಸದಲ್ಲ. ಕಳೆದ ಎರಡು ದಶಕದಲ್ಲಿ ತಾಂತ್ರಿಕ ಸಹಾಯಗಳನ್ನು ಬಳಸಿಕೊಂಡರೂ ಅಲ್ಲಿಯೂ ಸಾಕಷ್ಟು ಎಡವಟ್ಟಗಳು ಆಗುತ್ತಲೇ ಇರುತ್ತದೆ. ಅದಕ್ಕಾಗಿಯೇ ಅಂಪೈರ್ ತೀರ್ಪು ಪ್ರಶ್ನಿಸುವ ಅವಕಾಶವಿದ್ದರೂ ಎಲ್ಲ ತೀರ್ಪುಗಳು ಕೂಡ ವಿವಾದ ರಹಿತವಾಗಿ ನೀಡಲು ಸಾಧ್ಯವಾಗುವುದಿಲ್ಲ. ಪ್ರಸ್ತುತ ನಡೆಯುತ್ತಿರುವ ಆಶಸ್ ಸರಣಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿಯೂ ಅಂಥಾ ಉದಾಹರಣೆಗಳು ದೊರೆಯುತ್ತದೆ. ಆದರೆ ಭಾರತ ತಂಡದ ನಾಯಕಿಯ ಸ್ಥಾನದಲ್ಲಿದ್ದುಕೊಂಡು ಹರ್ಮನ್ ನಡೆದುಕೊಂಡ ರೀತಿ ಹೊಸ ಆಟಗಾರರಿಗೆ ಮಾದರಿ ಅಲ್ಲವೇ ಅಲ್ಲ.

ಅಂಪೈರ್ ನಿರ್ಧಾರವನ್ನು ಪ್ರಶ್ನಿಸುವ ಅವಕಾಶವೇ ಇಲ್ಲದ ಕಾಲದಲ್ಲಿ ವಿಶ್ವ ಕ್ರಿಕೆಟ್‌ನ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅದೆಷ್ಟು ಬಾರಿ ಅಂಪೈರ್‌ಗಳ ಈ ಕಳಪೆ ತೀರ್ಪುಗಳಿಗೆ ಬಲಿಯಾಗಿದ್ದರು!. ಅದರಲ್ಲೂ ಸ್ಟೀವ್ ಬಕ್ನರ್‌ರಂಥಾ ಅಂಪೈರ್ ಸಚಿನ್ ತೆಂಡೂಲ್ಕರ್ ಮೇಲೆ ವೈಯಕ್ತಿಕ ದ್ವೇಶವಿದೆಯೇನೋ ಎಂಬಷ್ಟು ಅನುಮಾನ ಮೂಡುವಷ್ಟರ ಮಟ್ಟಿಗೆ ಔಟ್ ತೀರ್ಪುಗಳನ್ನು ಹಲವು ಸಂದರ್ಭಗಳಲ್ಲಿ ನೀಡಿದ್ದು ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ.

ಶತಕದಂಚಿನಲ್ಲಿದ್ದಾಗ ಹೀಗೆ ಔಟ್ ನೀಡಿದಾಗಲೂ ಒಂದು ಕ್ಷಣ ಆಘಾತಕ್ಕೆ ಒಳಗಾದರೂ ಅಂಪೈರ್ ತೀರ್ಪನ್ನು ಸಚಿನ್ ಯಾವತ್ತೂ ಪ್ರಶ್ನಿಸಿದವರಲ್ಲ. ತಲೆ ಅಲ್ಲಾಡಿಸುತ್ತಲೇ ಫೆವಿಲಿಯನ್‌ಗೆ ನಡೆಯುತ್ತಿದ್ದರು. ಆ ಪ್ರಮಾಣದ ತಾಳ್ಮೆ ಎಲ್ಲರಿಂದಲೂ ಸಾಧ್ಯವಿಲ್ಲದಿದ್ದರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಾನು ಏನು ಮಾಡುತ್ತಿದ್ದೇವೆ ಎಂಬಷ್ಟು ಅರಿವು ನಾಯಕಿಯಾಗಿ ಹರ್ಮನ್‌ಗೆ ಇರಬೇಕಿತ್ತೇನೋ!

ಕೆಟ್ಟ ಉದಾಹರಣೆಯಾದ ಹರ್ಮನ್‌ಪ್ರೀತ್

ಬಾಂಗ್ಲಾದೇಶದ ಮಾಜಿ ನಾಯಕ ಶಕೀಬ್ ಅಲ್ ಹಸನ್ ಬಾಂಗ್ಲಾದೇಶದ ಟಿ20 ಲೀಗ್‌ನಲ್ಲಿ ಅಂಪೈರ್ ನೀಡಿದ್ದ ತೀರ್ಪೋಂದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಅಂಪೈರ್ ಜೊತೆಗೆ ಜಗಳಕ್ಕಿಳಿದು ಮೂರು ವಿಕೆಟ್‌ಗಳನ್ನು ಒಮ್ಮೆಲೆ ಕಿತ್ತು ಮೈದಾನಕ್ಕೆ ಎಸೆಯುವ ಒಂದು ಘಟನೆ ಒಂದೆರಡು ವರ್ಷಗಳ ಹಿಂದೆ ನಡೆದಾಗ ಕ್ರಿಕೆಟ್ ಅಭಿಮಾನಿಗಳು ಶಕೀಬ್ ವರ್ತನೆಯನ್ನು ಹೀನಾಯವಾಗಿ ಟೀಕಿಸಿದ್ದರು. ಆ ವಿಡಿಯೋ ಈಗಲೂ ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್ ರೂಪದಲ್ಲಿ ಹರಿದಾಡುತ್ತಿರುತ್ತದೆ. ಇದೀಗ ಹರ್ಮನ್‌ಪ್ರೀತ್ ಕೌರ್ ಕೂಡ ಅಂಥಾ ಕೆಟ್ಟ ಉದಾಹರಣೆಯಾಗಿದ್ದು ಸಹಜವಾಗಿಯೇ ಅಭಿಮಾನಿಗಳಿಗೆ ಆಘಾತ ನೀಡಿದೆ.

ಈ ರೀತಿಯ ಘಟನೆಗಳು 'ಸಾಮಾನ್ಯ' ಆಗದಿರಲಿ!!

ಈಗಾಗಲೇ ಕ್ರಿಕೆಟ್‌ನಲ್ಲಿ 'ಅಗ್ರೆಶನ್' ಹೆಸರಿನಲ್ಲಿ ಅನೇಕ ಅಕ್ಷೇಪಾರ್ಹ ನಡೆಗಳನ್ನು 'ಸಾಮಾನ್ಯ' ಎಂದು ಒಪ್ಪಿಕೊಂಡಾಗಿದೆ. ನಿಂದನಾತ್ಮಕ ಪದಗಳು ದಿಗ್ಗಜರೆನಿಸಿಕೊಂಡವರ ಬಾಯಲ್ಲಿ ಸಹವೆನ್ನುವಂತೆ ಬಂದ ಪರಿಣಾಮವಾಗಿ ಗಲ್ಲಿ ಕ್ರಿಕೆಟ್‌ನಲ್ಲಿ ಆಡುವ ಯುವ ಆಟಗಾರರು ಕೂಡ 'ಅಗ್ರೆಶನ್ ಅಂದರೆ ಇದುವೇ' ಎನ್ನುವಂತೆ ಬಹಳ ಸುಲಲಿತವಾಗಿ ಅಂಥಾ ಶಬ್ದಗಳನ್ನು ಬಳಸುತ್ತಿದ್ದಾರೆ. ಇದೀಗ ಹರ್ಮನ್‌ ಅವರ ವರ್ತನೆ ಆಘಾತ ಉಂಟು ಮಾಡಲು ಕಾರಣ ಕೂಡ ಇದುವೇ.

ಭವಿಷ್ಯದಲ್ಲಿ ಇಂಥಾ ವರ್ತನೆಗಳು ಸಾಮಾನ್ಯ ಎನ್ನುವಂತೆ ಆಗದಿರಲಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವುಗಳಿಗೆ ಕಡಿವಾಣ ಹಾಕಲು ಇನ್ನಷ್ಟು ಕಠಿಣ ನಿಯಮಗಳನ್ನು ತರಬಹುದು. ಆದರೆ ಇವುಗಳು ನಗರ ನಗರಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಆಡುವ ಯುವ ಮನಸ್ಸುಗಳನ್ನು ಅಗ್ರೆಶನ್ ಹೆಸರಿನಲ್ಲಿ ಹಾದಿತಪ್ಪಿಸುವಂತಾಗದಿರಲಿ ಎಂಬುದಷ್ಟೇ ಕಳಕಳಿ!

Story first published: Monday, July 24, 2023, 16:06 [IST]
Other articles published on Jul 24, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+