ಭಾರತ ಹಾಗೂ ವೆಸ್ಟ್ ಇಂಡಿಸ್ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲುವು ಸಾಧಿಸಿ ಸರಣಿಯಲ್ಲಿ ಮೊದಲ ಬಾರಿಗೆ ಗೆಲುವಿನ ರುಚಿ ಕಂಡಿತ್ತು. ಮೊದಲ ಎರಡು ಪಂದ್ಯಗಳಲ್ಲಿ ತೀವ್ರ ನಿರಾಸೆ ಅನುಭವಿಸಿದ್ದ ಭಾರತ ಮೂರನೇ ಪಂದ್ಯದಲ್ಲಿ ಬ್ಯಾಟಿಂಗ್ ಬೌಲಿಂಗ್ ಎರಡು ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿತ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅದ್ಭುತ ಗೆಲುವು ಸಾಧಿಸಿದ್ದರೂ ನಾಯಕ ಹಾರ್ದಿಕ್ ಪಾಂಡ್ಯ ಬೇಡದ ಕಾರಣಕ್ಕೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ.
ಯುವ ಆಟಗಾರ ತಿಲಕ್ ವರ್ಮಾ ಸರಣಿಯಲ್ಲಿ ಎರಡನೇ ಅರ್ಧ ಶತಕ ಸಿಡಿಸುವ ಅದ್ಭುತ ಅವಕಾಶವನ್ನು ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ತಪ್ಪಿಸಿದರು ಎನ್ನುವ ಕಾರಣಕ್ಕೆ ಹಾರ್ದಿಕ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಸಾಕಷ್ಟು ಕ್ರಿಕೆಟ್ ಪಂಡಿತರು ಕೂಡ ಈ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ್ದು ಇಂಥಾ ಸಂದರ್ಭದಲ್ಲಿ ಧೋನಿ ಮಾದರಿಯಾಗಬೇಕಿತ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗಿತ್ತು.

ಆದರೆ ಖ್ಯಾತ ಕ್ರಿಕೆಟ್ ಕಾಮೆಂಟೇಟರ್ ಹರ್ಷ ಭೋಗ್ಲೆ ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಸಾಕಷ್ಟು ವೈರಲ್ ಆಗಿದೆ. ಟೀಕೆಗೆ ಗುರಿಯಾಗಿರುವ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಬೆಂಬಲಕ್ಕೆ ನಿಂತಿರುವ ಹರ್ಷ ಬೋಗ್ಲೆ ನಾಯಕನ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಅಲ್ಲದೆ ಟಿ20 ಕ್ರಿಕೆಟ್‌ನಲ್ಲಿ ರ್ಧ ಶತಕ ಎನ್ನುವುದು ಮೈಲಿಗಲ್ಲೇ ಅಲ್ಲ. ಅಲ್ಲಿ ಶತಕ ಮಾತ್ರವೇ ಮೈಲಿಗಲ್ಲು ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
"ತಿಲಕ್ ವರ್ಮಾ ಅರ್ಧಶತಕ ಗಳಿಸುವ ಅವಕಾಶ ಕಳೆದುಕೊಂಡ ಬಗ್ಗೆ ನಡೆಯುತ್ತಿರುವ ಚರ್ಚೆ ನನಗೆ ಅಚ್ಚರಿಯುಂಟು ಮಾಡಿದೆ. ಅರ್ಧಶತಕ ಎನ್ನುವುದು ಮೈಲಿಗಲ್ಲು ಅಲ್ಲ. ಟಿ20 ಕ್ರಿಕೆಟ್‌ನಲ್ಲಿ ಶತಕವನ್ನು ಹೊರತುಪಡಿಸಿದರೆ ಉಳಿದ ಲ್ಯಾಂಡ್‌ಮಾರ್ಕ್‌ಗಳು ಇಲ್ಲ. ತಂಡದ ಆಟದಲ್ಲಿಯೂ ನಾವು ವೈಯಕ್ತಿಕ ದಾಖಲೆಗಳ ಮೇಲೆ ಹೆಚ್ಚಿನ ಒಲವು ಹೊಂದಿದ್ದೇವೆ. ಟಿ20 ಕ್ರಿಕೆಟ್‌ನಲ್ಲಿ ಅರ್ಧ ಶತಕಗಳು ದಾಖಲಾಗಬೇಕು ಎಂದು ನನಗೆ ಅನಿಸುತ್ತಿಲ್ಲ. ನೀವು ವೇಗವಾಗಿ ಸಾಧ್ಯವಾದಷ್ಟು ರನ್‌ಗಳನ್ನು ಗಳಿಸಿದರೆ (ಸರಾಸರಿ ಹಾಗೂ ಸ್ಟ್ರೈಕ್‌ರೇಟ್) ಸಾಕಾಗುತ್ತದೆ" ಎಂದಿದ್ದಾರೆ.
ಇನ್ನು ಹರ್ಷ ಬೋಗ್ಲೆ ಅವರ ಈ ಅಭಿಪ್ರಾಯಕ್ಕೆ ಆರ್‌ಸಿಬಿ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಕೂಡ ಪ್ರತಿಕ್ರಿಯೆ ನೀಡಿದ್ದು ಬೋಗ್ಲೆ ಅಭಿಪ್ರಾಯಕ್ಕೆ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯಗೆ ತನ್ನ ಬೆಂಬಲವೂ ಇದೆ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.
ಹರ್ಷ ಬೋಗ್ಲೆ ಮಾಡಿರುವ ಟ್ವಿಟನ್ನು ರಿಟ್ವೀಟ್ ಮಾಡಿರುವ ಎಬಿ ಡಿವಿಲಿಯರ್ಸ್ "ಥ್ಯಾಂಕ್ಯೂ ಥ್ಯಾಂಕ್ಯೂ ಥ್ಯಾಂಕ್ಯೂ. ಕಡೆಗೂ ಯಾರಾದರೊಬ್ಬರು ಈ ಮಾತನ್ನು ಹೇಳಿದರು" ಎಂದು ಎಬಿ ಡಿವಿಲಿಯರ್ಸ್ ಹರ್ಷ ಬೋಗ್ಲೆ ಮಾತಿಗೆ ಸಮ್ಮತಿ ಸೂಚಿಸಿದ್ದಾರೆ. ಈ ಮೂಲಕ ಹಾರ್ದಿಕ್ ಪಾಂಡ್ಯಗೆ ನಡೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.