

ಪೋರ್ಟ್ ಎಲಿಝಬೆತ್, ಜನವರಿ 20: ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಹಾಶೀಂ ಆಮ್ಲಾ ಅವರು ಪಾಕಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಿಧಾನಗತಿಯಲ್ಲಿ ಶತಕ ದಾಖಲಿಸಿದರು. ಆದರೆ, ಪಂದ್ಯವನ್ನು ಗೆಲ್ಲಿಸಲಾಗಲಿಲ್ಲ. ಪಾಕಿಸ್ತಾನಕ್ಕೆ 5 ವಿಕೆಟ್ ಗಳ ಜಯ ಲಭಿಸಿತು. ಆದರೆ, ತ್ವರಿತಗತಿಯಲ್ಲಿ ಏಕದಿನ ಕ್ರಿಕೆಟ್ ನಲ್ಲಿ 27ನೇ ಶತಕ ಪೂರೈಸಿದರು.
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು 169 ಏಕದಿನ ಇನಿಂಗ್ಸ್ ಗಳಲ್ಲಿ 27ನೇ ಶತಕ ಪೂರ್ಣಗೊಳಿಸಿದ್ದರು. ಆದರೆ, ಆಮ್ಲಾ ಅವರು 167 ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿ, ದಾಖಲೆ ಬರೆದಿದ್ದಾರೆ.
27ನೇ ಶತಕ ಗಳಿಸುವ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ಶತಕ ದಾಖಲಿಸಿರುವವರ ಪಟ್ಟಿಯಲ್ಲಿ 31 ವರ್ಷ ವಯಸ್ಸಿನ ಅಮ್ಲ 5ನೇ ಸ್ಥಾನದಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು 49, ವಿರಾಟ್ ಕೊಹ್ಲಿ 39, ರಿಕಿ ಪಾಂಟಿಂಗ್ 30 ಮತ್ತು ಜಯ ಸೂರ್ಯ 28, ಆಮ್ಲಾ 27 ಏಕದಿನ ಶತಕಗಳನ್ನು ದಾಖಲಿಸಿದ್ದಾರೆ.
ತ್ವರಿತಗತಿಯಲ್ಲಿ 27 ಶತಕಗಳನ್ನು ಪೂರ್ಣಗೊಳಿಸಿದವರು
167 ಇನ್ನಿಂಗ್ಸ್: ಹಾಶೀಂ ಆಮ್ಲಾ (ದಕ್ಷಿಣ ಆಫ್ರಿಕಾ)
169: ವಿರಾಟ್ ಕೊಹ್ಲಿ(ಭಾರತ)
254: ಸಚಿನ್ ತೆಂಡುಲ್ಕರ್ (ಭಾರತ)
308: ರಿಕಿ ಪಾಂಟಿಂಗ್ (ಆಸ್ಟ್ರೇಲಿಯ)
404: ಸನತ್ ಜಯಸೂರ್ಯ (ಶ್ರೀಲಂಕಾ)
ಆಮ್ಲಾ 120 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ಔಟಾಗದೆ 108 ರನ್ ಗಳಿಸಿದ್ದರು. ಹೆಂಡ್ರಿಕ್ ವಾನ್ ಡರ್ ಡುಸನ್ 93ರನ್ ನೆರವಿನಿಂದ ದಕ್ಷಿಣ ಆಫ್ರಿಕಾವು ನಿಗದಿತ 50 ಓವರ್ ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 266 ರನ್ ಗಳಿಸಿತ್ತು.
ಆದರೆ, ಪಾಕಿಸ್ತಾನ ಇನ್ನೂ 5 ಎಸೆತಗಳು ಬಾಕಿ ಇರುವಾಗಲೇ 5 ವಿಕೆಟ್ ನಷ್ಟದಲ್ಲಿ 267 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಇಮಾಮ್ ಉಲ್ ಹಕ್ 86, ಮೊಹಮ್ಮದ್ ಹಫೀಜ್ 71ರನ್ ಗಳಿಸಿ ಗೆಲುವಿಗೆ ತಮ್ಮ ಕೊಡುಗೆ ನೀಡಿದರು. ಈ ಗೆಲುವಿನ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ 1-0ರ ಮುನ್ನಡೆ ಗಳಿಸಿದೆ.