
ಕೊಲ್ಕತ್ತಾ ನೈಟ್ ರೈಸರ್ಸ್ ವಿರುದ್ದದ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಬ್ಯಾಟಿಂಗ್ ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಆರ್‌ಸಿಬಿ ಸರ್ವಾಂಗೀಣ ಪ್ರದರ್ಶನ ನೀಡಿದ್ದು ಗಮನಾರ್ಹ ಸಂಗತಿ. ಪಂದ್ಯದ ಬಳಿಕ ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಪ್ರತಿಕ್ರಿಯಸಿದ್ದು ಎರಡು ತಂಡಗಳ ನಡುವಿನ ವ್ಯತ್ಯಾಸವೇನೆಂದು ಹೇಳಿದ್ದಾರೆ.
ಆರ್‌ಸಿಬಿ ವಿರುದ್ಧ ಸೋಲು ಕಂಡ ಬಳಿಕ ದಿನೇಶ್ ಕಾರ್ತಿಕ್, ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಈ ಆಟಗಾರನೇ ಎರಡು ತಂಡಗಳ ನಡುವಿನ ವ್ಯತ್ಸಾಸ ಎಂದು ದಿನೇಶ್ ಕಾರ್ತಿಕ್ ಸೋಮವಾರದ ಪಂದ್ಯದ ಬಳಿಕ ಪ್ರತಿಕ್ರಿಯಸಿದ್ದಾರೆ.
"ಎಬಿ ಡಿವಿಲಿಯರ್ಸ್ ಓರ್ವ ವಿಶ್ವ ದರ್ಜೆಯ ಆಟಗಾರ. ಆತನನ್ನು ನಿಯಂತ್ರಿಸುವುದು ಕಠಿಣ. ಎರಡು ತಂಡಗಳ ನಡುವಿನ ವ್ಯತ್ಯಾಸವೇ ಎಬಿ ಡಿವಿಲಿಯರ್ಸ್. ನಾವು ಎಲ್ಲಾ ಸಾಧ್ಯತೆಗಳನ್ನೂ ಪ್ರಯತ್ನಿಸಿದೆವು. ಇನ್‌ಸ್ವಿಂಗಿಂಗ್ ಯಾರ್ಕರ್ ಮಾತ್ರವೇ ಅವರನ್ನು ತಡೆದಿತ್ತು. ಉಳಿದೆಲ್ಲವೂ ಅಂಗಳದಾಚೆಗೆ ಚಿಮ್ಮುತ್ತಿತ್ತು" ಎಂದು ದಿನೇಶ್ ಕಾರ್ತಿಕ್ ಪಂದ್ಯದ ಬಳಿಕ ಮಾತನಾಡುತ್ತಾ ಹೇಳಿದರು.
ದಿನೇಶ್ ಕಾರ್ತಕ್ ಈ ಸೋಲಿನಿಂದ ಹೊರಬರಲು ತಂಡಕ್ಕೆ ಮೂರು ದಿನಗಳ ಅವಕಾಶವಿದ್ದು ರಣತಂತ್ರದೊಂದಿಗೆ ಕಣಕ್ಕಿಳಿಯುವುದಾಗಿ ಹೇಳಿದರು. ತಂಡ ಎಡವುತ್ತಿರುವ ವಿಭಾಗದಲ್ಲಿ ಇನ್ನಷ್ಟು ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಮತ್ತಷ್ಟು ಬಲಿಷ್ಠಗೊಳ್ಳಬೇಕು ಎಂದು ಡಿಕೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾವು ಕುಳಿತು ಯೋಚಿಸುವ ಅಗತ್ಯವಿದೆ. ಇಲ್ಲಿ ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಸಾಕಷ್ಟು ಅವಕಾಶಗಳು ಇವೆ. ನಾವು ಅವರನ್ನು 175 ರನ್‌ಗಳಿಗೆ ನಿಯಂತ್ರಿಸಿದ್ದರೂ ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಬದಲಾವಣೆ ಮಾಡಿಕೊಳ್ಳಲು ಅವಕಾಶಗಳಿದೆ ಎಂದು ದಿನೇಶ್ ಕಾರ್ತಿಕ್ ಹೇಳಿಕೆಯನ್ನು ನೀಡಿದ್ದಾರೆ.