ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡವು 2023ರ ಐಸಿಸಿ ಏಕದಿನ ವಿಶ್ವಕಪ್‌ಗೆ ಮುಂಚಿತವಾಗಿ ಬುಧವಾರ, ಸೆಪ್ಟೆಂಬರ್ 27ರಂದು ಭಾರತಕ್ಕೆ ಬಂದಿಳಿದಿದೆ.
ಬಾಬರ್ ಅಜಂ ನಾಯಕತ್ವದ 15 ಸದಸ್ಯರ ತಂಡವು ಪಾಕಿಸ್ತಾನದಿಂದ ದುಬೈ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿತು. ನಂತರ ಹೈದರಾಬಾದ್‌ಗೆ ಬಂದಿಳಿಯಿತು. ಇಲ್ಲಿ ಪಾಕಿಸ್ತಾನ ತಂಡ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.

ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಮೊದಲ ಪಂದ್ಯ ಅಕ್ಟೋಬರ್ 6ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ನಡೆಯಲಿದೆ.
ಪಾಕಿಸ್ತಾನ ಕ್ರಿಕೆಟ್ ಎಕ್ಸ್ (ಟ್ವಿಟರ್)ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ರಾಷ್ಟ್ರೀಯ ತಂಡವು ಅವರ ಮೊದಲ ನೆಟ್ಸ್ ಸೆಷನ್ ಮತ್ತು ಅಭ್ಯಾಸ ಸೆಷನ್‌ನಲ್ಲಿ ತರಬೇತಿ ಪಡೆಯುತ್ತಿರುವುದನ್ನು ತೋರಿಸಿದೆ.
ಪಾಕಿಸ್ತಾನ ತಂಡದ ಆರಂಭಿಕ ಬ್ಯಾಟರ್ ಫಖರ್ ಜಮಾನ್ ಅವರು ಹೈದರಾಬಾದ್‌ಗೆ ಬಂದಿಳಿಯುತ್ತಿದ್ದಂತೆಯೇ ಇನ್ನೊಂದು ಹೆಸರಿನಿಂದ ಕರೆಯುವ ಮೂಲಕ ಭಾರತದ ಅಭಿಮಾನಿಗಳ ಹೃದಯವನ್ನು ಗೆದ್ದರು. ಇತ್ತೀಚೆಗೆ, ಭಾರತ ಸರ್ಕಾರವು ತನ್ನನ್ನು ಭಾರತ್ ಎಂದು ಪ್ರಸ್ತುತಪಡಿಸಿದೆ. ಇದು ಭಾರತೀಯ ಸಂವಿಧಾನದಲ್ಲಿ ಉಲ್ಲೇಖಿಸಲಾದ ಹೆಸರಾಗಿದೆ ಎಂಬುದು ಗಮನಾರ್ಹ.
ಫಖರ್ ಜಮಾನ್ ಕೂಡ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ 'ಹಲೋ, ಭಾರತ್' ಎಂದು ಹೇಳುವ ಮೂಲಕ ಅದೇ ಹೆಸರನ್ನು ಬಳಸಿದ್ದಾರೆ. ಇದಕ್ಕೆ ಪ್ರತಿಯಾಗಿ, ಭಾರತದ ಅಭಿಮಾನಿಗಳು ಫಖರ್ ಜಮಾನ್ ಅವರನ್ನು ಭಾರತಕ್ಕೆ ಸ್ವಾಗತಿಸುತ್ತಿರುವುದನ್ನು ನೋಡಬಹುದು.
ಪಾಕಿಸ್ತಾನಿ ಕ್ರಿಕೆಟಿಗ ಭಾರತೀಯ ಪೌರತ್ವವನ್ನು ತೆಗೆದುಕೊಳ್ಳಲು ಬಯಸುತ್ತಿರಬಹುದು ಎಂದು ಕೆಲವು ಅಭಿಮಾನಿಗಳು ಫಖರ್ ಜಮಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ತಂಡ ತಮ್ಮ ಮೊದಲ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಿದ ನಂತರ, ಮೆನ್ ಇನ್ ಗ್ರೀನ್ ತಂಡವು ಅಕ್ಟೋಬರ್ 10ರಂದು ಹೈದರಾಬಾದ್‌ನಲ್ಲಿ ನಡೆಯುವ ವಿಶ್ವಕಪ್‌ನ 8ನೇ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.
ಆ ಬಳಿಕ ಪಾಕಿಸ್ತಾನ ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಹಾಗೂ ಆತಿಥೇಯ ಭಾರತ ತಂಡದ ವಿರುದ್ಧ ಹೈ-ವೋಲ್ಟೇಜ್ ಕದನದಲ್ಲಿ ಸೆಣಸಾಡಲಿದೆ.
ಗಮನಾರ್ಹವಾಗಿ, ಪಾಕಿಸ್ತಾನ ತಂಡವು ವಿಶ್ವ ನಂ.2 ಏಕದಿನ ತಂಡವಾಗಿ ವಿಶ್ವಕಪ್ ಪ್ರವೇಶಿಸುತ್ತದೆ. 2023ರ ಏಷ್ಯಾ ಕಪ್ ಅಂತ್ಯದವರೆಗೆ ಅವರು ವಿಶ್ವ ನಂ.1 ಸ್ಥಾನದಲ್ಲಿದ್ದರು. ಇದೀಗ ಭಾರತ ನಂ.1 ಏಕದಿನ ತಂಡವೆನಿಸಿದೆ.
ಇದಕ್ಕಾಗಿ ಭಾರತ 2023ರ ಏಷ್ಯಾ ಕಪ್ ಗೆದ್ದು, ಮೊದಲ 2 ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತು. ಹೀಗಾಗಿ ಪಾಕಿಸ್ತಾನ ಐಸಿಸಿ ಏಕದಿನ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೆ ಕುಸಿದಿದೆ.
ಐತಿಹಾಸಿಕವಾಗಿ, ವಿಶ್ವಕಪ್‌ಗೆ ಮುನ್ನ ಏಕದಿನ ಶ್ರೇಯಾಂಕದಲ್ಲಿ ಮೊದಲೆರಡು ಸ್ಥಾನದಲ್ಲಿರುವ ತಂಡಗಳು ಪ್ರಶಸ್ತಿಯನ್ನು ಗೆದ್ದಿವೆ. 1999ರಿಂದ ಇದು ಪ್ರವೃತ್ತಿಯಾಗಿ ಬಂದಿದೆ ಎಂಬುದು ಗಮನಿಸಬೇಕಾದ ಸಂಗತಿ.
ಭಾರತ ತಂಡವು 2023ರ ವಿಶ್ವಕಪ್ ಟ್ರೋಫಿಯನ್ನು ಗೆಲ್ಲುವ ನೆಚ್ಚಿನ ತಂಡವೆಂದು ತೋರುತ್ತಿದೆ. ಇದೇ ವೇಳೆ ಪಾಕಿಸ್ತಾನ ತಂಡವು ನಾಲ್ಕು ಸೆಮಿಫೈನಲಿಸ್ಟ್‌ಗಳಲ್ಲಿ ಒಂದು ಬಿಂಬಿಸಲಾಗುತ್ತಿದೆ.
ಪಾಕಿಸ್ತಾನ ಬಲಿಷ್ಠ ತಂಡವನ್ನು ಹೊಂದಿದೆ ಮತ್ತು ಭಾರತದಂತೆಯೇ ಅದೇ ಪರಿಸ್ಥಿತಿಯಲ್ಲಿ ಆಡುತ್ತದೆ. ಅವರು ಏಷ್ಯಾ ಕಪ್ ಪಂದ್ಯಾವಳಿಯನ್ನು ಕಳೆದುಕೊಂಡಿರಬಹುದು, ಆದರೆ ಅದು ಅಪಾಯಕಾರಿ ತಂಡವೆಂಬುದರಲ್ಲಿ ಎರಡು ಮಾತಿಲ್ಲ.