
ಟೀಮ್ ಇಂಡಿಯಾ ಜೂನ್ 3ರಂದು ಇಂಗ್ಲೆಂಡ್‌ನ ಸೌತಾಂಪ್ಟನ್ ತಲುಪಲಿದ್ದು ಜೂನ್ 18ರಂದು ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಸೆಣಸಾಡಲಿದೆ. ಈ ಪಂದ್ಯ ಮುಗಿದ ಬಳಿಕ ಇಂಗ್ಲೆಂಡ್‌ನಲ್ಲಿಯೇ ಉಳಿದುಕೊಳ್ಳಲಿರುವ ಟೀಮ್ ಇಂಡಿಯಾ ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.
ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳೆರಡೂ ಬಲಿಷ್ಠತೆಯಿಂದ ಕೂಡಿದ್ದು ಜೂನ್ 18ರಂದು ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಇತ್ತಂಡಗಳ ನಡುವೆ ಭಾರಿ ಪೈಪೋಟಿ ಏರ್ಪಡಲಿದೆ. ಇನ್ನು ಈ ಪಂದ್ಯ ಮುಗಿದ ಬಳಿಕ ಆಗಸ್ಟ್ ತಿಂಗಳಿನಲ್ಲಿ ಆರಂಭವಾಗಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಕೂಡ ಪ್ರಮುಖವಾದ ಸರಣಿಯಾಗಿದ್ದು ಭಾರತ ನೆಲದಲ್ಲಿ ಕಳೆದ ಬಾರಿ ಸರಣಿ ಸೋಲು ಕಂಡಿದ್ದ ಇಂಗ್ಲೆಂಡ್ ತಂಡ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ.
ಇನ್ನು ಮುಂಬರುವ ದಿನಗಳಲ್ಲಿ ಸಾಲು ಸಾಲು ಟೆಸ್ಟ್ ಪಂದ್ಯಗಳು ನಡೆಯಲಿದ್ದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನಿರ್ಮಾಣವಾಗಿರುವ ವಿಶೇಷ ದಾಖಲೆಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ದಾಖಲೆಗಳ ಪೈಕಿ ವರ್ಷವೊಂದರಲ್ಲಿ ಅತಿಹೆಚ್ಚು ಟೆಸ್ಟ್ ಅರ್ಧಶತಕಗಳನ್ನು ಸಿಡಿಸಿದ ಆಟಗಾರ ಎಂಬ ದಾಖಲೆ ಕೂಡ ಒಂದು. ಈ ದಾಖಲೆಯನ್ನು ವಿರೇಂದ್ರ ಸೆಹ್ವಾಗ್ ಹಾಗೂ ಜೋ ರೂಟ್ ಹಂಚಿಕೊಂಡಿದ್ದಾರೆ. ಹೌದು 2010ರಲ್ಲಿ ವಿರೇಂದ್ರ ಸೆಹ್ವಾಗ್ 13 ಟೆಸ್ಟ್ ಅರ್ಧಶತಕಗಳನ್ನು ಸಿಡಿಸಿದ್ದರು. ಇಂಗ್ಲೆಂಡ್ ತಂಡದ ಆಟಗಾರ ಜೋ ರೂಟ್ 2015 ಹಾಗೂ 2016 ಎರಡೂ ವರ್ಷಗಳಲ್ಲಿಯೂ ತಲಾ 13 ಟೆಸ್ಟ್ ಅರ್ಧಶತಕಗಳನ್ನು ಸಿಡಿಸುವುದರ ಮೂಲಕ ವಿರೇಂದ್ರ ಸೆಹ್ವಾಗ್ ಮಾಡಿದ್ದ ದಾಖಲೆಯನ್ನು ಸರಿದೂಗಿಸಿಕೊಂಡಿದ್ದಾರೆ. ವೀರೇಂದ್ರ ಸೆಹ್ವಾಗ್ ಮತ್ತು ಜೋ ರೂಟ್ ಬಾರಿಸಿರುವ ಈ ಅರ್ಧಶತಕಗಳು ವರ್ಷವೊಂದರಲ್ಲಿ ಆಟಗಾರನೊಬ್ಬ ಬಾರಿಸಿರುವ ಅತಿಹೆಚ್ಚು ಟೆಸ್ಟ್ ಅರ್ಧಶತಕಗಳಾಗಿವೆ.