ದಿನೇಶ್ ಕಾರ್ತಿಕ್‌ಗೆ ಯಾಕೆ ಅವಕಾಶ ನೀಡಿಲ್ಲ ಎನ್ನುವುದಕ್ಕೆ ಕಾರಣ ತಿಳಿಸಿದ ರೋಹಿತ್ ಶರ್ಮಾ
ಏಷ್ಯಾಕಪ್ 2022 ಪಂದ್ಯಾವಳಿಯಲ್ಲಿ ಕಪ್ ಗೆಲ್ಲುವ ಫೇವರಿಟ್ ತಂಡ ಎನಿಸಿಕೊಂಡಿದ್ದ ಟೀಂ ಇಂಡಿಯಾ ಈಗ ಟೂರ್ನಿಯಿಂದಲೇ ಹೊರಬೀಳುವ ಪರಿಸ್ಥಿತಿಯಲ್ಲಿದೆ. ಸೂಪರ್ 4 ಹಂತದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸೋತಾಗಲೇ ಭಾರತ ತಂಡದ ಆಯ್ಕೆ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.
ಆದರೆ ನಂತರದ, ಶ್ರೀಲಂಕಾ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲೂ ಭಾರತ ತಂಡ ರವಿ ಬಿಷ್ಣೋಯ್‌ರನ್ನು ಕೈಬಿಟ್ಟು ರವಿಚಂದ್ರನ್ ಅಶ್ವಿನ್‌ರನ್ನು ಆಯ್ಕೆ ಮಾಡಿತು. ಈ ಪಂದ್ಯದಲ್ಲಿದಿನೇಶ್ ಕಾರ್ತಿಕ್ ಸ್ಥಾನ ಪಡೆಯುವ ನಿರೀಕ್ಷೆ ಇತ್ತಾದರೂ, ಅವರನ್ನು ಟೀಂ ಇಂಡಿಯಾ ಆಯ್ಕೆ ಮಾಡದೇ ಕಡೆಗಣಿಸಿತ್ತು.
ಪಾಕಿಸ್ತಾನ, ಶ್ರೀಲಂಕಾ ತಂಡಗಳ ಎದುರು ಮೊದಲು ಬ್ಯಾಟ್ ಮಾಡಿದ್ದ ಭಾರತ ಒಂದು ಹಂತದಲ್ಲಿ ಉತ್ತಮ ರನ್ ಕಲೆಹಾಕುವ ಅವಕಾಶ ಹೊಂದಿದ್ದರೂ, ಅಂತಿಮ ಓವರ್ ಗಳಲ್ಲಿ ವಿಕೆಟ್ ಕಳೆದುಕೊಂಡ ಕಾರಣ ನಿರೀಕ್ಷಿತ ಮೊತ್ತ ಕಲೆ ಹಾಕುವಲ್ಲಿ ವಿಫಲವಾಯಿತು. ಎರಡೂ ಪಂದ್ಯಗಳಲ್ಲಿ ಭಾರತ ನೀಡಿದ ಮೊತ್ತವನ್ನು ಎರಡೂ ತಂಡಗಳು ಯಶಸ್ವಿಯಾಗಿ ಚೇಸ್ ಮಾಡಿದ್ದವು. ಅಂತಿಮ ಓವರ್ ವರೆಗೆ ಎರಡೂ ಪಂದ್ಯಗಳೂ ನಡೆದವು, ಭಾರತ ಇನ್ನು 10 ರಿಂದ 20 ರನ್ ಹೆಚ್ಚು ಕಲೆ ಹಾಕಿದ್ದರೆ ಎರಡೂ ಪಂದ್ಯಗಳನ್ನು ಗೆಲ್ಲುವ ಸಾಧ್ಯತೆ ಹೆಚ್ಚಿತ್ತು.

ಡಿಕೆ ಇದ್ದಿದ್ದರೆ ಗೆಲ್ಲುವ ಅವಕಾಶವಿತ್ತು
ಈ ಎರಡೂ ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಆಡಿದ್ದರೆ ಇನ್ನೂ 10 ರಿಂದ 20 ರನ್ ಹೆಚ್ಚಿನ ಸ್ಕೋರ್ ಮಾಡಬಹುದಿತ್ತು ಎಂದು ಹಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ. ದೀಪಕ್ ಹೂಡಾ ಬದಲಿಗೆ ದಿನೇಶ್ ಕಾರ್ತಿಕ್‌ರನ್ನು ಆಡಿಸದೇ ಟೀಂ ಇಂಡಿಯಾ ತಪ್ಪು ಮಾಡಿತು ಎನ್ನುವ ಟೀಕೆ ಕೇಳಿಬಂದಿದೆ.
ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಕೂಡ ಈ ಬಗ್ಗೆ ಮಾತನಾಡಿದ್ದು, ದಿನೇಶ್ ಕಾರ್ತಿಕ್‌ರನ್ನು ಫಿನಿಶರ್ ಪಾತ್ರ ನಿಭಾಯಿಸಲು ತಂಡಕ್ಕೆ ಆಯ್ಕೆ ಮಾಡಿ ಅವರನ್ನು ಡ್ರೆಸ್ಸಿಂಗ್ ರೂಂನಲ್ಲಿ ಕೂರಿಸಲಾಗಿದೆ ಎಂದು ಟೀಕಿಸಿದ್ದರು.

ಡಿಕೆ ಆಡಿಸದ ಬಗ್ಗೆ ರೋಹಿತ್ ಶರ್ಮಾ ಪ್ರತಿಕ್ರಿಯೆ
ದಿನೇಶ್ ಕಾರ್ತಿಕ್‌ರನ್ನು ಆಯ್ಕೆ ಮಾಡದ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ಎಡಗೈ ಬ್ಯಾಟರ್ ಆಯ್ಕೆ ಮಾಡುವ ಉದ್ದೇಶದಿಂದ ದಿನೇಶ್ ಕಾರ್ತಿಕ್ ಅವರನ್ನು ತಂಡದಿಂದ ಹೊರಗಿಡಲಾಯಿತು ಎಂದು ಹೇಳಿದ್ದಾರೆ. ಜಡೇಜಾ ಗಾಯಗೊಂಡು ಹೊರಗುಳಿದ ನಂತರ ಎಡಗೈ ಬ್ಯಾಟರ್ ರಿಷಬ್ ಪಂತ್ ಸ್ಥಾನ ಪಡೆದಿದ್ದರು.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ನಮಗೆ ಎಡಗೈ ಬ್ಯಾಟರ್ ಅಗತ್ಯವಿತ್ತು, ಆದ್ದರಿಂದಲೇ ದಿನೇಶ್ ಕಾರ್ತಿಕ್ ಬದಲಿಗೆ ರಿಷಬ್ ಪಂತ್‌ರನ್ನು ಆಯ್ಕೆ ಮಾಡಲಾಯಿತು ಎಂದು ಹೇಳಿದ್ದಾರೆ.

ಎದುರಾಳಿಗಳನ್ನು ಆಧರಿಸಿ ಬದಲಾವಣೆ
ಕಳಪೆ ಫಾರ್ಮ್ ಕಾರಣಕ್ಕೆ ದಿನೇಶ್ ಕಾರ್ತಿಕ್‌ರನ್ನು ಕೈಬಿಟ್ಟಿಲ್ಲ, ತಂಡದಲ್ಲಿ ಎಲ್ಲಾ ಆಟಗಾರರಿಗೂ ಮನ್ನಣೆ ನೀಡುತ್ತೇವೆ. ಏಷ್ಯಾಕಪ್ ನಂತರ ಭಾರತದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಹಲವು ಬದಲಾವಣೆಗಳನ್ನು ಮಾಡುತ್ತೇವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಎದುರಾಳಿ ತಂಡಗಳನ್ನು ನೋಡಿಕೊಂಡು ತಂಡದಲ್ಲಿ ಆಟಗಾರರನ್ನು ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ನಾಲ್ಕೈದು ಬ್ಯಾಟರ್‌ಗಳು ಆಡುತ್ತಾರೆ, ಆದರೆ ಬ್ಯಾಟಿಂಗ್‌ನಲ್ಲಿ ಯಾವಾಗಲೂ ಒಂದು-ಎರಡು ಬದಲಾವಣೆಗಳಿರುತ್ತವೆ ಎಂದು ಹೇಳಿದ್ದಾರೆ.

ನಿರ್ಧಾರ ಸಮರ್ಥಿಸಿಕೊಂಡ ರೋಹಿತ್ ಶರ್ಮಾ
ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡದ ಬಗ್ಗೆ ರೋಹಿತ್ ಶರ್ಮಾ ಸಮರ್ಥನೆ ಮಾಡಿಕೊಂಡಿದ್ದಾರೆ. "ಏನೂ ತಪ್ಪಿಲ್ಲ ಎಂದು ನಾನು ಭಾವಿಸುತ್ತೇನೆ, ಹೊರಗಿನಿಂದ ಆ ರೀತಿ ಕಾಣುತ್ತದೆ, ಆದರೆ ನಾವು ಅದನ್ನು ಆ ರೀತಿಯಲ್ಲಿ ನೋಡುವುದಿಲ್ಲ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
"ಸೋತಾಗ ಅಂತಹ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದು ಸಾಮಾನ್ಯ. ಆದರೆ ತಂಡದ ಮಟ್ಟಿಗೆ ನೀವು ಡ್ರೆಸ್ಸಿಂಗ್ ರೂಮ್‌ಗೆ ಹೋಗಿ ನೋಡಬಹುದು, ಎಲ್ಲಾ ಹುಡುಗರು ವಿಶ್ರಾಂತಿ ಮತ್ತು ಸಮಾಧಾನದಿಂದ ಇದ್ದಾರೆ. ನೀವು ಗೆದ್ದರೂ ಸೋತರೂ ನಮಗೆ ಅಂತಹ ವಾತಾವರಣ ಬೇಕು. ಡ್ರೆಸ್ಸಿಂಗ್ ರೂಮ್ ವಾತಾವರಣವನ್ನು ಈಗಿರುವಂತೆ ಮಾಡಲು ಸಾಕಷ್ಟು ಕೆಲಸ ಮಾಡಿದ್ದೇವೆ" ಎಂದು ರೋಹಿತ್ ಅಭಿಪ್ರಾಯಪಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications