
ಲಂಡನ್, ಮೇ 31: ಪಾಕಿಸ್ತಾನ ತಂಡವನ್ನು 7 ವಿಕೆಟ್‌ಗಳಿಂದ ಬಗ್ಗುಬಡಿದು ಪ್ರಸಕ್ತ ಚಾಲ್ತಿಯಲ್ಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ಸ್ ವೆಸ್ಟ್ ಇಂಡೀಸ್ ತಂಡ ಶುಭಾರಂಭ ಮಾಡಿದ್ದು, ಇದೇ ವೇಳೆ ಈ ಭರ್ಜರಿ ಗೆಲುವು ತಂದುಕೊಟ್ಟ ತಂಡದ ಬೌಲರ್‌ಗಳನ್ನು ನಾಯಕ ಜೇಸನ್ ಹೋಲ್ಡರ್ ಕೊಂಡಾಡಿದ್ದಾರೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 105 ರನ್‌ಗಳಿಗೆ ಆಲ್‌ಔಟ್ ಆಯಿತು. ಇದು ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ದಾಖಲಿಸಿದ ಎರಡನೇ ಅತ್ಯಂತ ಕಡಿಮೆ ಮೊತ್ತವಾಗಿದೆ.
ಬಳಿಕ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ 13.4 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು 108 ರನ್‌ಗಳನ್ನು ಚಚ್ಚುವ ಮೂಲಕ ಭರ್ಜರಿ ಜಯ ದಾಖಲಿಸಿತು. ಬ್ಯಾಟಿಂಗ್‌ನಲ್ಲಿ ವಿಂಡೀಸ್ ಪರ ಕ್ರಿಸ್ ಗೇಲ್ 34 ಎಸೆತಗಳಲ್ಲಿ 50 ರನ್‌ಗಳನ್ನು ಬಾರಿಸಿದರೆ, ನಿಕೊಲಾಸ್ ಪೂರನ್ ಅಜೇಯ 34 ರನ್‌ಗಳನ್ನುಸಿಡಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದರು.
ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಂಡೀಸ್ ನಾಯಕ ಹೋಲ್ಡರ್, "ಉತ್ತಮ ಆರಂಭ ಸಿಕ್ಕಿದೆ. ಹೊಸ ಚೆಂಡಿನಲ್ಲಿ ವಿಕೆಟ್‌ಗಳನ್ನು ತೆಗೆಯುವಲ್ಲಿ ಯಶಸ್ವಿಯಾದೆವು. ತಂಡದ ಬೌಲರ್‌ಗಳಿಂದ ಬಯಸಿದ್ದು ಇದನ್ನೇ. ರಸಲ್ ಅತ್ಯಂತ ಪ್ರಭಾವಯುತ ಆಟಗಾರ. ಇಂದಿನ ಪಂದ್ಯದಲ್ಲೂ ಅವರು ತಮ್ಮ ಛಾಪು ಮೂಡಿಸಿದರು. ಬಳಿಕ ಒಶೇನ್ ಥಾಮಸ್ ಮತ್ತು ಶೆಲ್ಡನ್ ಕಾಟ್ರೆಲ್ ತಮ್ಮ ಜವಾಬ್ದಾರಿ ನಿಭಾಯಿಸಿದರು,'' ಎಂದು ಪ್ರಶಂಸೆಗಳ ಸುರಿಮಳೆ ಹರಿಸಿದ್ದಾರೆ.
"ಒಶೇನ್ ರನ್ ಬಿಟ್ಟುಕೊಡುತ್ತಾರೆ ಎಂಬುದು ನಮಗೆ ಗೊತ್ತಿದೆ. ಆದರೆ, ಅವರು ವಿಕೆಟ್ ಪಡೆಯಬಲ್ಲ ಬೌಲರ್. ಈಗೆಲ್ಲೇ ದೊಡ್ಡ ದೊಡ್ಡ ಮೊತ್ತಗಳೇ ದಾಖಲಾಗುತ್ತಿದೆ. ಹೀಗಿರುವಾಗ ವಿಕೆಟ್ ಪಡೆಯಬಲ್ಲ ಬೌಲರ್‌ನ ಅಗತ್ಯ ತಂಡಕ್ಕಿದೆ. ಹೀಗಾಗಿ ಒಶೇನ್ ಅತ್ಯಂತ ಪರಿಣಾಮಕಾರಿ ಆಟಗಾರನಾಗಿದ್ದಾರೆ. ಇನ್ನು ರನ್ ಚೇಸಿಂಗ್ ವೇಳೆ ಕ್ರಿಸ್ ಗೇಲ್ ಉಳಿದ ಬ್ಯಾಟ್ಸ್‌ಮನ್‌ಗಳ ಮೇಲಿನ ಒತ್ತಡ ಕಡಿಮೆ ಮಾಡುತ್ತಾರೆ,'' ಎಂದು ಹೇಳಿದ್ದಾರೆ. ಪಂದ್ಯದಲ್ಲಿ ಹೋಲ್ಡರ್ ಕೂಡ ಉತ್ತಮ ಬೌಲಿಂಗ್ ದಾಳಿ ನಡೆಸಿ ಮೂರು ವಿಕೆಟ್‌ಗಳನ್ನು ಪಡೆದಿದ್ದರು.