
ಗಯಾನಾ, ಆಗಸ್ಟ್ 8: ಭಾರತದ ನಾಯಕ ವಿರಾಟ್ ಕೊಹ್ಲಿ ಜೊತೆಗೆ ಫೋಟೋ ತೆಗೆಸಿಕೊಂಡಿದ್ದು ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕತೆ ವಿವಿಯನ್ ರಿಚರ್ಡ್ಸ್‌ಗೆ ಗೌರವ ಮೂಡಿಸಿದೆ ಎಂದು ವಿಂಡೀಸ್ ಮಾಜಿ ಕ್ರಿಕೆಟಿಗ ಇಯಾನ್ ಬಿಶಪ್ ಹೇಳಿದ್ದಾರೆ. ಆಗಸ್ಟ್ 5ರಂದು ಕೊಹ್ಲಿ, ವಿವ್ ರಿಚರ್ಡ್ಸ್ ಜೊತೆಗೆಗಿದ್ದ ಫೋಟೋ ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದರು.
ಭಾನುವಾರ (ಆಗಸ್ಟ್ 4) ಎರಡನೇ ಟಿ20ಯಲ್ಲಿ ವಿಂಡೀಸ್ ವಿರುದ್ಧ ಭಾರತ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) 22 ರನ್ ಜಯ ಗಳಿಸಿತ್ತು. ಆ ಬಳಿಕ ಅಂದರೆ ಆಗಸ್ಟ್ 5ರಂದು ಕೊಹ್ಲಿ, ರಿಚರ್ಡ್ಸ್ ಜೊತೆಗಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಹಾಕಿ, 'ಬಲು ದೊಡ್ಡ ಬಾಸ್ ವಿವಿಯನ್ ರಿಚರ್ಡ್ಸ್ ಅವರೊಂದಿಗೆ' ಎಂದು ಸಾಲೊಂದನ್ನು ಬರೆದುಕೊಂಡಿದ್ದರು.
ಆಗಸ್ಟ್ 7ರಂದು ಟ್ವೀಟ್ ಮಾಡಿರುವ ಇಯಾನ್ ಬಿಶಪ್, ಕೊಹ್ಲಿ ಫೋಟೋವನ್ನು ರಿ ಟ್ವೀಟ್ ಮಾಡಿ, 'ಕೊಹ್ಲಿ ಇದನ್ನು ನೆನ್ನೆ ಟ್ವೀಟ್ ಮಾಡಿದ್ದರು. ಇದರ ಬಗ್ಗೆ ನಾನು ಸರ್ ವಿವಿಯನ್ ರಿಚರ್ಡ್ಸ್ ಅವರಲ್ಲಿ ಮಾತನಾಡಿದೆ. ಅವರಿಗೆ ಕೊಹ್ಲಿಯ ಈ ಟ್ವೀಟ್ ವಿಚಾರ ಗೊತ್ತಿದ್ದಂತಿರಲಿಲ್ಲ. ಅವರು ಕೊಹ್ಲಿಯಂತ ದಂತಕತೆಯೊಂದಿಗೆ ಪೋಟೋ ತೆಗೆಸಿಕೊಂಡಿದ್ದು ನನಗೆ ಗೌರವದ ಸಂಗತಿ ಎಂದು ಪ್ರತಿಕ್ರಿಯಿಸಿದರು. ಶ್ರೇಷ್ಠ ವ್ಯಕ್ತಿಯಲ್ಲಿರುವ ನಮ್ರತೆ ನೋಡಿ' ಎಂದು ಬರೆದುಕೊಂಡಿದ್ದರು.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ, 3 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್‌ಗೊಳಿಸಿದೆ. ಆಗಸ್ಟ್ 8ರಂದು ಇತ್ತಂಡಗಳ ಮೊದಲ ಏಕದಿನ ಪಂದ್ಯ ನಡೆಯಲಿದೆ. ಏಕದಿನ ಸರಣಿ 3 ಪಂದ್ಯಗಳನ್ನು ಒಳಗೊಂಡಿದ್ದು, ಇಲ್ಲೂ ಸರಣಿ ಗೆಲುವಿನ ವಿಶ್ವಾಸದಲ್ಲಿ ಕೊಹ್ಲಿ ಬಳಗವಿದೆ.