2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಲು ವಿಫಲವಾದ ನಂತರ ಮತ್ತು ಗುಂಪು ಹಂತಗಳಲ್ಲಿಯೇ ಹೊರಗುಳಿದ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಈ ಬಾರಿ ನೀರಸ ಅಭಿಯಾನ ಹೊಂದಿವೆ.
ಆದಾಗ್ಯೂ, ವಿಶ್ವಕಪ್ ಪಂದ್ಯಾವಳಿಯಲ್ಲಿ ಕಳಪೆ ಪ್ರದರ್ಶನದ ಹೊರತಾಗಿಯೂ, ಎರಡೂ ತಂಡಗಳು ಇಷ್ಟು ಬಹುಮಾನವನ್ನು ಪಡೆಯುತ್ತಾರೆ ಎಂದು ಕೇಳಿ ಹಲವರು ಆಶ್ಚರ್ಯ ಪಡುವುದುಂಟು.

ಪ್ರತಿ ಗುಂಪು ಹಂತದ ವಿಜಯಕ್ಕಾಗಿ ಪಾಕಿಸ್ತಾನವು 40,000 ಯುಎಸ್ ಡಾಲರ್ ಮತ್ತು ಗುಂಪು ಹಂತಗಳಲ್ಲಿ ಹೊರಬಿದ್ದ ಕಾರಣ, 100,000 ಯುಎಸ್ ಡಾಲರ್ ಪಡೆಯುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಪಾಕಿಸ್ತಾನ ತಂಡ ಒಟ್ಟಾರೆಯಾಗಿ, 260,000 ಯುಎಸ್ ಡಾಲರ್ ಬಹುಮಾನ ಮೊತ್ತದೊಂದಿಗೆ ತವರಿಗೆ ಮರಳಲಿದೆ.
ಮತ್ತೊಂದೆಡೆ, 2019ರ ವಿಶ್ವಕಪ್ ಚಾಂಪಿಯನ್ ತಂಡ ಇಂಗ್ಲೆಂಡ್ ಪ್ರತಿ ಗುಂಪು ಹಂತದ ಗೆಲುವಿಗೆ 40,000 ಯುಎಸ್ ಡಾಲರ್ ಮತ್ತು ಗುಂಪು ಹಂತಗಳಲ್ಲಿ ಹೊರಬಿದ್ದ ಕಾರಣ, 100,000 ಯುಎಸ್ ಡಾಲರ್ ಪಡೆಯುತ್ತದೆ. ವಿಶ್ವಕಪ್ 2023ರ ಅಭಿಯಾನದ ನಂತರ ಆಂಗ್ಲ ಪಡೆಯು ಒಟ್ಟಾರೆಯಾಗಿ 220,000 ಯುಎಸ್ ಡಾಲರ್ ಮೊತ್ತ ಪಡೆಯಲಿದೆ.
ಪ್ರಸಕ್ತ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅವರ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ಇಂಗ್ಲೆಂಡ್ ಹಾಲಿ ಚಾಂಪಿಯನ್ ಆಗಿ ಪಂದ್ಯಾವಳಿಗೆ ಪ್ರವೇಶಿಸಿತು. 2022ರ ಟಿ20 ವಿಶ್ವಕಪ್ ಗೆದ್ದಿದ್ದ ಜೋಸ್ ಬಟ್ಲರ್ ನಾಯಕತ್ವದ ತಂಡದ ಬಗ್ಗೆ ಎಲ್ಲರೂ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದರು. ಆದರೆ, ಒತ್ತಡವನ್ನು ನಿಭಾಯಿಸಲು ಆಂಗ್ಲ ತಂಡಕ್ಕೆ ಸಾಧ್ಯವಾಗಲಿಲ್ಲ.

ಈ ಪಂದ್ಯಾವಳಿಯಲ್ಲಿ ಒಂಬತ್ತು ಪಂದ್ಯಗಳನ್ನು ಆಡಿದ ಇಂಗ್ಲೆಂಡ್ ತಂಡ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಯಿತು ಮತ್ತು ಉಳಿದ ಆರು ಪಂದ್ಯಗಳಲ್ಲಿ ಸೋಲು ಅನುಭವಿಸಿತು.
ಒಟ್ಟಾರೆ ಗುಂಪು ಹಂತದಲ್ಲಿ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಒಂದು ಪಂದ್ಯ ಬಾಕಿಯಿದ್ದು, ಹಾಲಿ ಚಾಂಪಿಯನ್ಸ್ ಒಂಬತ್ತು ಪಂದ್ಯಗಳಲ್ಲಿ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿ ಕುಳಿತಿದ್ದಾರೆ.
ಮತ್ತೊಂದೆಡೆ, ನೆರೆಯ ಪಾಕಿಸ್ತಾನ ತಂಡವು ಕೊನೆಯವರೆಗೂ ಸೆಮಿಫೈನಲ್ ಆಸೆ ಜೀವಂತವಾಗಿದೆ ಎಂಬ ಭರವಸೆ ಇತ್ತು. ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಲು ಮತ್ತು ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಪಾಕಿಸ್ತಾನ ತಂಡ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಭಾರಿ ಅಂತರದಿಂದ ಸೋಲಿಸಬೇಕಾಗಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ.
ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನವು ಆಡಿದ ಒಂಬತ್ತು ಪಂದ್ಯಗಳಲ್ಲಿ ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ತನ್ನ ವಿಶ್ವಕಪ್ ಅಭಿಯಾನ ಮುಗಿಸಿತು. ಪಾಕಿಸ್ತಾನ ತಂಡವು ಕೇವಲ ನಾಲ್ಕು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು ಮತ್ತು ಉಳಿದ ಐದು ಪಂದ್ಯಗಳಲ್ಲಿ ಸೋತಿತು.
2023ರ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ನೀರಸ ಪ್ರದರ್ಶನಗಳೊಂದಿಗೆ, ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ತಮ್ಮ ಮುಂಬರುವ ಸರಣಿಗಳ ಮೇಲೆ ತಮ್ಮ ಗಮನವನ್ನು ಬದಲಾಯಿಸುತ್ತವೆ ಮತ್ತು ಉತ್ತಮವಾಗಿ ಮಾಡಲು ಪ್ರಯತ್ನಿಸುತ್ತವೆ.