ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಹೊರಬಿದ್ದ ಭಾರತಕ್ಕೆ ಸಿಗುವ ಬಹುಮಾನದ ಮೊತ್ತವೆಷ್ಟು?

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 2022ರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಫೈನಲ್ ತಲುಪಿದ್ದು, ಭಾನುವಾರ, ನವೆಂಬರ್ 13ರಂದು ಮೆಲ್ಬೋರ್ನ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿವೆ.
ಇನ್ನು ಗುರುವಾರ, ನವೆಂಬರ್ 10ರಂದು ಅಡಿಲೇಡ್ ಓವಲ್‌ನಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡದ ವಿರುದ್ಧ 10 ವಿಕೆಟ್‌ಗಳ ಅವಮಾನಕರ ಸೋಲು ಕಂಡಿತು. ಇದು ಭಾರತದ ಐಸಿಸಿ ಟ್ರೋಫಿ ಗೆಲ್ಲುವ ಬಹುವರ್ಷಗಳ ಕನಸಿಗೆ ತಣ್ಣೀರೆರಚಿತು.
ಈ ಬಾರಿ ಟಿ20 ವಿಶ್ವಕಪ್ ಪ್ರಶಸ್ತಿ ಗೆಲ್ಲಲೇಬೇಕೆಂದು ಆಸೀಸ್‌ಗೆ ತೆರಳಿದ್ದ ಭಾರತ ತಂಡ ಮತ್ತೊಮ್ಮೆ ನಿರಾಸೆ ಮೂಡಿಸಿತು. ಸೆಮಿಫೈನಲ್ ಪಂದ್ಯದಲ್ಲಿ ಸೋತ ನಂತರ ನಾಯಕ ರೋಹಿತ್ ಶರ್ಮಾ ಅತೀವ ಭಾವುಕರಾಗಿದ್ದರು ಮತ್ತು ಡಗೌಟ್‌ನಲ್ಲಿ ಕುಳಿತು ಕಣ್ಣೀರು ಹಾಕಿದರು.

ಭಾರತ ತಂಡಕ್ಕೆ ನಗದು ಬಹುಮಾನದ ಮೊತ್ತ ಸಿಗಲಿದೆ
ರೋಹಿತ್ ಶರ್ಮಾ ತಮ್ಮ ನಾಯಕತ್ವದಲ್ಲಿ ಐಸಿಸಿ ಪ್ರಶಸ್ತಿಯನ್ನು ಗೆಲ್ಲಬಯಸಿದ್ದರು ಅದು ಈ ವರ್ಷ ಈಡೇರಿಲ್ಲ. ಆದರೂ, ಮುಂದಿನ ವರ್ಷ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ನಡೆಯುವುದರಿಂದ ರೋಹಿತ್ ಶರ್ಮಾ ನಾಯಕನಾಗಿ ವಿಶ್ವಕಪ್ ಗೆಲ್ಲುವ ಆಸೆ ಹೊಂದಿದ್ದಾರೆ.
ಇದೇ ವೇಳೆ 2022ರ ಟಿ20 ವಿಶ್ವಕಪ್‌ನಲ್ಲಿ ಸೋತ ಭಾರತ ತಂಡವು ಪ್ರಶಸ್ತಿಯೊಂದಿಗೆ ಹಿಂದಿರುಗುವುದಿಲ್ಲ, ಆದರೆ ಬಹುಮಾನದ ಮೊತ್ತದೊಂದಿಗೆ ವಾಪಸ್ಸಾಗುತ್ತಾರೆ. ಸೆಮಿಫೈನಲ್‌ನಲ್ಲಿ ಸೋತ ಭಾರತ ತಂಡಕ್ಕೆ ನಗದು ಬಹುಮಾನದ ಮೊತ್ತ ಸಿಗಲಿದ್ದು, ಭಾಗವಹಿಸುವ ಎಲ್ಲಾ ತಂಡಗಳಿಗೆ ಐಸಿಸಿ ಬಹುಮಾನದ ಹಣವನ್ನು ನೀಡುತ್ತಿದೆ.

ಟಿ20 ವಿಶ್ವಕಪ್ ಬಹುಮಾನ ಮೊತ್ತದ ವಿವರ ಇಲ್ಲಿದೆ
ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯುವ ಐಸಿಸಿ ಪುರುಷರ ಟಿ20 ವಿಶ್ವಕಪ್ 2022 ಟೂರ್ನಿಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಬಹುಮಾನದ ಮೊತ್ತವನ್ನು ಸೆಪ್ಟೆಂಬರ್‌ನಲ್ಲಿಯೇ ಪ್ರಕಟಿಸಿತ್ತು. ಈ ಐಸಿಸಿ ಟೂರ್ನಿಯಲ್ಲಿ ಒಟ್ಟು 5,60,000 ಯುಎಸ್ ಡಾಲರ್ ಬಹುಮಾನವನ್ನು ನೀಡಲಾಗುತ್ತದೆ, ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 4,51,06,964 ರೂ.ಗಳು.
ಟಿ20 ವಿಶ್ವಕಪ್ 2022ರ ವಿಜೇತ ತಂಡವು 1.6 ಮಿಲಿಯನ್ ಡಾಲರ್ (13,06,21,440 ರೂ.) ಮೊತ್ತವನ್ನು ಗೆಲ್ಲಲಿದೆ. ಪಂದ್ಯಾವಳಿಯ ಫೈನಲ್ ಪಂದ್ಯವನ್ನು ನವೆಂಬರ್ 13ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನಲ್ಲಿ ಆಡಲಾಗುತ್ತದೆ. ಇನ್ನು ವಿಶ್ವಕಪ್‌ನ ರನ್ನರ್ ಅಪ್ ತಂಡಕ್ಕೆ 800,000 ಯುಎಸ್ ಡಾಲರ್ (6,53,10,720 ರೂ.) ನೀಡಲಾಗುತ್ತದೆ.

ಸೆಮಿಫೈನಲ್‌ನಲ್ಲಿ ಸೋತ ಭಾರತಕ್ಕೆ ಸಿಗುವ ಮೊತ್ತ 4.5 ಕೋಟಿ ರೂ.
ಇನ್ನು ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೋತ ಎರಡು ತಂಡಗಳು ತಲಾ 400,000 ಡಾಲರ್ (3,26,55,360 ರೂ.) ಪಡೆಯುತ್ತವೆ. ಸೂಪರ್ 12 ಹಂತದಲ್ಲಿ ಪಂದ್ಯಾವಳಿಯಿಂದ ಹೊರಗುಳಿಯುವ ಎಂಟು ತಂಡಗಳು ತಲಾ 70,000 ಡಾಲರ್ (57,14,688 ರೂ.) ಪಡೆಯುತ್ತವೆ.
ಸೆಮಿಫೈನಲ್ ತಲುಪಿದ್ದ ಭಾರತಕ್ಕೆ 400,000 ಯುಎಸ್ ಡಾಲರ್ ಸಿಕ್ಕಿದೆ. ಅಂದರೆ 3.22 ಕೋಟಿ ರೂಪಾಯಿಗಳು. ಹೆಚ್ಚುವರಿಯಾಗಿ ಸೂಪರ್ 12 ಹಂತದಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದ ಭಾರತಕ್ಕೆ 1.28 ಕೋಟಿ ರೂ. ಸಿಗಲಿದೆ.
ಅಂದರೆ, ಭಾರತ ತನ್ನ ಟಿ20 ವಿಶ್ವಕಪ್ ಅಭಿಯಾನದಿಂದ ಒಟ್ಟು 4.5 ಕೋಟಿ ರೂಪಾಯಿಯೊಂದಿಗೆ ಹಿಂದಿರುಗುತ್ತಿದೆ. ಆದರೆ ಭಾರತ ಇದೀಗ ಟಿ20 ವಿಶ್ವಕಪ್ ಗೆಲ್ಲಬೇಕೆಂದರೆ ಇನ್ನೂ 2 ವರ್ಷಗಳ ಕಾಲ ಕಾಯಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications