ವಿಂಡೀಸ್ ವಿರುದ್ಧದ ಎರಡನೆಯ ಟೆಸ್ಟ್‌ನಲ್ಲೂ ಮಯಾಂಕ್‌ಗೆ ಆಡುವ ಅವಕಾಶ ಇಲ್ಲ
ಹೈದರಾಬಾದ್, ಅಕ್ಟೋಬರ್ 11: ದೀರ್ಘಕಾಲದ ಕಾಯುವಿಕೆ ಬಳಿಕ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ಕನಸು ಕಟ್ಟಿಕೊಂಡಿದ್ದ ಕರ್ನಾಟಕದ ಆಟಗಾರ ಮಯಾಂಕ್ ಅಗರವಾಲ್‌ಗೆ ಆ ಕನಸು ನನಸಾಗುವ ಅದೃಷ್ಟ ಇದ್ದಂತಿಲ್ಲ.
ಹೈದರಾಬಾದ್‌ನಲ್ಲಿ ಶುಕ್ರವಾರದಿಂದ ಆರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೆಯ ಟೆಸ್ಟ್‌ನಲ್ಲಿಯೂ ಅಂತಿಮ ಹನ್ನೊಂದರ ಬಳಗದಲ್ಲಿ ಮಯಾಂಕ್‌ಗೆ ಸ್ಥಾನ ನೀಡಿಲ್ಲ.
ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರಿಂದ ಎರಡನೆಯ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಬೇರೆ ಆಟಗಾರರಿಗೆ ವಿಶ್ರಾಂತಿ ನೀಡಲಾಗುತ್ತದೆ. ಮಯಾಂಕ್ ಜತೆಗೆ ಹೈದರಾಬಾದ್‌ನ ಬೌಲರ್ ಮೊಹಮದ್ ಸಿರಾಜ್ ಅವರಿಗೆ ಕೂಡ ಟೆಸ್ಟ್ ಪಾದಾರ್ಪಣೆಯ ಅವಕಾಶ ನೀಡಲಾಗುತ್ತದೆ ಎಂದೇ ಭಾವಿಸಲಾಗಿತ್ತು.
ಆದರೆ, ಟೆಸ್ಟ್ ಕ್ಯಾಪ್ ಧರಿಸುವ ಈ ಇಬ್ಬರ ಉತ್ಸಾಹಕ್ಕೆ ತಂಡದ ಆಡಳಿತ ಮತ್ತೆ ತಣ್ಣೀರೆರಚಿದೆ. ಎರಡನೆಯ ಟೆಸ್ಟ್‌ನಲ್ಲಿಯೂ ಮಯಾಂಕ್ ಮತ್ತು ಸಿರಾಜ್ ಬೆಂಚ್ ಕಾಯುವುದು ಅನಿವಾರ್ಯವಾಗಿದೆ. ರಾಜ್‌ಕೋಟ್ ಟೆಸ್ಟ್‌ನಲ್ಲಿ ಆಡಿದ ತಂಡದೊಂದಿಗೇ ಮುಂದುವರಿಯಲು ತಂಡ ನಿರ್ಧರಿಸಿದೆ.

ಅವಕಾಶ ಏಕಿಲ್ಲ?
ತಂಡವು ಮುಂದೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಬೇಕಿರುವುದರಿಂದ ಅನುಭವಿ ಆಟಗಾರರು ಐದು ದಿನದ ಪಂದ್ಯಗಳನ್ನು ಹೆಚ್ಚು ಆಡುವ ಅಭ್ಯಾಸ ನಡೆಸಬೇಕಿದೆ. ಹೀಗಾಗಿ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಅವರಂತಹ ಆಟಗಾರರಿಗೆ ವಿಶ್ರಾಂತಿ ನೀಡುತ್ತಿಲ್ಲ.
ಮಯಾಂಕ್ ಆರಂಭಿಕ ಆಟಗಾರರಾಗಿರುವುದರಿಂದ ಅವರಿಗೆ ಆ ಸ್ಥಾನ ಖಾಲಿ ಇಲ್ಲ. ಮೊದಲ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಪೃಥ್ವಿ ಶಾಗೆ ಅವಕಾಶ ನೀಡಲೇಬೇಕು. ಇನ್ನೊಂದು ಆರಂಭಿಕ ಸ್ಥಾನಕ್ಕೆ ರಾಹುಲ್ ತ್ಯಾಗ ಮಾಡಬೇಕಾಗುತ್ತದೆ. ಇಬ್ಬರು ಹೊಸಬರೊಂದಿಗೆ ಇನ್ನಿಂಗ್ಸ್ ಆರಂಭಿಸುವ ಸಾಹಸಕ್ಕೆ ಕೊಹ್ಲಿ ಮುಂದಾಗಿಲ್ಲ. ಅಲ್ಲದೆ, ಆಸ್ಟ್ರೇಲಿಯಾ ಪ್ರವಾಸದ ದೃಷ್ಟಿಯಿಂದ ರಾಹುಲ್ ಅಭ್ಯಾಸ ನಡೆಸುವುದು ಅನಿವಾರ್ಯ.

ವಿಹಾರಿಗೂ ಇಲ್ಲ ಸ್ಥಾನ
ಇಂಗ್ಲೆಂಡ್ ವಿರುದ್ಧ ಆಡಿದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕ್ಲಿಷ್ಟಕರ ಪಿಚ್‌ನಲ್ಲಿ ದಿಟ್ಟ ಪ್ರದರ್ಶನ ನೀಡಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹನುಮ ವಿಹಾರಿ ಕೂಡ ಅವಕಾಶ ವಂಚಿತರಾಗಿದ್ದಾರೆ. ತವರು ನೆಲದಲ್ಲಿ ವಿಹಾರಿಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆಯಿತ್ತು. ಆದರೆ, ಅದಕ್ಕಾಗಿ ಹನುಮ ವಿಹಾರಿ ಮತ್ತೆ ಕಾಯಬೇಕಾಗಿದೆ.

ರಹಾನೆಗೆ ಸತತ ಅವಕಾಶ
ಉಪ ನಾಯಕ ಅಜಿಂಕ್ಯ ರಹಾನೆ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿದ್ದಾರೆ. ಪ್ರಸಕ್ತ ವರ್ಷ ಅವರ ಬ್ಯಾಟ್‌ನಿಂದ ಒಂದೂ ಶತಕ ಬಂದಿಲ್ಲ. ಕಳೆದ ವರ್ಷ ಶ್ರೀಲಂಕಾದ ವಿರುದ್ಧ ಶತಕ ಬಾರಿಸಿದ್ದೇ ಕೊನೆ. ಇಂಗ್ಲೆಂಡ್‌ನ ವೇಗದ ಪಿಚ್‌ನಲ್ಲಿ ಒಂದೆರಡು ಇನ್ನಿಂಗ್ಸ್ ಬಿಟ್ಟರೆ ಅವರಿಂದ ಪ್ರತಿರೋಧದ ಪ್ರದರ್ಶನ ಕಂಡುಬಂದಿರಲಿಲ್ಲ. ಬ್ಯಾಟಿಂಗ್ ಲಯ ಕಂಡುಕೊಳ್ಳಲು ಹೆಣಗಾಡುತ್ತಿರುವ ರಹಾನೆ ಮಿಂಚುವ ಅಗತ್ಯವಿದೆ.
ಕಳೆದ ಬಾರಿ ಭಾರತವು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ವಿರಾಟ್ ಕೊಹ್ಲಿ ಬಳಿಕ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ್ದ ರಹಾನೆ, ಅಲ್ಲಿನ ಪಿಚ್‌ಗಳಲ್ಲಿ ಉತ್ತಮ ಆಟ ಆಡಿದ್ದರು. ಈ ಬಾರಿಯ ಪ್ರವಾಸದಲ್ಲಿ ಕೂಡ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ. ಅದಕ್ಕೆ ಅವರು ಫಾರ್ಮ್ ಕಂಡುಕೊಳ್ಳುವುದು ಅಗತ್ಯ.
ಆಯ್ಕೆ ಮಾಡಿದ್ದು ಏಕೆ?
ಅವಕಾಶ ನೀಡದಿದ್ದ ಮೇಲೆ ಮಯಾಂಕ್ ಅವರನ್ನು ಆಯ್ಕೆ ಮಾಡಿದ್ದಾದರೂ ಏಕೆ ಎಂದು ಕ್ರಿಕೆಟ್ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಪ್ರತಿಭಾವಂತ ಆಟಗಾರನನ್ನು ಹೀಗೆ ವ್ಯರ್ಥ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಕೆ.ಎಲ್. ರಾಹುಲ್ ಅವರನ್ನು ಕೈಬಿಟ್ಟು ಮಯಾಂಕ್‌ಗೆ ಅವಕಾಶ ನೀಡಬೇಕಿತ್ತು ಎನ್ನುವುದು ಅನೇಕರ ಅಭಿಪ್ರಾಯ.
ಆಡುವ ಹನ್ನೆರಡರ ಬಳಗ
ಪಂದ್ಯ ಆರಂಭವಾಗುವ ಒಂದು ದಿನದ ಮೊದಲೇ ಬಿಸಿಸಿಐ ಎಕ್ಸ್‌ಟ್ರಾ ಪ್ಲೇಯರ್ ಒಳಗೊಂಡಂತೆ ಹನ್ನೆರಡು ಆಟಗಾರರ ತಂಡವನ್ನು ಪ್ರಕಟಿಸಿದೆ. ಶುಕ್ರವಾರದ ಪಂದ್ಯದಲ್ಲಿ ಆಡಲಿರುವ ತಂಡ ಹೀಗಿದೆ.
ಲೋಕೇಶ್ ರಾಹುಲ್, ಪೃಥ್ವಿ ಶಾ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಬ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಶಾರ್ದೂಲ್ ಠಾಕೂರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications