ಐಪಿಎಲ್ 2020: ಪರ್ಪಲ್‌ಕ್ಯಾಪ್‌ಗಿಂತ ಟ್ರೋಫಿ ಮುಖ್ಯ ಎಂದ ಜಸ್ಪ್ರೀತ್ ಬೂಮ್ರಾ

ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್ಪ್ರೀತ್ ಬೂಮ್ರಾ ಈ ಬಾರಿಯ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನವನ್ನು ನೀಡುತ್ತಿದ್ದಾರೆ. ಮೊದಲನೇ ಕ್ವಾಲಿಫೈಯರ್‌ನಲ್ಲಿ ಬೂಮ್ರಾ 4 ವಿಕೆಟ್ ಕಿತ್ತು ಡೆಲ್ಲಿ ಕ್ಯಾಪಿಟಲ್ಸ್‌ನ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾದರು. ಈ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಆದರೆ ಜಸ್ಪ್ರಿತ್ ಬೂಮ್ರಾ ಪಾಲಿಗೆ ತಲೆ ಮೇಲಿನ ಟೋಪಿಯ ಬಣ್ಣಕ್ಕಿಂತ ಟ್ರೋಫಿ ಗೆಲ್ಲುವುದು ಮುಖ್ಯ ಎನಿಸಿದೆ. ಈ ಬಗ್ಗೆ ಸ್ವತಃ ಬೂಮ್ರಾ ಪ್ರತಿಕ್ರಿಯಿಸಿದ್ದು ಮುಂಬೈ ಇಂಡಿಯನ್ಸ್ ಪೈನಲ್ ಪಂದ್ಯದಲ್ಲಿ ಗೆದ್ದು ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರುವುದನ್ನು ನೋಡಲು ಬಯಸುತ್ತಿದ್ದೇನೆ ಎಂದು ಹೇಳಿದ್ದಾರೆ.
"ನಾನು ವಿಕೆಟ್ ಪಡೆಯದೆಯೂ ಗೆಲುವು ಸಾಧಿಸುವುದನ್ನು ನಾನು ಬಯಸುತ್ತೇನೆ. ನಾನು ಪಡೆಯುವ ವಿಕೆಟ್‌ಗಳತ್ತ ಗಮನಹರಿಸಲಾರೆ. ನನ್ನ ಪಾಲಿಗೆ ಜವಾಬ್ಧಾರಿಯನ್ನು ನೀಡಲಾಗಿದೆ. ಅದನ್ನು ಅಂಗಳದಲ್ಲಿ ಈಡೇರಿಸುವುದು ನನ್ನ ಕರ್ತವ್ಯ. ನಾನು ಅದನ್ನು ಪ್ರತಿಯೊಂದು ಎಸೆತದಲ್ಲೂ ಸಂಪೂರ್ಣವಾಗಿ ನೀಡಲು ಬಯಸುತ್ತೇನೆ" ಎಂದಿದ್ದಾರೆ ಜಸ್ಪ್ರೀತ್ ಬೂಮ್ರಾ.
ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ ವಿಕೆಟ್‌ಅನ್ನು ಆರಂಭದಲ್ಲೇ ಯಾರ್ಕರ್ ಎಸೆಯುವ ಮೂಲಕ ಪಡೆದಿದ್ದರು. ಈ ಬಗ್ಗೆಯೂ ಬೂಮ್ರಾ ಮಾತನಾಡಿದ್ದಾರೆ. "ಆರಂಭದಲ್ಲಿ ಯಾರ್ಕರ್ ಎಸೆಯುವುದು ಅತಿ ಮುಖ್ಯ ಎನಿಸಿತು. ಅದಕ್ಕಾಗಿ ನಾನು ಯಾರ್ಕರ್ ಎಸೆಯಲು ತೀರ್ಮಾನಿಸಿದೆ. ಆದರೆ ಆ ಎಸೆತದಲ್ಲಿ ಆ ರೀತಿ ಫಲಿತಾಂಶ ಬಂದಿದ್ದು ಒಳ್ಳೆಯ ಅನುಭವ ನೀಡಿತು. ಇಬ್ನಿ ಬೀಳುತ್ತಿರುವ ಸಂದರ್ಭದಲ್ಲಿ ಶೀಗ್ರವಾಗಿ ವಿಕೆಟ್ ಪಡೆಯುವುದು ತುಂಬಾ ಮುಖ್ಯವಾಗಿರುತ್ತದೆ" ಎಂದು ಬೂಮ್ರಾ ಪ್ರತಿಕ್ರಿಯಿಸಿದ್ದಾರೆ.
ಸಾಮಾನ್ಯವಾಗಿ ನಾನು ಅಂತಿಮ ಫಲಿತಾಂಶದ ಕಡೆಗೆ ಗಮನ ನೀಡಲು ಹೋಗುವುದಿಲ್ಲ. ಯಾವಾಗ ನಾನು ಅಂತಿಮ ಫಲಿತಾಂಶದಲ್ಲಿ ಗಮನ ನೀಡುತ್ತೇನೋ ಆಗ ಅದು ಕೆಟ್ಟ ಪರಿಣಾಮವನ್ನು ಬೀರಿರುತ್ತದೆ" ಎಂದು ಬೂಮ್ರಾ ಹೇಳಿದ್ದಾರೆ. ಟೂರ್ನಿಯಲ್ಲಿ ಬೂಮ್ರಾ ಸದ್ಯ 27 ವಿಕೆಟ್ ಪಡೆದುಕೊಂಡಿದ್ದಾರೆ. 25 ವಿಕೆಟ್ ಪಡೆದಿರುವ ರಬಡಾ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications