4 ಪಂದ್ಯಗಳಲ್ಲಿ 362 ರನ್ ಚಚ್ಚಿ ಅಬ್ಬರಿಸಿದ ಬೇಬಿ ಎಬಿಡಿಗೆ ಐಪಿಎಲ್‌ನಲ್ಲಿ ಈ ತಂಡದ ಪರ ಆಡುವಾಸೆ

ಎಬಿ ಡಿವಿಲಿಯರ್ಸ್, ಕ್ರಿಕೆಟ್ ಜಗತ್ತಿನಲ್ಲಿ ಮಿಸ್ಟರ್ 360 ಎಂದೇ ಖ್ಯಾತಿಯನ್ನು ಪಡೆದಿರುವ ಆಟಗಾರ. ಎಬಿ ಡಿವಿಲಿಯರ್ಸ್ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದರೆಂದರೆ ಎದುರಾಳಿ ಬೌಲರ್‌ಗಳ ಎದೆಯಲ್ಲಿ ನಡುಕ ಶುರುವಾಗುತ್ತಿತ್ತು. ಅದರಲ್ಲಿಯೂ ಚುಟುಕು ಕ್ರಿಕೆಟ್ ಪಂದ್ಯಗಳಲ್ಲಿ ಎಬಿ ಡಿವಿಲಿಯರ್ಸ್ ಸ್ಫೋಟಕ ಆಟಕ್ಕೆ ಮನಸೋಲದವರೇ ಇಲ್ಲ. ಹೀಗೆ ತನ್ನ ಹೊಡಿ ಬಡಿ ಆಟದಿಂದ ವಿಶ್ವದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿರುವ ಎಬಿ ಡಿ ವಿಲಿಯರ್ಸ್ ಭಾರತದಲ್ಲಿಯೂ ಕೂಡ ಸಿಕ್ಕಾಪಟ್ಟೆ ಫೇಮಸ್. ಟೀಮ್ ಇಂಡಿಯಾ ಆಟಗಾರರ ರೀತಿಯೇ ಭಾರತದಲ್ಲಿ ಕ್ರೇಜ್ ಮತ್ತು ಅಭಿಮಾನಿ ಬಳಗವನ್ನು ಹೊಂದಿರುವ ಎಬಿ ಡಿವಿಲಿಯರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರಿಂದ ಕರ್ನಾಟಕದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ನೆಚ್ಚಿನ ಆಟಗಾರನಾಗಿರುವ ಎಬಿಡಿ ವಿಲಿಯರ್ಸ್ ಅವರ ರೀತಿಯೇ ಇದೀಗ ಮತ್ತೋರ್ವ ಆಟಗಾರ ಕಾಣಿಸಿಕೊಂಡಿದ್ದು, ಬ್ಯಾಟಿಂಗ್ ವೈಖರಿ ಮತ್ತು ರನ್ ಗಳಿಸುವ ವೇಗ ಎಲ್ಲವೂ ಕೂಡ ಎಬಿಡಿವಿಲಿಯರ್ಸ್ ಅವರ ರೀತಿಯೇ ಇದೆ.
ಹೌದು, ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ವೈಖರಿಯನ್ನು ಹೋಲುವ ಈ ಕ್ರಿಕೆಟಿಗ ಕೂಡ ದಕ್ಷಿಣ ಆಫ್ರಿಕಾ ತಂಡದ ಆಟಗಾರನಾಗಿದ್ದು ಕೆರಿಬಿಯನ್ನರ ನಾಡಿನಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನದಿಂದ ವಿಶ್ವ ಕ್ರಿಕೆಟ್ ಅಭಿಮಾನಿಗಳ ಗಮನವನ್ನು ತನ್ನತ್ತ ಸೆಳೆದಿದ್ದಾನೆ. ಹೀಗೆ ಕ್ರಿಕೆಟ್ ಜಗತ್ತಿನಲ್ಲಿ ಸಖತ್ ಸದ್ದು ಮಾಡುತ್ತಿರುವ ಈ ಆಟಗಾರನ ಹೆಸರು ಡಿವಾಲ್ಡ್ ಬ್ರೆವಿಸ್. ಈತ ತನ್ನ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ಅಂಡರ್ 19 ತಂಡವನ್ನು ಪ್ಲೇ ಆಫ್ ಸೆಮಿಫೈನಲ್ಸ್ ಸುತ್ತಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ.
ಇನ್ನು ಈ ಬಾರಿಯ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 4 ಪಂದ್ಯಗಳನ್ನಾಡಿರುವ ಡಿವಾಲ್ಡ್ ಬ್ರೆವಿಸ್ 362 ರನ್ ಬಾರಿಸಿ ಅಬ್ಬರಿಸಿದ್ದು ಲೀಗ್ ಹಂತದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು. ಡಿವಾಲ್ಡ್ ಬ್ರೆವಿಸ್ ಸಿಡಿಸಿರುವ ಈ 362 ರನ್‌ಗಳ ಪೈಕಿ 1 ಅಮೋಘ ಶತಕ ಕೂಡ ಇದೆ. ಇನ್ನು ಡಿವಾಲ್ಡ್ ಬ್ರೆವಿಸ್ ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿದ್ದು ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯ ಕುರಿತಾಗಿ ಮಾತನಾಡಿ ತಮ್ಮ ನೆಚ್ಚಿನ ಆಟಗಾರರು ಯಾರು ಮತ್ತು ತನಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಯಾವ ತಂಡದ ಪರ ಕಣಕ್ಕಿಳಿಯುವ ಆಸೆ ಇದೆ ಎಂಬುದನ್ನು ಹೇಳಿಕೊಂಡಿದ್ದಾರೆ. ಈ ಕುರಿತಾದ ವಿವರ ಈ ಕೆಳಕಂಡಂತಿದೆ.

ಐಪಿಎಲ್ ಎಂದರೆ ನನಗಿಷ್ಟ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದರೆ ಬಲು ಇಷ್ಟ
ಐಸಿಸಿ ಬಿಡುಗಡೆ ಮಾಡಿರುವ ಆಟಗಾರರ ಸಂದರ್ಶನದ ವಿಡಿಯೋದಲ್ಲಿ ಮಾತನಾಡಿರುವ ಡಿವಾಲ್ಡ್ ಬ್ರೆವಿಸ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕುರಿತು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಐಪಿಎಲ್ ಎಂದರೆ ತನಗೆ ಇಷ್ಟ ಎಂದು ಹೇಳಿಕೊಂಡಿದ್ದಾರೆ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೆಂದರೆ ಬಲು ಇಷ್ಟ ಎಂಬುದನ್ನು ಕೂಡ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿಯುವ ಆಸೆಯನ್ನು ಡಿವಾಲ್ಡ್ ಬ್ರೆವಿಸ್ ವ್ಯಕ್ತಪಡಿಸಿದ್ದಾರೆ.

ಎಬಿಡಿ ಮತ್ತು ಕೊಹ್ಲಿ ನನ್ನ ಫೇವರಿಟ್ ಎಂದ ಡಿವಾಲ್ಡ್ ಬ್ರೆವಿಸ್
ಇನ್ನೂ ಮುಂದುವರೆದು ಮಾತನಾಡಿರುವ ಡಿವಾಲ್ಡ್ ಬ್ರೆವಿಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನಗೆ ಇಷ್ಟವಾಗಲು ಕಾರಣ ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಎಂದಿದ್ದಾರೆ. ಹೌದು, ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ತನ್ನ ನೆಚ್ಚಿನ ಆಟಗಾರರು ಎಂದು ಹೇಳಿಕೊಂಡಿರುವ ಡಿವಾಲ್ಡ್ ಬ್ರೆವಿಸ್ ಈ ಇಬ್ಬರೂ ಆಟಗಾರರು ಪ್ರತಿನಿಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಬೇಕು ಎಂಬುದು ತನ್ನ ಆಸೆ ಎಂದಿದ್ದಾರೆ.

ಹಿಂದೆ ಸಾಕಷ್ಟು ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜರ್ಸಿ ತೊಟ್ಟಿದ್ದ ಬೇಬಿ ಎಬಿಡಿ
ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಬೇಬಿ ಎಬಿಡಿ ಎಂದೇ ಖ್ಯಾತಿಯನ್ನು ಪಡೆದಿರುವ ಡಿವಾಲ್ಡ್ ಬ್ರೆವಿಸ್ ಈ ಹಿಂದೆ ಸಾಕಷ್ಟು ಬಾರಿ ಸಾಮಾಜಿಕ ಜಾಲತಾಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೆರ್ಸಿ ತೊಟ್ಟಿರುವ ಚಿತ್ರಗಳನ್ನು ಹಂಚಿಕೊಂಡು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications