ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಐಸಿಸಿ ಕಡೆಗೂ ಬಿಡುಗಡೆಗೊಳಿಸಿದೆ. ಜೂನ್ 27ರಂದು ಮಂಗಳವಾರ ವಿಶ್ವಕಪ್ ಟೂರ್ನಿಯ ಆರಂಭಕ್ಕೆ 100 ದಿನಗಳು ಬಾಕಿಯಿರುವಾಗಿ ಐಸಿಸಿ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಆರಂಭದಲ್ಲಿ ಭಾರತದಲ್ಲಿ ಈ ವಿಶ್ವಕಪ್ ಆಯೋಜನೆಯಾಗುವ ಕಾರಣ ಟೂರ್ನಿಯಲ್ಲಿ ಭಾಗವಹಿಸುವ ಬಗ್ಗೆ ಗೊಂದಲ ಮೂಡಿಸಿದ್ದ ಪಾಕಿಸ್ತಾನ ನಂತರ ಟೂರ್ನಿಯಲ್ಲಿ ತಾನು ಆಡಬೇಕಿದ್ದ ಕೆಲ ತಾಣಗಳನ್ನು ಬದಲಾಯಿಸಬೇಕೆಂದು ನೆಪಗಳನ್ನು ಹೇಳಿದ ಕಾರಣ ಐಸಿಸಿ ವೇಳಾಪಟ್ಟಿಯನ್ನು ತಡವಾಗಿ ಬಿಡುಗಡೆಗೊಳಿಸಿತು.
ವಿಶ್ವಕಪ್‌ನಲ್ಲಿ ಆಡಬೇಕಾದ ತಾಣಗಳಲ್ಲಿ ಬದಲಾವಣೆ ಮಾಡಬೇಕೆಂದು ಪಾಕಿಸ್ತಾನ ಮಾಡಿದ ಮನವಿಯನ್ನು ಪುರಸ್ಕರಿಸದ ಐಸಿಸಿ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿತು. ಆದರೆ ಪಾಕಿಸ್ಥಾನ ಮಾಡಿದ ಒಂದು ಮನವಿಯನ್ನು ಐಸಿಸಿ ಒಪ್ಪಿಕೊಂಡಿದೆ. ವಿಶ್ವಕಪ್ ಆರಂಭಕ್ಕೂ ಮುನ್ನ ಆಯೋಜಿಸಿರುವ ಅಭ್ಯಾಸ ಪಂದ್ಯಗಳ ವಿಚಾರವಾಗಿ ಐಸಿಸಿ ಪಾಕಿಸ್ತಾನದ ಮನವಿಗೆ ಸಮ್ಮತಿ ಸೂಚಿಸಿದೆ.

ವಿಶ್ವಕಪ್‌ಗೂ ಮುನ್ನ ಅಭ್ಯಾಸ ಪಂದ್ಯಳನ್ನು ಆಯೋಜಿಸುವಾಗ ಏಷ್ಯಾದ ತಂಡಗಳನ್ನು ಹೊರತುಪಡಿಸಿ ಪಂದ್ಯಗಳನ್ನು ಏರ್ಪಡಿಸುವಂತೆ ಪಾಕಿಸ್ತಾನ ಮನವಿ ಮಾಡಿತ್ತು. ಪಾಕಿಸ್ಥಾನದ ಈ ಮನವಿಯನ್ನು ಐಸಿಸಿ ಪುರಸ್ಕರಿಸಿದೆ. ಇದಕ್ಕೂ ಮುನ್ನ ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನ ಒಂದು ಅಭ್ಯಾಸ ಪಂದ್ಯವನ್ನು ಆಡಲಿದೆ ಎನ್ನಲಾಗಿತ್ತು. ಆದರೆ ಇದನ್ನು ಬದಲಾಯಿಸಿದೆ. ಇದೀಗ ಪಾಕಿಸ್ತಾನ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳನ್ನು ಎದುರಿಸಲಿದೆ.
ವಿಶ್ವಕಪ್ ಟೂರ್ನಿಗೂ ಮುನ್ನ ಏಷ್ಯಾಕಪ್ ಆಯೋಜನೆಯಾಗಲಿದ್ದು ಅಲ್ಲಿ ಏಷ್ಯಾದ ಎಲ್ಲಾ ತಂಡಗಳು ಮುಖಾಮುಖಿಯಾಗಲಿದೆ. ಈ ಕಾರಣದಿಂದಾಗಿ ವಿಶ್ವಕಪ್‌ಗೂ ಮುನ್ನ ಮತ್ತೊಮ್ಮೆ ಏಷ್ಯಾದ ತಂಡಗಳ ವಿರುದ್ಧ ಅಭ್ಯಾಸ ಪಂದ್ಯಗಳನ್ನು ಆಯೋಜನೆ ಮಾಡುವುದು ಬೇಡ ಎಂಬುದು ಪಾಕಿಸ್ತಾನದ ಮನವಿಯಾಗಿತ್ತು. ಹೀಗಾಗಿ ಇದಕ್ಕೆ ಐಸಿಸಿ ಒಪ್ಪಿಗೆ ಸೂಚಿಸಿದ್ದು ಬದಲಾವಣೆ ಮಾಡಿಕೊಂಡಿದೆ.
ಇನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಯೋಜನೆಯಾಗಿರುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಹಾಗೂ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ಅಫ್ಘಾನಿಸ್ಥಾನ ವಿರುದ್ಧದ ಪಂದ್ಯವನ್ನು ಅದಲು ಬದಲು ಮಾಡುವಂತೆ ಪಾಕಿಸ್ಥಾನ ಮನವಿ ಮಾಡಿತ್ತು. ಚೆನ್ನೈನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಅಫ್ಘಾನಿಸ್ತಾನದ ಬಲಿಷ್ಠ ಸ್ಪಿನ್ ಬೌಲರ್‌ಗಳ ಎದುರು ಪಾಕ್ ತಮಡ ಸಂಕಷ್ಟವನ್ನು ಅನುಭವಿಸುವ ನಿರೀಕ್ಷೆಯ ಕಾರಣದಿಂದಾಗಿ ಈ ಮನವಿಯನ್ನು ಪಾಕಿಸ್ತಾನ ಮಾಡಿದೆ ಎನ್ನಲಾಗಿದೆ. ಆದರೆ ಪಾಕಿಸ್ತಾನದ ಈ ಮನವಿಯಲ್ಲಿ ಸಕಾರಣವಿಲ್ಲದ ಕಾರಣ ಅದನ್ನು ಐಸಿಸಿ ತಿರಸ್ಕರಿಸಿದೆ.
ಇದಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಹ್ಮದಾಬಾದ್‌ನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧದ ಪಂದ್ಯಕ್ಕೆ ಅಕ್ಷೇಪಿಸಿತ್ತು. ಅಹ್ಮದಾಬಾದ್ ಬದಲಿಗೆ ಬೇರೆ ಸ್ಥಳದಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಆಯೋಜಿಸುವಂತೆ ಮನವಿ ಮಾಡಿತ್ತು. ಆದರೆ ಈ ಮನವಿಯನ್ನು ಕೂಡ ಬಿಸಿಸಿಐ ಹಾಗೂ ಐಸಿಸಿ ತಿರಸ್ಕರಿಸಿದೆ.
ಒಟ್ಟು 10 ತಾಣಗಳಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿ ನಡೆಯಲಿದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಕೂಡ ವಿಶ್ವಕಪ್ ಆಯೋಜನೆ ಮಾಡುವ 10 ತಂಡಗಳ ಪೈಕಿ ಒಂದಾಗಿದೆ. ಎಲ್ಲಾ ಹತ್ತು ತಾಣಗಳ ಪೈಕಿ ಹೈದರಾಬಾದ್‌ನಲ್ಲಿ ಮೂರ ಪಂದ್ಯಗಳು ನಡೆಯಲಿದ್ದು ಉಳಿದ 9 ತಾಣಗಳು ಕೂಡ ತಲಾ ಐದು ಪಂದ್ಯಗಳಿಗೆ ಆತಿಥ್ಯವನ್ನು ವಹಿಸಲಿದೆ. ಹೀಗಾಗಿ ಬೆಂಗಳೂರಿನಲ್ಲಿಯೂ ಈ ಬಾರಿಯ ವಿಶ್ವಕಪ್‌ನ ಐದು ಪಂದ್ಯಗಳು ಆಯೋಜನೆಯಾಗಲಿದ್ದು ಭಾರತದ ಒಂದು ಪಂದ್ಯ ಕೂಡ ಇದೆ.