Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2023ರ ಏಕದಿನ ವಿಶ್ವಕಪ್‌ಗೆ ಸಚಿನ್ ತೆಂಡೂಲ್ಕರ್ ಜಾಗತಿಕ ರಾಯಭಾರಿ

ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 2023ರ ಏಕದಿನ ವಿಶ್ವಕಪ್‌ನ ಜಾಗತಿಕ ರಾಯಭಾರಿಯಾಗಿ ನೇಮಕ ಮಾಡಿದೆ. ವಿಶ್ವ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರಲ್ಲಿ ಅಗ್ರಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ ಅನೇಕ ದಾಖಲೆಗಳನ್ನು ಹೊಂದಿದ್ದಾರೆ. ಅತಿ ಹೆಚ್ಚು ರನ್, 100 ಶತಕ ಸೇರಿದಂತೆ ಬೃಹತ್ ದಾಖಲೆಗಳನ್ನು ಹೊಂದಿರುವ ಸಚಿನ್ ತೆಂಡೂಲ್ಕರ್ ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯಕ್ಕೂ ಮುನ್ನ ಟ್ರೋಫಿಯ ಜೊತೆಗೆ ಅಂಗಳಕ್ಕಿಳಿಯಲಿದ್ದು ಈ ಮೂಲಕ ಟೂರ್ನಿಯ ಉದ್ಘಾಟನೆಯನ್ನು ಘೋಷಿಸಲಿದ್ದಾರೆ.

ಇನ್ನು ಈ ಬಾರಿಯ ವಿಶ್ವಕಪ್ ಉದ್ಘಾಟನೆಗೂ ಮುನ್ನ ಮಾತನಾಡಿರುವ ಸಚಿನ್ ತೆಂಡೂಲ್ಕರ್ 2011ರಲ್ಲಿ ವಿಶ್ವಕಪ್ ಟ್ರೋಫಿಯನ್ನು ಗೆದ್ದಿರುವುದು ತನ್ನ ಕನಸು ನನಸಾದ ಸಂದರ್ಭ ಎಂದಿದ್ದಾರೆ. "1987ರಲ್ಲಿ ಬಾಲ್ ಬಾಯ್ ಆಗಿದ್ದಲ್ಲಿಂದ ಹಿಡಿದು ಆರು ಆವೃತ್ತಿಗಳಲ್ಲಿ ದೇಶವನ್ನು ಪ್ರತಿನಿಧಿಸುವವರೆಗೆ ವಿಶ್ವಕಪ್‌ ಟೂರ್ನಿ ಎಂದರೆ ಯಾವಾಗಲೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. 2011 ರಲ್ಲಿ ವಿಶ್ವಕಪ್ ಗೆದ್ದಿರುವುದು ನನ್ನ ಕ್ರಿಕೆಟ್ ಜೀವನದ ಅತ್ಯಂತ ಹೆಮ್ಮೆಯ ಕ್ಷಣ" ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

Sachin Tendulkar

"ಇಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಹಲವು ವಿಶೇಷ ತಂಡಗಳು ಮತ್ತು ಆಟಗಾರರು ಕಠಿಣವಾಗಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ನಾನು ಈ ಅದ್ಭುತ ಪಂದ್ಯಾವಳಿಯನ್ನು ಉತ್ಸುಕತೆಯಿಂದ ಎದುರು ನೋಡುತ್ತಿದ್ದೇನೆ" ಎಂದು ಸಚಿನ್ ಈ ಸಂದರ್ಭದಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿಯ ಬಗ್ಗೆ ತಮ್ಮ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

ಅತಿ ದೊಡ್ಡ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಐಸಿಸಿ ಹಲವು ರಾಯಭಾರಿಗಳನ್ನು ಕೂಡ ಹೆಸರಿಸಿದೆ. ವೆಸ್ಟ್ ಇಂಡೀಸ್ ದಿಗ್ಗಜ ವಿವಿಯನ್ ರಿಚರ್ಡ್ಸ್, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್, ಇಂಗ್ಲೆಂಡ್ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್, ಆಸ್ಟ್ರೇಲಿಯಾದ ಆರೋನ್ ಫಿಂಚ್, ಶ್ರೀಲಂಕಾದ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್, ನ್ಯೂಜಿಲೆಂಡ್ ರಾಸ್ ಟೇಲರ್, ಭಾರತದ ಸುರೇಶ್ ರೈನಾ ಮತ್ತು ಮಾಜಿ ನಾಯಕಿ ಮಿಥಾಲಿ ರಾಜ್ ಮತ್ತು ಪಾಕಿಸ್ತಾನದ ಆಲ್‌ರೌಂಡರ್ ಮೊಹಮ್ಮದ್ ಹಫೀಜ್ ಈ ಬಾರಿಯ ವಿಶ್ವಕಪ್ ಟೂರ್ನಿಯ ರಾಯಭಾರಿಗಳಾಗಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ "ವಿಶ್ವಕಪ್ ಟೂರ್ನಿಯಂಥಾ ದೊಡ್ಡ ಸ್ಪರ್ಧೆ ಯುವ ಹುಡುಗ ಹುಡುಗಿಯರ ಮನಸ್ಸಿನಲ್ಲಿ ದೊಡ್ಡ ಪರಿಣಾಮವನ್ನುಂಟು ಮಾಡುತ್ತದೆ. ಇಂಥಾ ಟೂರ್ನಮೆಂಟ್‌ಗಳು ಅವರನ್ನು ಈ ಕ್ರೀಡೆಗಳತ್ತ ಆಕರ್ಷಿಸುವುದರ ಜೊತೆಗೆ ಉನ್ನತ ಮಟ್ಟದಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಲು ಪ್ರೇರಣೆ ಕೂಡ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ ಸಚಿನ್ ತೆಂಡೂಲ್ಕರ್.

ಐಸಿಸಿ ವಿಶ್ವಕಪ್ ಟೂರ್ನಿ ಅಕ್ಟೋಬರ್ 5 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ರನ್ನರ್‌ಅಪ್ ನ್ಯೂಜಿಲೆಂಡ್ ತಂಡವನ್ನು ಎದುರಿಸುವ ಮೂಲಕ ಆರಂಭವಾಗಲಿದೆ. 10 ತಾಣಗಳಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿ ಆಯೋಜನೆಯಾಗಲಿದ್ದು ಒಟ್ಟು 48 ಪಂದ್ಯಗಳು ನಡೆಯಲಿದೆ. ನವೆಂಬರ್ 19 ರಂದು ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ಅಹ್ಮದಾಬಾದ್‌ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿಯೇ ಫೈನಲ್‌ ಪಂದ್ಯದ ಮೂಲಕ ಈ ಮೆಗಾ ಟೂರ್ನಮೆಂಟ್ ತೆರೆ ಕಾಣಲಿದೆ.

Story first published: Tuesday, October 3, 2023, 22:06 [IST]
Other articles published on Oct 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+