ಶಕೀಬ್ ಅಲ್ ಹಸನ್ : 2019ರ ವಿಶ್ವಕಪ್ ನ ಸರಣಿ ಪುರುಷೋತ್ತಮ?
ಭಾರತ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಎದುರಾಳಿಗಳನ್ನು ಸದೆಬಡಿಯುತ್ತ ಭರ್ಜರಿ ಓಟ ಮುಂದುವರಿಸಿರಬಹುದು. ಆದರೆ, ಈ ತಂಡಗಳಲ್ಲಿ ಯುವ ಆಟಗಾರರೇ ತುಂಬಿಕೊಂಡಿದ್ದಾರೆ. ಈ ಟೂರ್ನಿಯಲ್ಲಿ ಅತಿಹೆಚ್ಚು ಅನುಭವವಿರುವ ತಂಡ ಯಾವುದು ಗೊತ್ತೆ? ಅದು ಬಾಂಗ್ಲಾದೇಶ. ಇದರಲ್ಲಿ ಹೆಚ್ಚಿನ ಆಟಗಾರರು ನಾಲ್ಕನೇ ವಿಶ್ವಕಪ್ ಆಡುತ್ತಿದ್ದಾರೆ.
ಅಂಕಪಟ್ಟಿಯಲ್ಲಿ ಸದ್ಯಕ್ಕೆ (ಜೂನ್ 25ರಂದು) ಐದನೇ ಸ್ಥಾನದಲ್ಲಿರುವ ಬಾಂಗ್ಲಾದೇಶ ಅಚ್ಚರಿಯ ಮೇಲೆ ಅಚ್ಚರಿ ಮೂಡಿಸುತ್ತ, ಕೆಲ ದೈತ್ಯ ತಂಡಗಳನ್ನು ಸದೆಬಡಿದು, ತನ್ನ ಮೇಲೆ ಕುಳಿತಿರುವ ನಾಲ್ಕು ತಂಡಗಳ ಎದೆಬಡಿತವನ್ನೂ ಹೆಚ್ಚಿಸಿದೆ. ಆಡಿರುವ ಏಳು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು, ಮೂರರಲ್ಲಿ ಸೋತು, ಒಂದರಲ್ಲಿ ಫಲಿತಾಂಶ ಕಾಣದೆ 7 ಅಂಕಗಳನ್ನು ಗಳಿಸಿದೆ. ಸೋಮವಾರ ನಡೆದ ಪಂದ್ಯದಲ್ಲಿ ಅಫಘಾನಿಸ್ತಾನವನ್ನು 62 ರನ್ ಗಳಿಂದ ಸೋಲಿಸಿ ಎರಡು ಅಂಕ ಪಡೆದು, ಶ್ರೀಲಂಕಾವನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿದೆ.
ಬಾಂಗ್ಲಾದೇಶದ ಅತ್ಯಂತ ಹಿರಿಯ ಆಲ್ ರೌಂಡ್ ಆಟಗಾರರಾಗಿರುವ, 32 ವರ್ಷದ ಶಕೀಬ್ ಅಲ್ ಹಸನ್ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚುತ್ತಿದ್ದು, ಟೂರ್ನಾಮೆಂಟಿನ ಅತ್ಯಂತ ಮೌಲ್ಯಯುತ ಆಟಗಾರರಾಗಿ ಹೊರಹೊಮ್ಮುತ್ತಿದ್ದಾರೆ. ಈ ವಿಶ್ವಕಪ್ ನಲ್ಲಿ ಎರಡು ಭರ್ಜರಿ ಸೆಂಚುರಿ, ಮೂರು ಅರ್ಧ ಶತಕ ಬಾರಿಸಿದ್ದು, 10 ವಿಕೆಟ್ ಕೂಡ ಕಿತ್ತಿದ್ದಾರೆ. ಮೂರು ಪಂದ್ಯಗಳಲ್ಲಿ 'ಪಂದ್ಯದ ಪುರುಷೋತ್ತಮ' ಪ್ರಶಸ್ತಿಗೆ ಕೂಡ ಭಾಜನರಾಗಿದ್ದಾರೆ.

ಅಫ್ಘನ್ನರ ವಿರುದ್ಧ ವಿಶಿಷ್ಟ ದಾಖಲೆ
ಸೋಮವಾರ ಅಫಘಾನಿಸ್ತಾನದ ವಿರುದ್ಧ ಸೌಥಂಪ್ಟನ್ ನಲ್ಲಿ ನಡೆದ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ಅವರು ವಿಶಿಷ್ಟ ದಾಖಲೆಯನ್ನು ಬರೆದಿದ್ದಾರೆ. ಬ್ಯಾಟಿಂಗ್ ನಲ್ಲಿ 51 ರನ್ ಗಳಿಸಿದ್ದ ಅವರು, ಬೌಲಿಂಗ್ ನಲ್ಲಿ 5 ವಿಕೆಟ್ ಕಿತ್ತು ಪಂದ್ಯದ ಪುರುಷೋತ್ತಮರಾದರು. ಇಂಥ ದಾಖಲೆಯನ್ನು ವಿಶ್ವಕಪ್ ನಲ್ಲಿ ಘಟಾನುಘಟಿ ಆಲ್ ರೌಂಡರುಗಳೇ ದಾಖಲಿಸಿಲ್ಲ. ಬಾಂಗ್ಲಾದೇಶದ 263 ರನ್ ಬೆನ್ನತ್ತಿದ ಅಫಘಾನಿಸ್ತಾನ 200 ರನ್ ಗಳಿಗೆ ಆಲೌಟಾಗಿ 62 ರನ್ ಗಳಿಂದ ಸೋಲನ್ನಪ್ಪಿತು. ಶಕೀಬ್ ಅವರು 29 ರನ್ ನೀಡಿ 5 ವಿಕೆಟ್ ಕಬಳಿಸಿ, ಅಫಘಾನಿಸ್ತಾನದ ಬೆನ್ನೆಲುಬು ಮುರಿದಿದ್ದರು. ಇದು ಏಕದಿನ ಪಂದ್ಯದಲ್ಲಿ ಅವರ ಅತ್ಯುತ್ತಮ ಸಾಧನೆ ಕೂಡ.
ವೆಸ್ಟ್ ಇಂಡೀಸ್ ವಿರುದ್ಧದ ಭರ್ಜರಿ ಗೆಲುವಿನ ಬಳಿಕ ಶಾಕಿಬ್ ಹೇಳಿದ್ದಿದು!

ಕಪಿಲ್, ಯುವರಾಜ್ ನಂತರ ಶಕೀಬ್
ವಿಶ್ವಕಪ್ ನಲ್ಲಿ ಇಂಥ ವಿಶಿಷ್ಟ ದಾಖಲೆಯನ್ನು ಬರೆದಿದ್ದು ಭಾರತದ ಆಲ್ ರೌಂಡರ್ ಯುವರಾಜ್ ಸಿಂಗ್ ಮಾತ್ರ. 2011ರ ಸರಣಿ ಪುರುಷೋತ್ತಮರಾಗಿದ್ದ ಯುವರಾಜ್ ಸಿಂಗ್ ಅವರು ಇಂಥ ಸಾಧನೆ ಮಾಡಿದ್ದರು. ಅಲ್ಲದೆ, ಭಾರತದ ಲೆಜೆಂಡರಿ ಆಲ್ ರೌಂಡ್ ಆಟಗಾರ, 1983ರಲ್ಲಿ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಕಪಿಲ್ ದೇವ್ ಅವರ ನಂತರ ವಿಶ್ವಕಪ್ ನಲ್ಲಿ ಸೆಂಚುರಿ ಬಾರಿಸಿದ್ದಲ್ಲದೆ, ಐದು ವಿಕೆಟ್ ಪಡೆದ ಸಾಧನೆಯನ್ನೂ ಮಾಡಿದ ಮತ್ತೊಬ್ಬ ಆಟಗಾರರಾಗಿದ್ದಾರೆ ಶಕೀಬ್. 2011ರಲ್ಲಿ ಇಂಥ ಸಾಧನೆಯನ್ನು ಯುವರಾಜ್ ಮಾಡಿದ್ದರು. ವಿಶ್ವದ ಅತ್ಯುತ್ತಮ ಆಲ್ ರೌಂಡರ್ ಗಳಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೂ ಶಕೀಬ್ ಅವರು ಪಾತ್ರರಾಗಿದ್ದಾರೆ.

ಜಯಸೂರ್ಯ ದಾಖಲೆ ಮುರಿದ ಶಕೀಬ್
ಇದೆಲ್ಲದರ ಜೊತೆಗೆ ಶಕೀಬ್ ಅಲ್ ಹಸನ್ ಅವರು ಮತ್ತೊಂದು ದಾಖಲೆ ಬರೆದಿದ್ದಾರೆ. ಅಫಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ, ವಿಶ್ವಕಪ್ ನಲ್ಲಿ 1000 ರನ್ ಗಳಿಸಿದ್ದಲ್ಲದೆ, 30 ವಿಕೆಟ್ ಕಿತ್ತು ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ ಶಕೀಲ್ ಅಲ್ ಹಸನ್. ಒಟ್ಟು 27 ಪಂದ್ಯಗಳಲ್ಲಿ ಅವರು 1,016 ರನ್ ಗಳಿಸಿದ್ದು, 33 ವಿಕೆಟ್ ಗಳನ್ನು ಪಡೆದಿದ್ದಾರೆ. ಇಂಥ ದಾಖಲೆ ಬರೆದಿರುವುದು ಶ್ರೀಲಂಕಾದ ಮಾಜಿ ಆಟಗಾರ ಸತನ್ ಜಯಸೂರ್ಯ. ಶಕೀಬ್ ಅವರಂತೆಯೇ ಸನತ್ ಕೂಡ ಎಡಗೈ ಆಟಗಾರ. ಸನತ್ ಜಯಸೂರ್ಯ ಅವರು 38 ಪಂದ್ಯಗಳಲ್ಲಿ 1,165 ರನ್ ಗಳಿಸಿದ್ದು, 25 ವಿಕೆಟ್ ಪಡೆದಿದ್ದರು.
ಬಾಂಗ್ಲಾದ ಭರ್ಜರಿ ಗೆಲುವಿನ ಬಳಿಕ ಶಾಕಿಬ್ ಅಲ್ ಹಸನ್ ಹೇಳಿದ್ದಿದು!

ಬ್ಯಾಟಿಂಗ್ ಮತ್ತು ಬೌಲಿಂಗ್ ಅಗ್ರರ ಪಟ್ಟಿಯಲ್ಲಿ
ಇನ್ನೂ ಹಲವಾರು ಪಂದ್ಯಗಳು ವಿಶ್ವಕಪ್ ನಲ್ಲಿ ಬಾಕಿಯಿರುವುದರಿಂದ ಶಕೀಬ್ ಅವರು ಇನ್ನೂ ಹಲವಾರು ದಾಖಲೆಗಳನ್ನು ಧೂಳಿಪಟ ಮಾಡಿದರೂ ಅಚ್ಚರಿಯಿಲ್ಲ. ಈಗಾಗಲೆ ಅವರ ಹೆಸರು ಕೂಡ ಪಂದ್ಯದ ಪುರುಷೋತ್ತಮ ಪ್ರಶಸ್ತಿಗೆ ಕೇಳಿಬರುತ್ತಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಸಾಧಕರ ಪಟ್ಟಿಯಲ್ಲಿ, ಎರಡೂ ವಿಭಾಗದಲ್ಲಿ ಶಕೀಬ್ ಅಲ್ ಹಸನ್ ಅವರು ಮೊದಲ 10 ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಐಪಿಎಲ್ ನಲ್ಲಿ ಕೂಡ ಆಡಿದ್ದ ಅವರು, ಕೈಬೆರಳಿನ ಗಾಯದಿಂದಾಗಿ ಹೆಚ್ಚು ಅವಕಾಶ ಪಡೆದಿರಲಿಲ್ಲ. ಐಪಿಎಲ್ ನಲ್ಲಿ ವಿದೇಶಿ ಆಟಗಾರರ ನಡುವೆ ತಮ್ಮನ್ನು ಕಡೆಗಣಿಸುವಂತಿಲ್ಲ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಶಕೀಬ್ ಮಿಂಚಿಂಗ್
ಶಕೀಬ್ ಅವರನ್ನು 3ನೇ ಕ್ರಮಾಂಕಕ್ಕೆ ಭಡ್ತಿ ನೀಡಿರುವುದು ಭಾರೀ ಫಲ ನೀಡುತ್ತಿದೆ. ಶ್ರೀಲಂಕಾದ ಮಾಜಿ ಆಟಗಾರ ಚಂಡಿಕಾ ಹತುರಸಿಂಘ ಅವರು ಬಾಂಗ್ಲಾದೇಶದ ಕೋಚ್ ಆಗಿದ್ದಾಗ, ಶಕೀಬ್ ಅವರು ಕೆಳ ಕ್ರಮಾಂಕದಲ್ಲಿಯೇ ಆಡುತ್ತಿದ್ದರು. ಆದರೆ, ಹತುರಸಿಂಘ ಅವರು ಕೋಚ್ ಹುದ್ದೆಯನ್ನು ತೊರೆದ ನಂತರ ಶಕೀಬ್ ಅವರಿಗೆ ಭಡ್ತಿ ಸಿಕ್ಕಿದ್ದು, 3ನೇ ಕ್ರಮಾಂಕದಲ್ಲಿ ತಮ್ಮ ಸ್ಥಾನ ಗಟ್ಟಿಗೊಳಿಸಿಕೊಂಡಿದ್ದಾರೆ. ಮೊದಲಿಗೆ ಅವರು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. 3ನೇ ಕ್ರಮಾಂಕದಲ್ಲಿ ಆಡುತ್ತಲೇ ಅವರು ಈ ವಿಶ್ವಕಪ್ ನಲ್ಲಿ ಈಗಾಗಲೆ ಎರಡು ಶತಕ ಸಿಡಿಸಿದ್ದಾರೆ. 5ನೇ ಕ್ರಮಾಂಕಕ್ಕಿಂತ (ಶೇ.35) 3ನೇ ಕ್ರಮಾಂಕದಲ್ಲಿ ಅವರ ಬ್ಯಾಟಿಂಗ್ ಸರಾಸರಿ (ಶೇ.58) ಹೆಚ್ಚಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications