

ಡಬ್ಲಿನ್, ಜು. 3: ಚೆಂಡು ವಿರೂಪಕ್ಕೆ ಇನ್ನು 6 ಟೆಸ್ಟ್ ಅಥವಾ 12 ಏಕದಿನ ಪಂದ್ಯಗಳ ನಿಷೇಧ ಶಿಕ್ಷೆ ಸಾಧ್ಯವಿದೆ. ಕ್ರೀಡಾಂಗಣದಲ್ಲಿ ಆಟಗಾರರ ಉತ್ತಮ ವರ್ತನೆ ಕಾಣುವ ನಿಟ್ಟಿನಲ್ಲಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಚೆಂಡು ವಿರೂಪದೊಂದಿಗೆ ಅಶ್ಲೀಲತೆ ಮತ್ತು ವೈಯಕ್ತಿಕ ನಿಂದನೆಯನ್ನು ಸೇರಿಸಿದ್ದು, ಮೂರು ರೀತಿಯಲ್ಲಿ ಶಿಸ್ತು ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಲಿದೆ.
ಐರ್ಲ್ಯಾಂಡ್ ನ ಡಬ್ಲಿನ್ ನಲ್ಲಿ ನಡೆದ ವಾರ್ಷಿಕ ಸಮ್ಮೇಳನದ ವೇಳೆ ಐಸಿಸಿ ಸಮಿತಿ, ಕ್ರಿಕೆಟ್ ಮೈದಾನದಲ್ಲಿ ಆಟಗಾರರ ದುರ್ವರ್ತನೆಗೆ ಇನ್ನಷ್ಟು ಕಡಿವಾಣ ಹಾಕಲು ತೀರ್ಮಾನಿಸಿದೆ. ಈ ಮೂಲಕ ಕ್ರಿಕೆಟನ್ನು ಪಕ್ಕಾ ಜೆಂಟಲ್ ಮನ್ ಗಳ ಗೇಮನ್ನಾಗಿಸಲು ಐಸಿಸಿ ಯೋಜನೆ ಹಾಕಿಕೊಂಡಿದೆ.
ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿ ನಡೆದ ಆಸ್ಟ್ರೇಲಿಯಾ-ಸೌತಾಫ್ರಿಕಾ ಟೆಸ್ಟ್ ವೇಳೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮರಾನ್ ಬ್ಯಾನ್ ಕ್ರಾಫ್ಟ್ ಬಾಲ್ ಟ್ಯಾಂಪರಿಂಗ್ (ಚೆಂಡು ವಿರೂಪ) ಮಾಡಿ ಸಿಕ್ಕಿಬಿದ್ದಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ ಬಾಲ್ ಟ್ಯಾಂಪರಿಂಗ್ ಉಲ್ಲಂಘನೆಯನ್ನು 2 ಹಂತಗಳಿಂದ 3 ಹಂತಗಳಿಗೇರಿಸಿ ಶಿಕ್ಷೆಯನ್ನು ಇನ್ನಷ್ಟು ಬಿಗಿಗೊಳಿಸಿದೆ.
'ನಾನು ಮತ್ತು ನನ್ನ ಸಮಿತಿಯ ನಿರ್ದೇಶಕರು, ಪರೋಕ್ಷವಾಗಿ ಕ್ರಿಕೆಟ್ ಸಮಿತಿಗೆ ಬೆಂಬಲಿಸುವವರು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಸೇರಿ ಕ್ರೀಡಾವಲಯದಲ್ಲಿನ ಕ್ರೀಡಾಪಟುಗಳ, ಆಟಗಾರರ ವರ್ತನೆಯಲ್ಲಿ ಸಕಾರಾತ್ಮಕ ಬದಲಾವಣೆ ಮೂಡಿಸಲು ಯೋಚಿಸಿದ್ದೇವೆ' ಎಂದು ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ತಿಳಿಸಿದ್ದಾರೆ.