ಮಂಗಳವಾರ, ಆಗಸ್ಟ್ 1ರಂದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮುಕ್ತಾಯಗೊಂಡ 3 ಪಂದ್ಯಗಳ ಏಕದಿನ ಸರಣಿಯ ನಂತರ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ಐಸಿಸಿ ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಕುಸಿತ ಕಂಡಿದ್ದಾರೆ.
ಬುಧವಾರ, ಆಗಸ್ಟ್ 2ರಂದು ಐಸಿಸಿ ಬಿಡುಗಡೆ ಮಾಡಿದ ಏಕದಿನ ರ್‍ಯಾಂಕಿಂಗ್‌ನಲ್ಲಿ ರೋಹಿತ್ ಶರ್ಮಾ ಪುರುಷರ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಟಾಪ್ 10ರಿಂದ ಹೊರಗುಳಿಯುವ ಮೂಲಕ ಇಬ್ಬರೂ ಬ್ಯಾಟ್ಸ್‌ಮನ್‌ಗಳ ಸ್ಥಾನವು ಕುಸಿದಿದೆ.

ಏಕದಿನ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ 8ರಿಂದ 9ನೇ ಸ್ಥಾನಕ್ಕೆ ಕುಸಿದರೆ, ನಾಯಕ ರೋಹಿತ್ ಶರ್ಮಾ 11ನೇ ಸ್ಥಾನಕ್ಕೆ ಹಿಂಬಡ್ತಿ ಪಡೆದಿದ್ದಾರೆ. ಕ್ವಿಂಟನ್ ಡಿ ಕಾಕ್ ಮತ್ತು ಸ್ಟೀವನ್ ಸ್ಮಿತ್ ಅವರು ಇತ್ತೀಚೆಗೆ ಏಕದಿನ ಕ್ರಿಕೆಟ್ ಆಡದಿದ್ದರೂ ತಲಾ ಒಂದು ಸ್ಥಾನ ಏರಿಕೆ ಕಂಡಿದ್ದಾರೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಸರಣಿಯ ಕೊನೆಯ ಎರಡು ಪಂದ್ಯಗಳನ್ನು ಆಡಲಿಲ್ಲ. ಏಕೆಂದರೆ, ಭಾರತ ತಂಡವು 2023ರ ಏಕದಿನ ವಿಶ್ವಕಪ್‌ಗೆ ಸಂಭಾವ್ಯ ಯುವ ಆಟಗಾರರಿಗೆ ಅವಕಾಶ ನೀಡಲು ತಮ್ಮ ವಿಶ್ರಾಂತಿ ಪಡೆದರು.
ಬಾರ್ಬಡೋಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯದ ಕಾರಣದಿಂದ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ 2ನೇ ಏಕದಿನ ಪಂದ್ಯವನ್ನು ಸೋತಿತು. ಪ್ರವಾಸಿ ತಂಡ ಕೇವಲ 181 ರನ್‌ಗಳಿಗೆ ಅಲೌಟ್ ಆಯಿತು. ಆದರೆ ಟ್ರಿನಿಡಾಡ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಪುಟಿದೇದ್ದ ಭಾರತೀಯರು ವೆಸ್ಟ್ ಇಂಡೀಸ್ ತಂಡವನ್ನು 200 ರನ್‌ಗಳಿಂದ ಸೋಲಿಸಿ, ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡರು.
ಮಂಗಳವಾರ ನಡೆದ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಅವರ ತಂಡದ ಮ್ಯಾನೇಜ್‌ಮೆಂಟ್ ಮಾತುಕತೆ ನಡೆಸಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಆಡಿಸದೆ, ಯುವ ಆಟಗಾರರಿಗೆ ಅವಕಾಶ ನೀಡಿತು.
ಇದೇ ವೇಳೆ, ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಇಶಾನ್ ಕಿಶನ್ ಮತ್ತು ಕುಲದೀಪ್ ಯಾದವ್ ತಮ್ಮ ಅತ್ಯುತ್ತಮ ಪ್ರದರ್ಶನಕ್ಕಾಗಿ ಏಕದಿನ ಶ್ರೇಯಾಂಕದಲ್ಲಿ ಬಹುಮಾನ ಪಡೆದರು.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ, ಕುಲದೀಪ್ ಯಾದವ್ ಅವರು ಏಕದಿನ ಬೌಲರ್‌ಗಳ ಪಟ್ಟಿಯಲ್ಲಿ ಎಂಟು ಸ್ಥಾನ ಮೇಲಕ್ಕೇರಿ 14ನೇ ಸ್ಥಾನಕ್ಕೆ ತಲುಪಿದ್ದಾರೆ. ಎಲ್ಲಾ 3 ಏಕದಿನ ಪಂದ್ಯಗಳನ್ನು ಆಡಿದ ಅವರು 7 ವಿಕೆಟ್ ಪಡೆದರು.
ಇನ್ನು ಆರಂಭಿಕ ಬ್ಯಾಟರ್ ಇಶಾನ್ ಕಿಶನ್ 15 ಸ್ಥಾನಗಳ ಜಿಗಿತದೊಂದಿಗೆ ಏಕದಿನ ಬ್ಯಾಟಿಂಗ್‌ನಲ್ಲಿ 45ನೇ ಸ್ಥಾನ ತಲುಪಿದ್ದಾರೆ. ಸರಣಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿದ ಇಶಾನ್ ಕಿಶನ್ ಮೂರು ಪಂದ್ಯಗಳ ಏಕದಿನ ಸರಣಿಯ ಎಲ್ಲಾ ಪಂದ್ಯಗಳಲ್ಲಿ ಅರ್ಧ ಶತಕಗಳನ್ನು ಗಳಿಸಿದ ಭಾರತೀಯ ಆಟಗಾರರ ಪ್ರಮುಖರ ಗುಂಪಿನಲ್ಲಿ ಇಶಾನ್ ಕಿಶನ್ ಹೆಸರು ಸೇರಿತು.
ಕೃಷ್ಣಮಾಚಾರಿ ಶ್ರೀಕಾಂತ್, ದಿಲೀಪ್ ವೆಂಗ್‌ಸರ್ಕರ್, ಮೊಹಮ್ಮದ್ ಅಜರುದ್ದೀನ್, ಎಂಎಸ್ ಧೋನಿ ಮತ್ತು ಶ್ರೇಯಸ್ ಅಯ್ಯರ್ ಅವರ ಸಾಲಿಗೆ ಸೇರಿಕೊಂಡರು, ಈ ಮೈಲಿಗಲ್ಲು ಸಾಧಿಸಿದ ಆರನೇ ಭಾರತೀಯ ಆಟಗಾರನಾದರು.
ಮೂರು ಪಂದ್ಯಗಳ ಸರಣಿಯಲ್ಲಿ ಸತತ ಮೂರು ಅರ್ಧಶತಕ ಸಾಧನೆಯನ್ನು ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಪಂದ್ಯದಲ್ಲಿ ಸಾಧಿಸಿದರು. ಇಶಾನ್ ಕಿಶನ್ ಕೇವಲ 64 ಎಸೆತಗಳಲ್ಲಿ 77 ರನ್ ಗಳಿಸಿದರು. ಅವರ ಪ್ರದರ್ಶನ ಭಾರತದ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.