ಐಸಿಸಿ ಏಕದಿನ Ranking: ವೃತ್ತಿಜೀವನದ ಶ್ರೇಷ್ಠ ಸಾಧನೆ ಮೆರೆದ ಕೊಹ್ಲಿ


ನವದೆಹಲಿ, ಜುಲೈ 18: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬುಧವಾರ ಪ್ರಕಟಿಸಿರುವ ಏಕದಿನ ರ್ಯಾಂಕಿಂಗ್ ನಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ 911 ಪಾಯಿಂಟ್ ಗಳಿಸುವ ಮೂಲಕ ಅಗ್ರ ಸ್ಥಾನದೊಂದಿಗೆ ವೃತ್ತಿ ಜೀವನದ ಶ್ರೇಷ್ಠ ಸಾಧನೆ ಮೆರೆದಿದ್ದಾರೆ.
ಮಂಗಳವಾರಷ್ಟೇ (ಜುಲೈ 17) ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೊಹ್ಲಿ ಕ್ರಮವಾಗಿ 75, 45 ಮತ್ತು 71 ರನ್ ಗಳಿಸಿದ್ದರಿಂದ ಅವರಿಗೆ ಎರಡು ಅಂಕಗಳು ಲಭಿಸಿದ್ದವು. ಹೀಗಾಗಿ ಒಟ್ಟಿಗೆ ಅತ್ಯುತ್ತಮ 911 ಅಂಕವಂತೂ ಕೊಹ್ಲಿ ಪಾಲಾಗಿದೆ. 1991ರಲ್ಲಿ ಆಸ್ಟ್ರೇಲಿಯಾದ ಡೀನ್ ಜೋನ್ಸ್ ಶ್ರೇಷ್ಠ 918 ಅಂಕ ಗಳಿಸಿ ದಾಖಲೆ ಸೃಷ್ಟಿಸಿದ್ದರು. ಅದು ಬಿಟ್ಟರೆ ಕೊಹ್ಲಿ ಈಗ ಗಳಿಸಿರುವ ಅಂಕವೇ ಗರಿಷ್ಠ.
ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಅವರೂ ಅಗ್ರ 10ರೊಳಗೆ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ತೋರಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಇಂಗ್ಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಯಾದವ್ ಒಟ್ಟು 9 ವಿಕೆಟ್ ಕಬಳಿಸಿದ್ದರು. ಅದರಲ್ಲೂ ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ಒಟ್ಟು 6 ವಿಕೆಟ್ ಉರುಳಿಸಿ ಗಮನ ಸೆಳೆದಿದ್ದರು. ಹೀಗಾಗಿ ಎಂಟನೇ ಸ್ಥಾನದಿಂದ ಕುಲದೀಪ್ ಆರನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇದು ಕುಲದೀಪ್ ಅವರದ್ದೂ ಜೀವನ ಶ್ರೇಷ್ಠ ಸಾಧನೆಯೆ.
ಈಗಿನ ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಭಾರತದ ಜಸ್ ಪ್ರೀತ್ ಬುಮ್ರಾ ಅಗ್ರ ಸ್ಥಾನದಲ್ಲಿದ್ದು, ಕುಲದೀಪ್ ಯಾದವ್ ಅಗ್ರ 10ರೊಳಗೆ ಸ್ಥಾನ ಪಡೆದ ವಿಶ್ವದ 5ನೇ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನುಳಿದ ನಾಲ್ಕು ಜನ ಬೌಲರ್ ಗಳೆಂದರೆ ರಶೀದ್ ಖಾನ್ (ಈಗಿನ ರ್ಯಾಂಕಿಂಗ್ ನಲ್ಲಿ ದ್ವಿತೀಯ ಸ್ಥಾನಿ), ಇಮ್ರಾನ್ ತಾಹೀರ್ (ಏಳನೇ), ಆದಿಲ್ ರಶೀದ್ (ಎಂಟನೇ) ಮತ್ತು ಯುಜುವೇಂದ್ರ ಚಾಹಲ್ (ಹತ್ತನೇ) ಇವರು.
ಇಂಗ್ಲೆಂಡ್ ಬ್ಯಾಟ್ಸ್ಮನ್ ಜೋ ರೂಟ್ ರ್ಯಾಂಕಿಂಗ್ ನಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಬಾಬರ್ ಆಜಾಮ್ (ಪಾಕಿಸ್ತಾನ್-3ನೇ), ರೋಹಿತ್ ಶರ್ಮಾ (ಭಾರತ-4ನೇ), ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ-5ನೇ) ಮತ್ತು ರಾಸ್ ಟೇಲರ್ (ನ್ಯೂಜಿಲ್ಯಾಂಡ್-6ನೇ) ಅವರನ್ನು ಹಿಂದಿಕ್ಕಿರುವ ರೂಟ್ ಜೀವನಶ್ರೇಷ್ಠ ಎರಡನೇ ಸ್ಥಾನಕ್ಕೆ ನುಗ್ಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications