ಸುದೀರ್ಘ 128 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಕ್ರಿಕೆಟ್?: 6 ತಂಡಗಳ ಟೂರ್ನಿಗೆ ಐಸಿಸಿ ಪ್ರಸ್ತಾಪ

ವಿಶ್ವದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿರುವ ಕ್ರಿಕೆಟ್ ಒಲಿಂಪಿಕ್ಸ್‌ನಲ್ಲಿ ಇಲ್ಲ ಎಂಬ ಕೊರಗು ಕ್ರಿಕೆಟ್ ಅಭಿಮಾನಿಗಳಲ್ಲಿದೆ. ವಿಶ್ವದ ಅತಿ ದೊಡ್ಡ ಕ್ರೀಡಾಕೂಟ ಎನಿಸಿಕೊಂಡಿರುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕೂಡ ಇದ್ದರೆ ಎಷ್ಟು ಚಂದ ಎಂಬ ಭಾವನೆಗಳು ಸಹಜವಾಗಿಯೇ ಕ್ರಿಕೆಟ್ ಪ್ರೇಮಿಗಳಲ್ಲಿರುತ್ತದೆ. ಆದರೆ ಈಗ ಇದು ನಿಜವಾಗುವ ಸಾಧ್ಯತೆಗಳು ಕಂಡು ಬರುತ್ತಿದೆ. 2028ರಲ್ಲಿ ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಕೂಡ ಸೇರ್ಪಡೆಯಾಗುವ ಬಗ್ಗೆ ಕೆಲ ಬೆಳವಣಿಗೆಗಳು ನಡೆಯುತ್ತಿದೆ.
ಟೆಲಿಗ್ರಾಫ್ ವರದಿಯ ಪ್ರಕಾರ 2028ರ ಒಲಿಂಪಿಕ್ಸ್‌ನಲ್ಲಿ ಐಸಿಸಿ 6 ತಂಡಗಳ ಪುರುಷರ ಮತ್ತು ಮಹಿಳೆಯರ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲು ಪ್ರಸ್ತಾಪಿಸಿದೆ ಎನ್ನಲಾಗಿದೆ. ಇದರಿಂದಾಗಿ 128 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಕ್ರಿಕೆಟ್ ಮರಳುವ ಸಾಧ್ಯತೆಗಳು ಇದೆ. ಇದಕ್ಕೂ ಮುನ್ನ 1900ರಲ್ಲಿ ಪ್ಯಾರಿಸ್‌ನಲ್ಲಿ ನಡೆದ 2ನೇ ಒಲಿಂಪಿಕ್ಸ್‌ನಲ್ಲಿ ಕೊನೆಯ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಆಡಲಾಗಿತ್ತು

ಐಸಿಸಿ ಪ್ರಸ್ತಾಪದಲ್ಲಿ ಏನಿದೆ?
2028ರ ಬೇಸಿಗೆ ಒಲಿಂಪಿಲ್ಸ್ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿದ್ದು ಈ ಟೂರ್ನಿಯಲ್ಲಿ ಪುರುಷರ ಹಾಗೂ ಮಹಿಳೆಯರ ತಲಾ ಆರು ತಂಡಗಳ ಟಿ20 ಪಂದ್ಯಾವಳಿಗೆ ಐಸಿಸಿ ಪ್ರಸ್ತಾಪವನ್ನಿಟ್ಟಿದೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ. ಆರು ತಂಡಗಳು ತಲಾ ಮೂರು ತಂಡಗಳ ಎರಡು ಗುಂಪುಗಳಲ್ಲಿ ಮೊದಲಿಗೆ ಸೆಣೆಸಾಡಲಿದ್ದು ಎರಡು ಗುಂಪುಗಳ ತಲಾ ಎರಡು ಅಗ್ರ ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿದೆ. ಇಲ್ಲಿ ಗೆದ್ದ ಎರಡು ತಂಡಗಳು ಫೈನಲ್‌ಗೆ ಪ್ರವೇಶಿಸಿ ಚಿನ್ನದ ಪದಕಕ್ಕಾಗಿ ಸೆಣೆಸಾಟ ನಡೆಸಲಿದೆ. ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ ಎರಡು ತಂಡಗಳ ಮಧ್ಯೆ ಕಂಚಿನ ಪದಕ್ಕಾಗಿ ಹೋರಾಟ ನಡೆಯಲಿದೆ ಎಂದು ಈ ಪ್ರಸ್ತಾಪದಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

ಅಂತಿಮ ಪಟ್ಟಿಯಲ್ಲಿದೆ ಕ್ರಿಕೆಟ್
ಇನ್ನು ಈ ಟೂರ್ನಿಯಲ್ಲಿ ಕ್ರೀಡಾಪಟುಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಭಾಗವಹಿಸುವ ಪ್ರತಿ ತಂಡಗಳು ಕೇವಲ 14 ಆಟಗಾರರ ತಂಡವನ್ನು ಮಾತ್ರವೇ ಹೆಸರಿಸಬೇಕಾಗುತ್ತದೆ. ಪಂದ್ಯಾವಳಿಯ ಆಯೋಜನೆಯ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಪುರುಷರ ಮತ್ತು ಮಹಿಳೆಯರ ಸ್ಪರ್ಧೆಗಳನ್ನು ಏಕಕಾಲದಲ್ಲಿ ನಡೆಸುವ ಬದಲಾಗಿ ಒಂದಾದ ನಂತರ ಮತ್ತೊಂದರಂತೆ ನಡೆಸಲಾಗುತ್ತದೆ ಎನ್ನಲಾಗಿದೆ.
2028ರ ಒಲಿಂಪಿಕ್ಸ್‌ಗೆ ಈಗಾಗಲೇ 28 ಕ್ರೀಡೆಗಳನ್ನು ಅಧಿಕೃತಗೊಳಿಸಲಾಗಿದೆ. ಬೇಸ್‌ಬಾಲ್, ಕರಾಟೆ, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್, ಬ್ರೇಕ್ ಡ್ಯಾನ್ಸ್, ಕಿಕ್‌ಬಾಕ್ಸಿಂಗ್, ಸ್ಕ್ವಾಷ್ ಮತ್ತು ಮೋಟಾರ್‌ಸ್ಪೋರ್ಟ್‌ಗಳ ಮತ್ತು ಕ್ರಿಕೆಟ್ ಈ ಕ್ರೀಡಾಕೂಟಕ್ಕೆ ಸೇರ್ಪಡೆಗಾಗಿ ಅಂತಿಮ ಪಟ್ಟಿಯಲ್ಲಿರುವ ಉಳಿದ ಒಂಬತ್ತು ಕ್ರೀಡೆಗಳಾಗಿದೆ.

ಮುಂದಿನ ವರ್ಷ ಅಂತಿಮ ನಿರ್ಧಾರ ಸಾಧ್ಯತೆ
2023ರ ಸೆಪ್ಟೆಂಬರ್ ತಿಂಗಳಿನಲ್ಲಿ ಮುಂಬೈನಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಸಭೆ ಮುಂಬೈನಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಒಲಿಂಪಿಕ್ಸ್‌ಗೆ ಕ್ರಿಕೆಟ್‌ನ ಸೇರ್ಪಡೆಯ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಇನ್ನು ಇದಕ್ಕೂ ಮುನ್ನ 1900ನೇ ಇಸವಿಯಲ್ಲಿ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕೊನೆಯ ಬಾರಿಗೆ ಕ್ರಿಕೆಟ್ ಆಡಿಸಿದ್ದ ಸಂದರ್ಭದಲ್ಲಿ ಕೇವಲ ಎರಡು ತಂಡಗಳು ಮಾತ್ರವೇ ಸ್ಪರ್ಧಿಸಿದ್ದವು. ಫ್ರಾನ್ಸ್ ಹಾಗೂ ಗ್ರೇಟ್ ಬ್ರಿಟನ್ ತಂಡಗಳು ಭಾಗವಹಿಸಿದ್ದು ಇದರಲ್ಲಿ ಗ್ರೇಟ್ ಬ್ರಿಟನ್ ಗೆದ್ದು ಚಿನ್ನದ ಪದಕ ಗೆದ್ದುಕೊಂಡಿದ್ದರೆ ಫ್ರಾನ್ಸ್ ಬೆಳ್ಳಿ ಪದಕ ಗೆದ್ದುಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications