ICC T20 Rankings: ಸ್ಮೃತಿ ಮಂಧಾನ ಸ್ಥಾನ ಅಬಾಧಿತ; ಭಾರೀ ಏರಿಕೆ ಕಂಡ ಜೆಮಿಮಾ, ರಿಚಾ ಘೋಷ್!

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ಸೆಮಿಫೈನಲ್ ತಲುಪಿದ್ದು, ಪ್ರಶಸ್ತಿ ಹಂತಕ್ಕಾಗಿ ಯಾರ ಜೊತೆ ಸೆಣಸಾಡಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಇನ್ನು ಭಾರತ ತಂಡದ ಆಟಗಾರ್ತಿಯರ ವೈಯಕ್ತಿಕ ಪ್ರದರ್ಶನದ ಕಾರಣದಿಂದ ಮಂಗಳವಾರ, ಫೆಬ್ರವರಿ 21ರಂದು ಬಿಡುಗಡೆಯಾದ ನೂತನ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಭಾರತೀಯ ಮಹಿಳೆಯರು ಉತ್ತಮ ಲಾಭ ಗಳಿಸಿದ್ದಾರೆ.
ಚುಟುಕು ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ ಮಹಿಳಾ ತಂಡದ ವಿಕೆಟ್‌ಕೀಪರ್-ಬ್ಯಾಟರ್ ರಿಚಾ ಘೋಷ್ 16 ಸ್ಥಾನಗಳ ಅದ್ಭುತ ಜಿಗಿತದೊಂದಿಗೆ ಐಸಿಸಿ ಮಹಿಳಾ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ 20ರೊಳಗೆ ಸ್ಥಾನ ಪಡೆದಿದ್ದಾರೆ.

ಮೂರನೇ ಸ್ಥಾನವನ್ನು ಉಳಿಸಿಕೊಂಡ ಸ್ಮೃತಿ ಮಂಧಾನ
ಇನ್ನು ಭಾರತದ ಆರಂಭಿಕ ಆಟಗಾರ್ತಿ ಹಾಗೂ ಉಪನಾಯಕಿ ಸ್ಮೃತಿ ಮಂಧಾನ ಐಸಿಸಿ ಮಹಿಳಾ ಟಿ20 ರ್‍ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇದೇ ವೇಳೆ ಮತ್ತೊಬ್ಬ ಬ್ಯಾಟರ್ ಜೆಮಿಮಾ ರೋಡ್ರಿಗಸ್ ಒಂದು ಸ್ಥಾನ ಮೇಲೇರಿ 12ನೇ ಸ್ಥಾನಕ್ಕೆ ತಲುಪಿದ್ದಾರೆ.
ಸ್ಮೃತಿ ಮಂಧಾನ ಅವರು ಸೋಮವಾರ ಐರ್ಲೆಂಡ್ ವಿರುದ್ಧ 56 ಎಸೆತಗಳಲ್ಲಿ 87 ರನ್ ಬಾರಿಸಿ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ 2023ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ನೆರವಾದರು.

ವೃತ್ತಿಜೀವನದ ಉತ್ತಮ ಶ್ರೇಯಾಂಕ ಪಡೆದ ರಿಚಾ ಘೋಷ್
ಇನ್ನು ಭಾರತದ ಸ್ಫೋಟಕ ಬ್ಯಾಟರ್ ರಿಚಾ ಘೋಷ್ ಅದ್ಭುತ ಫಾರ್ಮ್‌ನಲ್ಲಿದ್ದು, ಕಳೆದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಮೊದಲ ಎಸೆತದಲ್ಲಿ ಔಟಾಗುವ ಮುನ್ನ ಮೂರು ಪಂದ್ಯಗಳಲ್ಲಿ ಔಟಾಗದೇ 31, 44 ಮತ್ತು 47 ರನ್‌ಗಳೊಂದಿಗೆ ಕೊಡುಗೆ ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದ ನಂತರ 58 ರೇಟಿಂಗ್ ಪಾಯಿಂಟ್‌ಗಳನ್ನು ಗಳಿಸಿದ ರಿಚಾ ಘೋಷ್ ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ ವೃತ್ತಿಜೀವನದ ಉತ್ತಮ ಶ್ರೇಯಾಂಕ ಪಡೆದರು. ಆದರೆ, ಐರ್ಲೆಂಡ್ ವಿರುದ್ಧ ಸೊನ್ನೆಗೆ ಔಟಾಗಿದ್ದು, ರಿಚಾ ಘೋಷ್ ಅಂಕಗಳನ್ನು ಕಳೆದುಕೊಳ್ಳಲು ಕಾರಣವಾಯಿತು. ಇದೀಗ 572 ಅಂಕಗಳೊಂದಿಗೆ ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ 20ನೇ ಸ್ಥಾನದಲ್ಲಿದ್ದಾರೆ.

ಬೌಲರ್‌ಗಳ ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಸೋಫಿ ಎಕ್ಲೆಸ್ಟೋನ್
ಈ ಮಧ್ಯೆ, ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಎಂಟು ವಿಕೆಟ್‌ಗಳೊಂದಿಗೆ ಜಂಟಿ ಅಗ್ರಸ್ಥಾನದಲ್ಲಿರುವ ನ್ಯೂಜಿಲೆಂಡ್ ವೇಗಿ ಲಿಯಾ ತಹುಹು 701 ಅಂಕಗಳೊಂದಿಗೆ ವೃತ್ತಿಜೀವನದ ಅತ್ಯುತ್ತಮ ರೇಟಿಂಗ್‌ನೊಂದಿಗೆ ಏಳನೇ ಸ್ಥಾನಕ್ಕೆ ತಲುಪಿದ್ದಾರೆ.
ಇನ್ನು ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೂರು ಸ್ಥಾನ ಏರಿಕೆಯೊಂದಿಗೆ 16ನೇ ಸ್ಥಾನಕ್ಕೆ ಜಿಗಿತ ಕಂಡಿದ್ದರೆ, ಆಲ್-ರೌಂಡರ್‌ಗಳ ಪಟ್ಟಿಯಲ್ಲಿ ಒಂದು ಸ್ಥಾನ ಏರಿಕೆ ಕಂಡು ಜಂಟಿ ಮೂರನೇ ಸ್ಥಾನ ತಲುಪಿದ್ದಾರೆ. ಎರಡರಲ್ಲೂ ವೃತ್ತಿಜೀವನದ ಉತ್ತಮ ಅಂಕಗಳನ್ನು ದಾಖಲಿಸಿದ್ದಾರೆ.
ಇದೇ ವೇಳೆ, ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ ನಿದಾ ದಾರ್ ಐದನೇ ಸ್ಥಾನಕ್ಕೆ ಏರಿಕೆ ಕಂಡಿದ್ದರೆ, ಆಸ್ಟ್ರೇಲಿಯಾದ ವೇಗಿ ಡಾರ್ಸಿ ಬ್ರೌನ್ ಅವರು 10 ಸ್ಥಾನಗಳ ಜಿಗಿತದ ಮೂಲಕ ವೃತ್ತಿಜೀವನದ ಅದ್ಭುತ ಎಂಟನೇ ಸ್ಥಾನವನ್ನು ತಲುಪಿದರು. ಬೌಲರ್‌ಗಳ ಪಟ್ಟಿಯಲ್ಲಿ 784 ಅಂಕಗಳೊಂದಿಗೆ ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications