ICC T20 Rankings: ಪಾಕ್ ವಿರುದ್ಧ ಅದ್ಭುತ ಪ್ರದರ್ಶನ; ಶ್ರೇಯಾಂಕದಲ್ಲಿ ಭಾರೀ ಏರಿಕೆ ಕಂಡ ರೋಡ್ರಿಗಸ್, ರಿಚಾ

ಇತ್ತೀಚಿಗೆ 2023ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಪಂದ್ಯ ವಿಜೇತ ಪ್ರದರ್ಶನ ನೀಡಿದ್ದ ಭಾರತದ ಜೆಮಿಮಾ ರೋಡ್ರಿಗಸ್ ಮತ್ತು ರಿಚಾ ಘೋಷ್ ಟಿ20 ಶ್ರೇಯಾಂಕದಲ್ಲಿ ಭಾರೀ ಏರಿಕೆ ಕಂಡಿದ್ದಾರೆ.
ಮಂಗಳವಾರ, ಫೆಬ್ರವರಿ 14ರಂದು ಬಿಡುಗಡೆಯಾದ ಐಸಿಸಿ ಮಹಿಳಾ ಟಿ20 ಮಹಿಳಾ ಆಟಗಾರ್ತಿಯರ ಶ್ರೇಯಾಂಕದಲ್ಲಿ ಜೆಮಿಮಾ ರೋಡ್ರಿಗಸ್ 11ನೇ ಸ್ಥಾನಕ್ಕೆ ಏರಿದ್ದರೆ, ರಿಚಾ ಘೋಷ್ 36ನೇ ಸ್ಥಾನ ತಲುಪಿದ್ದಾರೆ.
ಮಹಿಳಾ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ರೋಚಕ ಗೆಲುವು ಸಾಧಿಸುವಲ್ಲಿ ಇವರಿಬ್ಬರು ಪಾತ್ರ ಪ್ರಮುಖವಾಗಿತ್ತು. ಜೆಮಿಮಾ ರೋಡ್ರಿಗಸ್ ಅಜೇಯ 52 ರನ್ ಗಳಿಸಿದ ನಂತರ 13ನೇ ಸ್ಥಾನದಿಂದ 11ನೇ ಸ್ಥಾನಕ್ಕೆ ಏರಿಕೆ ಕಂಡಿದ್ದರೆ, ರಿಚಾ ಘೋಷ್ ಅಜೇಯ 31 ರನ್ ಬಾರಿಸಿದ ನಂತರ 42ನೇ ಸ್ಥಾನದಿಂದ 36ನೇ ಸ್ಥಾನಕ್ಕೆ ಜಿಗಿತ ಕಂಡರು.
ಬೆರಳಿನ ಗಾಯದಿಂದಾಗಿ ಮೊದಲ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನ ಟಿ20 ಶ್ರೇಯಾಂಕದಲ್ಲಿ 3ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಇದೇ ವೇಳೆ, ಭಾರತದ ಇನ್ನೊಬ್ಬ ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ 10ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ 55 ರನ್ ಗಳಿಸಿದ ಆಸ್ಟ್ರೇಲಿಯಾದ ಅಲಿಸ್ಸಾ ಹೀಲಿ
ಇನ್ನು ಮಹಿಳಾ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 55 ರನ್ ಗಳಿಸಿದ ಆಸ್ಟ್ರೇಲಿಯಾದ ಅಲಿಸ್ಸಾ ಹೀಲಿ ಎರಡು ಸ್ಥಾನಗಳ ಏರಿಕೆ ಕಂಡು ಏಳನೇ ಸ್ಥಾನಕ್ಕೆ ಜಿಗಿದಿದ್ದಾರೆ. ಶ್ರೀಲಂಕಾ ತಂಡದ ನಾಯಕಿ ಚಾಮರಿ ಅಥಾಪತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸ್ಮರಣೀಯ ಗೆಲುವಿನಲ್ಲಿ 68 ರನ್ ಗಳಿಸಿ ಪಂದ್ಯಾವಳಿಯಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದು, ಒಂದು ಸ್ಥಾನ ಮೇಲೇರಿ 9ನೇ ಸ್ಥಾನ ತಲುಪಿದ್ದಾರೆ.
ಇದೆ ವೇಳೆ ವೆಸ್ಟ್ ಇಂಡೀಸ್ ಮಹಿಳಾ ನಾಯಕ ಹೇಲಿ ಮ್ಯಾಥ್ಯೂಸ್ 4 ಸ್ಥಾನ ಮೇಲೇರಿ 18ನೇ ಸ್ಥಾನದಲ್ಲಿದ್ದರೆ, ಐರ್ಲೆಂಡ್‌ನ ಗೇಬಿ ಲೆವಿಸ್ 2 ಸ್ಥಾನ ಮೇಲೇರಿ 22ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ 4 ಸ್ಥಾನ ಮೇಲೇರಿ 25ನೇ ಸ್ಥಾನಕ್ಕೆ ಏರಿಕೆಯಾಗಿದ್ದಾರೆ.

ಭಾರತ ವಿರುದ್ಧ ಬಿಸ್ಮಾ ಮರೂಫ್ ಅಜೇಯ 68 ರನ್
ಭಾರತ ವಿರುದ್ಧ ಪಾಕಿಸ್ತಾನ ತಂಡದ ನಾಯಕಿ ಬಿಸ್ಮಾ ಮರೂಫ್ ಅವರು ಅಜೇಯ 68 ರನ್ ಗಳಿಸುವ ಮೂಲಕ ಮೂರು ಸ್ಥಾನಗಳ ಏರಿಕೆ ಕಂಡು 30ನೇ ಸ್ಥಾನಕ್ಕೆ ತಲುಪಿದ್ದಾರೆ.
ಮಹಿಳಾ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ಸ್ಪಿನ್ನರ್‌ಗಳಾದ ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್ ಮತ್ತು ದಕ್ಷಿಣ ಆಫ್ರಿಕಾದ ನಾನ್‌ಕುಲುಲೆಕೊ ಮ್ಲಾಬಾ ಮೊದಲ ಎರಡು ಸ್ಥಾನಗಳಲ್ಲಿ ಮುಂದುವರೆದಿದ್ದಾರೆ.

ಆಶ್ಲೀಗ್ ಗಾರ್ಡ್ನರ್ ನ್ಯೂಜಿಲೆಂಡ್ ವಿರುದ್ಧ 12 ರನ್‌ಗಳಿಗೆ 5 ವಿಕೆಟ್
ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಆರು ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿರುವ ಸೋಫಿ ಎಕ್ಲೆಸ್ಟೋನ್, 763ರಿಂದ 776 ರೇಟಿಂಗ್ ಪಾಯಿಂಟ್‌ಗಳಿಗೆ ಹೆಚ್ಚಿಸಿಕೊಂಡಿದ್ದಾರೆ. ನಾನ್‌ಕುಲುಲೆಕೊ ಮ್ಲಾಬಾ 17 ರೇಟಿಂಗ್ ಪಾಯಿಂಟ್‌ಗಳನ್ನು ಗಳಿಸಿ 770 ರೇಟಿಂಗ್ ಪಾಯಿಂಟ್‌ಗಳನ್ನು ತಲುಪಿದ್ದಾರೆ.
ಇನ್ನು ನ್ಯೂಜಿಲೆಂಡ್ ವಿರುದ್ಧ 12 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆದಿದ್ದ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್‌ರೌಂಡರ್ ಆಶ್ಲೀಗ್ ಗಾರ್ಡ್ನರ್ "ಪಂದ್ಯಶ್ರೇಷ್ಠ' ಪ್ರಶಸ್ತಿಯನ್ನು ಗೆದ್ದ ನಂತರ ಏಳು ಸ್ಥಾನಗಳ ಜಿಗಿದು ಆರನೇ ಸ್ಥಾನಕ್ಕೆ ತಲುಪಿದ್ದಾರೆ.

ಇನೋಕಾ ರಣವೀರ 11 ಸ್ಥಾನ ಮೇಲೇರಿ 10ನೇ ಸ್ಥಾನ
ಇಂಗ್ಲೆಂಡ್ ಲೆಗ್ ಸ್ಪಿನ್ನರ್ ಸಾರಾ ಗ್ಲೆನ್ ಬೌಲಿಂಗ್ ಶ್ರೇಯಾಂಕದಲ್ಲಿ ಮೂರನೇ ಸ್ಥಾನಕ್ಕೆ ಏರಿದ್ದು, ಶ್ರೀಲಂಕಾದ ಮಾಜಿ ನಾಯಕಿ ಇನೋಕಾ ರಣವೀರ 11 ಸ್ಥಾನ ಮೇಲೇರಿ 10ನೇ ಸ್ಥಾನಕ್ಕೆ ತಲುಪಿದ್ದಾರೆ.
ಫ್ರಾನ್ ಜೋನ್ಸ್, ಅಲಾನಾ ಕಿಂಗ್, ಅಮೆಲಿಯಾ ಕೆರ್, ಡಾರ್ಸಿ ಬ್ರೌನ್, ನಶ್ರಾ ಸಂಧು ಮತ್ತು ಓಶದಿ ರಣಸಿಂಗ್ ಅವರು ಪ್ರಗತಿಯತ್ತ ಸಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications