
ಡ್ಯುನೆಡಿನ್‌ನ ಯೂನಿವರ್ಸಿಟಿ ಓವಲ್‌ನಲ್ಲಿ ನಡೆದ ಐಸಿಸಿ ಮಹಿಳೆಯರ ವಿಶ್ವಕಪ್‌ನ 5ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಆತಿಥೇಯ ನ್ಯೂಜಿಲೆಂಡ್ ವನಿತೆಯರು ಸುಲಭ ಗೆಲುವು ಸಾಧಿಸಿದ್ದಾರೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದ್ದ ನ್ಯೂಜಿಲೆಂಡ್‌ಗೆ ಮಳೆ ಅಡ್ಡಿಯಾಯಿತು. ಡೆಕ್ವರ್ತ್ ಲೂಹಿಸ್ ನಿಯಮದಡಿಯಲ್ಲಿ 27 ಓವರ್‌ಗೆ ಪಂದ್ಯ ಸೀಮಿತಗೊಳಿಸಲಾಗಿತ್ತು.
ಎದುರಾಳಿಯನ್ನ ಸುಲಭವಾಗಿ ಆಲೌಟ್ ಮಾಡುವ ಯೋಚನೆ ಹೊಂದಿದ್ದ ಕಿವೀಸ್ ಎದುರಾಳಿಯನ್ನ 140 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
ಬಾಂಗ್ಲಾದೇಶ ಉತ್ತಮ ಆರಂಭ ಪಡೆದರೂ ಸಹ ಮಧ್ಯಮ ಕ್ರಮಾಂಕದ ವೈಫಲ್ಯವು ತಂಡಕ್ಕೆ ಹಿನ್ನಡೆಯಾಯಿತು. ಬಾಂಗ್ಲಾ ಪರ ಶಮಿಮಾ ಸುಲ್ತಾನ 33, ಫರ್ಗಾನ ಹಕ್ವಿ 52ರನ್‌ಗೆ ವಿಕೆಟ್ ಒಪ್ಪಿಸಿದ್ರು. ಈ ಇಬ್ಬರು ಮಹಿಳಾ ಬ್ಯಾಟರ್‌ಗಳು ವಿಕೆಟ್ ಒಪ್ಪಿಸಿದ ಬಳಿಕ ಯಾವೊಬ್ಬ ಆಟಗಾರ್ತಿಯು ಹೆಚ್ಚು ರನ್ ಕಲೆಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಪರಿಣಾಮ ಅಂತಿಮವಾಗಿ ಬಾಂಗ್ಲಾ ತಂಡ ನಿಗದಿತ 27 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 148ರನ್ ಗಳಿಸಿತು. ನ್ಯೂಜಿಲೆಂಡ್ ಪರ ಆಮಿ ಸ್ಯಾಟರ್ಥ್‌ವೈಟ್ ಮೂರು ವಿಕೆಟ್ ಕಬಳಿಸಿದ್ರು.
149 ರನ್‌ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಆರಂಭಿಕ ಆಘಾತ ಅನುಭವಿಸಿದರು ಸಹ, ಕೇವಲ 1 ವಿಕೆಟ್ ಕಳೆದುಕೊಂಡು ಗುರಿ ತಲುಪುವಲ್ಲಿ ಯಶಸ್ವಿಯಾಗಿದೆ. ನ್ಯೂಜಿಲೆಂಡ್ ನಾಯಕಿ ಸೂಫಿ ಡಿವೈನ್ 14ರನ್‌ಗೆ ವಿಕೆಟ್ ಒಪ್ಪಿಸಿದ ಬಳಿಕ 2ನೇ ವಿಕೆಟ್‌ಗೆ ಜೊತೆಯಾದ ಸೂಜ್ಹೀ ಬೈಟ್ಸ್ ಮತ್ತು ಅಮೆಲಿಯಾ ಕೆರ್ರ್ ಶತಕದ ಜೊತೆಯಾಟದ ಮೂಲಕ ತಂಡವನ್ನ ಗೆಲುವಿನ ದಡ ತಲುಪಿಸಿದ್ರು.
ಸೂಜ್ಹಿ ಬೈಟ್ಸ್ ಅಜೇಯ 79 ರನ್ ಕಲೆಹಾಕಿದ್ರೆ, ಅಮೆಲಿಯಾ ಕರ್ರ್ ಅಜೇಯ 47 ರನ್ ಕಲೆಹಾಕುವ ಮೂಲಕ ತಂಡಕ್ಕೆ ಆಧಾರವಾದ್ರು. ನ್ಯೂಜಿಲೆಂಡ್ ತಂಡವು ಕೇವಲ 20 ಓವರ್‌ಗಳಲ್ಲಿ ಗುರಿ ತಲುಪುವ ಮೂಲಕ 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.